ಸಂಪಾದಕೀಯ: ಒತ್ತಡ ತಂತ್ರ ಸಲ್ಲದು

Health
Published on

ಸಂಪಾದಕೀಯ: ತನ್ನ ಬೇಡಿಕೆಗಳನ್ನು ಒಪ್ಪದ ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನಸೋ ಇಚ್ಛೆ ತೆರಿಗೆ ಹೇರುತ್ತಿದ್ದಾರೆ ಮತ್ತು ಬೆದರಿಕೆ ದನಿಯಲ್ಲಿ ಮಾತನಾಡುತ್ತ, ರಾಜತಾಂತ್ರಿಕ ಸಂಬಂಧಗಳನ್ನು ಗೌಣವಾಗಿಸುತ್ತಿದ್ದಾರೆ. ತನ್ನ ದೇಶ ಪ್ರವೇಶಿಸುವ ಉತ್ಪನ್ನಗಳ ಮೇಲೆ ಹೆಚ್ಚಿನ ಆಮದು ಸುಂಕ ಹೇರುತ್ತಿರುವ ಅಮೆರಿಕ ಸರ್ಕಾರದ ನೀತಿಗಳ ವಿರುದ್ಧ ಕೆನಡಾ ಸರ್ಕಾರ ಜಾಹೀರಾತು ಪ್ರಕಟಿಸಿದ್ದಕ್ಕೆ, ಕೆನಡಾದೊಂದಿಗಿನ ಎಲ್ಲ ವ್ಯಾಪಾರ ಒಪ್ಪಂದಗಳನ್ನು ರದ್ದುಪಡಿಸಿ ಆದೇಶಿಸಿದ್ದಾರೆ. ಅಮೆರಿಕಕ್ಕೆ ಕೆನಡಾದಿಂದ 25 ಸಾವಿರ ಕೋಟಿ ರೂ. ಮೌಲ್ಯದ ವಸ್ತುಗಳು ರಫ್ತಾಗುತ್ತಿವೆ. ಅಮೆರಿಕದ ಅರ್ತಾಕ ಸುಂಕದ ವಿರುದ್ಧ ಜನಜಾಗೃತಿ ಅಭಿಯಾನ ನಿಲ್ಲದು ಎಂದು ಅಂಟಾರಿಯೊದ ಪ್ರಧಾನಿ ಡೌಗ್ ಫೋರ್ಡ್ ಸ್ಪಷ್ಟಪಡಿಸಿದ್ದಾರೆ.

‘ಜಾಹೀರಾತು ಪ್ರಸಾರ ಮಾಡಿ ಉದ್ಧಟತನ ಪ್ರದರ್ಶಿಸಿರುವ ಕೆನಡಾದೊಂದಿಗೆ ಎಲ್ಲ ವ್ಯಾಪಾರ ಒಪ್ಪಂದ ರದ್ದುಪಡಿಸಲು ಆದೇಶಿಸಲಾಗಿದೆ. ಸುಂಕ ಹೇರಿಕೆಯು ಅಮೆರಿಕದ ಸುಪ್ರೀಂ ಕೋರ್ಟ್​ನ ಆದೇಶವಾಗಿದೆ. ಅದನ್ನು ನಾನು ಪಾಲಿಸುತ್ತಿದ್ದೇನೆ’ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಶೀತ ಬಂದಿದಕ್ಕೆ ಮೂಗನ್ನೇ ಕೊಯ್ದುಕೊಳ್ಳುವಂಥ ಅವಿವೇಕಿತನದ ನಡೆ ಎಂದರೆ ಅತಿಶಯೋಕ್ತಿಯೇನಲ್ಲ. ಎಲ್ಲವೂ ತಮ್ಮಿಚ್ಛೆಯಂತೆ ನಡೆಯಬೇಕು ಮತ್ತು ವಿಶ್ವದ ಇತರ ಎಲ್ಲ ರಾಷ್ಟ್ರಗಳು ಅಮೆರಿಕದ ಹಿತವನ್ನು ಕಾಪಾಡಬೇಕು ಎಂಬ ಟ್ರಂಪ್ ಚಿಂತನಾಲಹರಿಯಲ್ಲೇ ಸಮಸ್ಯೆ ಇದೆ. ಹಾಗಾಗಿಯೇ ಟ್ರಂಪ್ ಪದೇಪದೇ ತಪು್ಪ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಜಾಗತಿಕ ಮಟ್ಟದಲ್ಲಿ ಹಲವು ರಂಗಗಳು ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂಬುದು ಕಹಿವಾಸ್ತವ.

