ಸಂಪಾದಕೀಯ: ನಿಯಂತ್ರಣ ಅಗತ್ಯ

edite
Published on

ದಿನನಿತ್ಯ ಬಳಕೆಯ ಉತ್ಪನ್ನಗಳಲ್ಲಿ ಕಲಬೆರಕೆ ಅಥವಾ ಹಾನಿಕಾರಕ ಅಂಶಗಳ ಸೇರ್ಪಡೆ ಆರೋಗ್ಯದ ದೃಷ್ಟಿಯಲ್ಲಿ ಮಾರಕವಾಗಿ ಪರಿಣಮಿಸಲಿದೆ. ಈ ಬಗ್ಗೆ ಕಾಲಕಾಲಕ್ಕೆ ಸಂಶೋಧಕರು, ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಬದಲಾಗಿ, ಮತ್ತಷ್ಟು ಹದಗೆಟ್ಟಿದ್ದು, ದಿನಬಳಕೆಯ ವಸ್ತುಗಳನ್ನು, ಖಾದ್ಯ ಪದಾರ್ಥಗಳನ್ನು ಅನುಮಾನದಿಂದಲೇ ನೋಡುವಂಥ ಸ್ಥಿತಿ ಸೃಷ್ಟಿಯಾಗಿದೆ.

ಮತ್ತೊಂದು ಹೊಸ ವರದಿ ಇದೇ ಬಗೆಯ ಎಚ್ಚರಿಕೆ ಗಂಟೆಯನ್ನು ಮೊಳಗಿಸಿದೆ. ಫುಡ್ ಪ್ಯಾಕೇಜಿಂಗ್​ಗೆ ಬಳಸುವ ಕಾಗದ, ಕಾರ್ಡ್​ಬೋರ್ಡ್ ಮುಂತಾದವುಗಳಲ್ಲಿ ಸ್ತನ ಕ್ಯಾನ್ಸರ್​ಗೆ ಕಾರಣವಾಗುವ 200ಕ್ಕೂ ಹೆಚ್ಚು ರಾಸಾಯನಿಕಗಳು ಇದ್ದು, ಇವು ಈವರೆಗಿನ ಬಳಕೆಯಿಂದಾಗಿ ಈಗಾಗಲೇ ಮನುಷ್ಯರ ದೇಹವನ್ನು ಪ್ರವೇಶಿಸಿರಬಹುದು ಎಂದು ‘ಫ್ರಂಟಿಯರ್ಸ್ ಇನ್ ಟಾಕ್ಸಿಕಾಲಜಿ’ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ತಿಳಿಸಿದೆ. ಇದೇ ರೀತಿ, ಚಹಾ-ಕಾಫಿಗೆ ಬಳಸುವ ಕಾಗದದ ಕಪ್​ಗಳು ಎಷ್ಟು ಹಾನಿಕರ ಎಂಬುದನ್ನು ಮತ್ತೊಂದು ವರದಿ ತಿಳಿಸಿತ್ತು. ಪ್ಲಾಸ್ಟಿಕ್​ನಲ್ಲಿ 143 ಮತ್ತು ಫುಡ್ ಪ್ಯಾಕೇಜಿಂಗ್​ಗೆ ಬಳಸುವ ಪೇಪರ್ ಅಥವಾ ಕಾರ್ಡ್​ಬೋರ್ಡ್​ನಲ್ಲಿ 89 ಸೇರಿದಂತೆ ಆಹಾರ ಸಂಪರ್ಕ ವಸ್ತುಗಳಲ್ಲಿ (ಎಫ್​ಸಿಎಂ) 189 ಅಪಾಯಕಾರಿ ಕಾರ್ಸಿನೋಜೆನ್ ಪತ್ತೆಯಾಗಿವೆ. ಈ ಅಧ್ಯಯನ ವರದಿಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರ ವಹಿಸಬೇಕಾದುದು ಒಂದೆಡೆಯಾದರೆ, ಇವುಗಳ ಬಳಕೆಯ ನಿಯಂತ್ರಣದತ್ತ ಸರ್ಕಾರದ ಆರೋಗ್ಯ ಇಲಾಖೆ ಕೂಡ ಗಮನ ಹರಿಸಬೇಕು.

