MUDA scam | ದ್ವೇಷರಾಜಕಾರಣಕ್ಕೆ ಹೆದರಲ್ಲ, ರಾಜೀನಾಮೆಯನ್ನೂ ನೀಡಲ್ಲ: ಸಿಎಂ ಸಿದ್ದರಾಮಯ್ಯ

dks
Published on

ಬೆಂಗಳೂರು: ನಾನು ದ್ವೇಷರಾಜಕಾರಣಕ್ಕೆ ಹೆದರಲ್ಲ, ರಾಜೀನಾಮೆಯನ್ನೂ ನೀಡಲ್ಲ. ನಾನು ಹೋರಾಟದಿಂದ ಬಂದವನು. ಈ ಎಲ್ಲಾ ಷಡ್ಯಂತ್ರವನ್ನು ಎದುರಿಸಿಯೇ ಸೋಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸ್ಥಾಪಿಸಿರುವ ರಾಜ್ಯದ ಪ್ರಪ್ರಥಮ ನೈಸರ್ಗಿಕ ಅನಿಲ ಆಧಾರಿತ 370 ಮೆ.ವ್ಯಾ ಸಾಮರ್ಥ್ಯದ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ವಿಪಕ್ಷ ನಾಯಕರೇ, ನಾನು ರಾಜೀನಾಮೆ ಕೊಡ್ತೀನಿ ಅಂತ ಕಾಯ್ಕೊಂಡು ಕೂತಿದ್ದೀರಾ? ಯಾವ ತಪ್ಪನ್ನೂ ಮಾಡದ ನನ್ನನ್ನು ಷಡ್ಯಂತ್ರದಿಂದ ಇಳಿಸಲು ನೋಡುತ್ತಿದ್ದೀರ. ಇದು ಅಸಾಧ್ಯ. ನಿಮ್ಮನ್ನು ರಾಜಕೀಯವಾಗಿ ಎದುರಿಸಿಯೂ ಗೆಲ್ತೀನಿ ಎಂದು ವಿಪಕ್ಷ ನಾಯಕ ಆರ್. ಅಶೋಕ್​ಗೆ ತಿರುಗೇಟು ನೀಡಿದರು.

ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗುವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ

ರಾಜ್ಯದ ಆರ್ಥಿಕ - ಸಾಮಾಜಿಕ ಪ್ರಗತಿಗೆ ವಿದ್ಯುತ್ ಉತ್ಪಾದನೆಯಲ್ಲಿ ನಾವು ಸ್ವಾವಲಂಬಿಗಳಾಗಬೇಕು. ಕೃಷಿ, ಕೈಗಾರಿಕೆಗಳ ಬೆಳವಣಿಗೆ ಆದರೆ ಮಾತ್ರ ಜಿಎಸ್‌ಡಿಪಿ ಬೆಳವಣಿಗೆ ಸಾಧ್ಯ. ಕೃಷಿ ಮತ್ತು ಕೈಗಾರಿಕೆ ಹಾಗೂ ವಸತಿಗೆ ಅಪಾರ ಪ್ರಮಾಣದ ವಿದ್ಯುತ್ ಅಗತ್ಯ. ಕೃಷಿ, ಕೈಗಾರಿಕೆಗಳ ಅಭಿವೃದ್ಧಿಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಉದ್ಯೋಗದಿಂದ ಜಿಡಿಪಿ ಪ್ರಗತಿಯಾಗುತ್ತದೆ. ಆದ್ದರಿಂದ ನಾವು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬಿಗಳಾಗುವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಅದರ ಭಾಗವಾಗಿಯೇ ಈ ವಿದ್ಯುತ್ ಉತ್ಪಾದನಾ ತಯಾರಿಕಾ ಘಟಕ ಲೋಕಾರ್ಪಣೆ ಮಾಡಿದ್ದೇನೆ ಎಂದು ಹೇಳಿದರು.

1,500 ಕೋಟಿ ರೂ. ಮೌಲ್ಯದ ವಿದ್ಯುತ್ ಮಾರಾಟ ಮಾಡಿದ್ದೇವೆ

1,500 ಕೋಟಿ ರೂ. ಮೌಲ್ಯದ ವಿದ್ಯುತ್ ಅನ್ನು ನಾವು ಹೊರ ರಾಜ್ಯಕ್ಕೆ ಮಾರಾಟ ಮಾಡಿದ್ದೇವೆ. ಕಳೆದ ವರ್ಷ ಮಳೆ ಬರಲಿಲ್ಲ, ಬರಗಾಲ ಇತ್ತು. ಬರಗಾಲದಲ್ಲೂ ಕೂಡ ನಾವು ಅಗತ್ಯ ವಿದ್ಯುತ್ ಪೂರೈಸಿದೆವು. 2,030 ಕ್ಕೆ 60,000 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುವ ಗುರಿ ನಮಗಿದೆ. ಇದನ್ನು ನಾನು ಬಜೆಟ್ ನಲ್ಲೇ ಘೋಷಿಸಿದ್ದೇನೆ. ವರ್ಷದಿಂದ ವರ್ಷಕ್ಕೆ ವಿದ್ಯುತ್ ಬಳಕೆ, ಬೇಡಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ನಾವು ಉತ್ಪಾದನೆ ಹೆಚ್ಚಿಸಿ ಸ್ವಾವಲಂಬಿ ಆಗಿದ್ದೇವೆ. ನಾವು ಹೊರಗಡೆಗೆ ವಿದ್ಯುತ್ ಮಾರಾಟ ಮಾಡುವ ಮಟ್ಟಕ್ಕೆ ಪ್ರಗತಿ ಸಾಧಿಸಿದ್ದೇವೆ ಎಂದರು.

ಎಲ್ಲಾ ಕಾರ್ಮಿಕರಿಗೆ 5,000 ರೂಪಾಯಿ ಬೋನಸ್: ಯಲಹಂಕದ ವಿದ್ಯುತ್ ಸ್ಥಾವರಕ್ಕೆ ನಾನೇ ಶಂಕು ಸ್ಥಾಪನೆ ಮಾಡಿದ್ದೆ. ಈಗ ನಾನೇ ಇದನ್ನು ಲೋಕಾರ್ಪಣೆ ಕೂಡ ಮಾಡಿದ್ದೇನೆ ಎನ್ನುವುದು ಇನ್ನಷ್ಟು ಸಂತಸದ ವಿಚಾರ. ಯಲಹಂಕ ವಿದ್ಯುತ್ ಸ್ಥಾವರದ ಆರಂಭಕ್ಕೆ ಶ್ರಮಿಸಿದ ಎಲ್ಲಾ ಕಾರ್ಮಿಕರಿಗೆ 5,000 ರೂಪಾಯಿ ಬೋನಸ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net