ಭಾರತ ಕೂಡ ರಷ್ಯಾದಿಂದ ಕಚ್ಚಾ ತೈಲ ಖರೀದಿ ನಿಲ್ಲಿಸಬೇಕು ಎಂದು ಟ್ರಂಪ್ ಪದೇಪದೇ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ‘ರಷ್ಯಾದಿಂದ ಭಾರತ ತೈಲ ಖರೀದಿಯನ್ನು ನಿಲ್ಲಿಸಲಿದೆ’ ಎಂದು ಟ್ರಂಪ್ ಏಕಪಕ್ಷೀಯವಾಗಿ ಘೋಷಿಸಿದ್ದು, ಟ್ರಂಪ್ ಹೇಳಿಕೆಯನ್ನು ಈಗಾಗಲೇ ಭಾರತದ ವಿದೇಶಾಂಗ ಇಲಾಖೆ ಅಲ್ಲಗಳೆದಿದೆ. ಟ್ರಂಪ್ ಒತ್ತಡ ತಂತ್ರಕ್ಕೆ ಶುಕ್ರವಾರ ತಕ್ಕ ಪ್ರತ್ಯುತ್ತರ ನೀಡಿರುವ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ‘ಅಮೆರಿಕ ತಲೆಗೆ ಬಂದೂಕು ಇಟ್ಟೋ ಅಥವಾ ಅವಸರದಲ್ಲೋ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ವ್ಯಾಪಾರ ಒಪ್ಪಂದವನ್ನು ದೂರಗಾಮಿ ವಿಚಾರಧಾರೆಗಳೊಂದಿಗೆ ಯಾವಾಗಲೂ ಅವಲೋಕಿಸಬೇಕು. ವ್ಯಾಪಾರ ಎನ್ನುವುದು ಅವಸರ ಮತ್ತು ಒತ್ತಡದಲ್ಲಿ ಮಾಡುವಂಥದ್ದಲ್ಲ. ಹಾಗೆಯೇ ಭಾರತವು ಅಧಿಕ ಬೆಲೆ ಸಿಗುವ ಹೊಸ ಮಾರುಕಟ್ಟೆಯತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂದು ಗೋಯಲ್ ಹೇಳಿದ್ದಾರೆ.

ರಷ್ಯಾದ ರೊಸ್ನೆಫ್ಟ್ ಮತ್ತು ಲುಕಾಯಿಲ್ ತೈಲ ಕಂಪನಿಗಳ ಮೇಲೆ ಅಮೆರಿಕ ಈಗಾಗಲೇ ನಿರ್ಬಂಧ ವಿಧಿಸಿದೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಚೀನಾ ಮೇಲೂ ಒತ್ತಡ ಹೇರುತ್ತಿದೆ. ಕೆನಡಾದೊಂದಿಗೆ ವ್ಯಾಪಾರ ಒಪ್ಪಂದ ರದ್ದುಗೊಳಿಸಿದೆ. ಟ್ರಂಪ್ ಸಾಗುತ್ತಿರುವ ವೇಗ ಮತ್ತು ಅವಸರವನ್ನು ನೋಡಿದರೆ ಇದರಿಂದ ವ್ಯತಿರಿಕ್ತ ಪರಿಣಾಮಗಳೇ ಸಂಭವಿಸುತ್ತವೆ ಎಂಬುದು ಸ್ಪಷ್ಟ. ಹಾಗಾಗಿಯೇ, ಟ್ರಂಪ್ ವಿರುದ್ಧ ಅಮೆರಿಕದಲ್ಲೇ ‘ನೋ ಕಿಂಗ್ಸ್’ ಹೆಸರಿನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಲಕ್ಷಾಂತರ ಜನರು ಬೀದಿಗಳಿದು ಟ್ರಂಪ್ ನಿರ್ಧಾರಗಳನ್ನು ವಿರೋಧಿಸಿದ್ದಾರೆ. ಆದರೆ, ಟ್ರಂಪ್ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವರ ಈ ಧೋರಣೆಯೇ ಮುಂದೆ ಇನ್ನಷ್ಟು ಅಧ್ವಾನ ಸೃಷ್ಟಿಸಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಅದೇನಿದ್ದರೂ, ಭಾರತ ಟ್ರಂಪ್ ಬೆದರಿಕೆಗೆ ಮಣಿಯದೆ ತನ್ನ ಉತ್ಪನ್ನಗಳಿಗಾಗಿ ಪರ್ಯಾಯ ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಿರುವುದು ಮತ್ತು ಇತರ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net