ಸಂಪಾದಕೀಯ| ಸುರಕ್ಷಾ ಕ್ರಮಗಳು ಹೆಚ್ಚಲಿ

Trekking
Published on

ಡಿಸೆಂಬರ್ 24ರಂದು ಸ್ನೇಹಿತನೊಂದಿಗೆ ಸಾವನದುರ್ಗ ಚಾರಣಕ್ಕೆ ಬಂದು ನಾಪತ್ತೆಯಾಗಿದ್ದ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ, ಉತ್ತರ ಪ್ರದೇಶ ಮೂಲದ ಗಗನ್ ದೀಪ್ ಸಿಂಗ್ ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ. ಬೆಟ್ಟದ ಹಿಂಭಾಗ ಎಮ್ಮೆಬೀಳು ಎಂಬ ಅಪಾಯಕಾರಿ ಸ್ಥಳದಲ್ಲಿ ಬೆಟ್ಟದಿಂದ ಇಳಿಯುವ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಚಾರಣಕ್ಕೆ ಹೋದವರು ಸಾವಿಗೀಡಾಗುತ್ತಿರುವ, ನಾಪತ್ತೆಯಾಗುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿರುವುದು ಕಳವಳಕಾರಿ. ವಾರದಿಂದೀಚೆಗೆ ರಾಮನಗರ ಜಿಲ್ಲೆಯ ಎರಡು ಬೆಟ್ಟ ಪ್ರದೇಶಗಳಲ್ಲಿ ಚಾರಣದ ವೇಳೆ ಹಾದಿ ತಪ್ಪಿದ್ದ ಒಟ್ಟು ಏಳು ಮಂದಿಯನ್ನು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ. ಹಂದಿಗೊಂದಿ ಬೆಟ್ಟಕ್ಕೆ ಚಾರಣಕ್ಕೆಂದು ಬಂದು, ದಾರಿ ತಪ್ಪಿದ್ದ ಬೆಂಗಳೂರಿನ ಆರು ಯುವತಿಯರನ್ನು ರಕ್ಷಿಸಲಾಗಿದೆ.

ಹವ್ಯಾಸದ ಭಾಗವಾಗಿ ಚಾರಣ ಕೈಗೊಳ್ಳುವುದು ತಪ್ಪೇನೂ ಅಲ್ಲ. ಆದರೆ, ಸೂಕ್ತ ಮಾಹಿತಿ ಇಲ್ಲದೆ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೆ, ಭೌಗೋಳಿಕ ಪರಿಸರವನ್ನು ಅರಿಯದೆ ಚಾರಣ ಕೈಗೊಳ್ಳುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಮುಖ್ಯವಾಗಿ, ಈ ವಿಷಯದಲ್ಲಿ ನಿಯಮಗಳು ಪಾಲನೆಯಾಗುತ್ತಿಲ್ಲ. ರಾಮನಗರ ಜಿಲ್ಲೆಯಲ್ಲಿ ಮಾಗಡಿಯ ಸಾವನದುರ್ಗ ಮತ್ತು ರಾಮನಗರದ ರಾಮದೇವರ ಬೆಟ್ಟದಲ್ಲಿ ಚಾರಣ ಕೈಗೊಳ್ಳುವ ಮುಂಚೆ ಪ್ರವಾಸೋದ್ಯಮ ಇಲಾಖೆಯ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿಸಬೇಕೆಂಬ ನಿಯಮವಿದೆ. ಆದರೆ, ಬಹುತೇಕರು ಇದನ್ನು ಪಾಲಿಸುತ್ತಿಲ್ಲ. ಹಾಗಾಗಿ, ಯಾರೆಲ್ಲ ಚಾರಣಕ್ಕೆ ಬಂದಿದ್ದಾರೆ, ಅವರ ಸಂಖ್ಯೆ ಎಷ್ಟು, ಎಲ್ಲಿಂದ ಬಂದಿದ್ದಾರೆ ಎಂಬ ಮಾಹಿತಿ ಅರಣ್ಯ ಇಲಾಖೆಗೆ ದೊರೆಯುವುದೇ ಇಲ್ಲ. ಯುವಕರು-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಚಾರಣ ಕೈಗೊಳ್ಳುತ್ತಾರೆ. ಆದರೆ, ಗುಂಪಿನಲ್ಲಿ ಅತಿ ಉತ್ಸಾಹದಿಂದ ನಿಗದಿತ ಮಾರ್ಗ ಬಿಟ್ಟು ಅಪಾಯಕಾರಿ ಮಾರ್ಗಗಳಿಗೆ ತೆರಳುವವರೂ ಇದ್ದಾರೆ. ದಟ್ಟ ಅರಣ್ಯದಲ್ಲಿ ಒಮ್ಮೆ ಹಾದಿ ತಪ್ಪಿದರೆ ಅಂಥವರನ್ನು ಪತ್ತೆ ಮಾಡುವುದು ಪ್ರಯಾಸದ ಕೆಲಸವೇ ಸರಿ. ಚಾರಣವಿರಲಿ, ಇನ್ನಿತರ ಪ್ರವಾಸವೇ ಇರಲಿ, ಅದಕ್ಕೆ ಸೂಕ್ತ ಯೋಜನೆ ಬೇಕು.

ಪ್ರಾಣಕ್ಕೆ ಕುತ್ತು ಬರದಂತೆ, ಇತರ ಅಪಾಯಕ್ಕೆ ಎಡೆಮಾಡಿಕೊಡದಂತೆ ಎಚ್ಚರದೊಂದಿಗೆ ಸಾಗಬೇಕು. ಈ ನಿಟ್ಟಿನಲ್ಲಿ ಚಾರಣಪ್ರಿಯರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ್ದು ಅಗತ್ಯ. ಅಲ್ಲದೆ, ಚಾರಣ ಪ್ರಾರಂಭವಾಗುವ ಕೇಂದ್ರಗಳಲ್ಲಿ ನೋಂದಣಿ, ಸುರಕ್ಷಾ ಕ್ರಮವನ್ನು ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳ ಕಡೆಯಿಂದ ಬಿಗಿ ಮಾಡುವುದು ಅನಿವಾರ್ಯ. ಅಹಿತಕರ ಘಟನೆಗಳಿಂದ ಪ್ರವಾಸೋದ್ಯಮದ ಆಶಯಕ್ಕೂ ಹಿನ್ನಡೆಯಾದಂತಾಗುತ್ತದೆ. ಆಯಾ ಪ್ರದೇಶದ ಭೌಗೋಳಿಕ ಮಾಹಿತಿ, ಹೋಗುವ ಮತ್ತು ವಾಪಸ್ ಬರುವ ಮಾರ್ಗದ ನಕ್ಷೆ, ಸಮಸ್ಯೆ ಬಂದಲ್ಲಿ ಸಂರ್ಪಸಬೇಕಾದವರ ದೂರವಾಣಿ ಸಂಖ್ಯೆ, ಇದೆಲ್ಲವನ್ನು ಚಾರಣದ ಆರಂಭದಲ್ಲೇ ಒದಗಿಸಿದರೆ ಭವಿಷ್ಯದಲ್ಲಿ ಇಂಥ ಅನಾಹುತಗಳನ್ನು ತಡೆಯಬಹುದು. ಸ್ಥಳೀಯಾಡಳಿತಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾಳಜಿ ತೋರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net