ಭಾರತದಲ್ಲಿ ಸರಾಸರಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್​ಗೆ ಗುರಿಯಾಗುತ್ತಿದ್ದಾರೆ ಎಂಬ ಅಂಶವನ್ನು ಇಲ್ಲಿ ಗಮನಿಸಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಸ್ತನ ಕ್ಯಾನ್ಸರ್ ಮಾತ್ರವಲ್ಲದೆ ಎಲ್ಲ ಬಗೆಯ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಈ ಬಗೆಯ ರಾಸಾಯನಿಕಗಳೇ ಕಾರಣವಾಗುತ್ತಿವೆ ಎಂಬುದು ಆತಂಕಕಾರಿ ಸಂಗತಿ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 2022ರಲ್ಲಿ 23 ಲಕ್ಷ ಮಹಿಳೆಯರು ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದು, ಜಾಗತಿಕವಾಗಿ 6.70 ಲಕ್ಷ ಮಹಿಳೆಯರು ಮೃತಪಟ್ಟಿದ್ದಾರೆ. ದೈನಂದಿನ ಉತ್ಪನ್ನಗಳಲ್ಲಿ ಇಂಥ ರಾಸಾಯನಿಕಗಳ ಬಳಕೆಯನ್ನು ನಿಲ್ಲಿಸದಿದ್ದರೆ ಬಹುದೊಡ್ಡ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ನಾವು ತಿನ್ನುವ ಆಹಾರವೇ ವಿಷವಾದರೆ, ಬಳಸುವ ಉತ್ಪನ್ನಗಳೇ ಆರೋಗ್ಯವನ್ನು ಹದಗೆಡಿಸಿದರೆ ತಥಾಕಥಿತ ಅಭಿವೃದ್ಧಿಗೆ ಏನು ಅರ್ಥ? ಈ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಜನಜಾಗೃತಿಯ ಅವಶ್ಯಕತೆಯೂ ಇದೆ.

ಏಕೆಂದರೆ, ಇಂಥ ಸಂಗತಿಗಳ ಬಗ್ಗೆ ಜನಸಾಮಾನ್ಯರಲ್ಲಿ ಮಾಹಿತಿಯ ಕೊರತೆ ಇದ್ದು, ಅಪಾಯಕಾರಿ ರಾಸಾಯನಿಕ ಹೊಂದಿರುವ ಉತ್ಪನ್ನಗಳ ವಿರುದ್ಧ ಜಾಗೃತಿಯ ಆಂದೋಲನವನ್ನೇ ನಡೆಸಬೇಕಿದೆ. ಅಲ್ಲದೆ, ಸರ್ಕಾರದ ಆಹಾರ ಸುರಕ್ಷಾ ಮಂಡಳಿಗಳು ಅಥವಾ ಆರೋಗ್ಯ ಇಲಾಖೆಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದ್ದು, ಜನರ ಆರೋಗ್ಯಕ್ಕೆ ಧಕ್ಕೆಯಾಗುವ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕಿದೆ ಮತ್ತು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುವ ಉತ್ಪನ್ನಗಳನ್ನು ನಿಷೇಧಿಸಬೇಕಿದೆ. ಈಗಾಗಲೇ ಹಲವು ಬಗೆಯ ವೈರಸ್​ಗಳು ಮನುಷ್ಯನ ಆರೋಗ್ಯವನ್ನು ಹಾಳುಗೆಡವುತ್ತಿದ್ದು ಕಲಬೆರಕೆ, ಕಳಪೆ ಆಹಾರ ಮತ್ತು ರೋಗಕಾರಕ ರಾಸಾಯನಿಕಗಳ ಬಳಕೆ ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಬಹುದು. ಹಾಗಾಗುವ ಮುನ್ನ ಎಚ್ಚೆತ್ತುಕೊಳ್ಳುವುದು ಅವಶ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net