ಸಂಪಾದಕೀಯ| ಹೂಡಿಕೆದಾರರಲ್ಲಿ ಆತಂಕ

share market
Published on

ಅದಾನಿ ಗ್ರೂಪ್​ನ ಕೆಲ ಕಂಪನಿಗಳ ಷೇರುಗಳ ಮೌಲ್ಯ ಕುಸಿದಿರುವುದು ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡಿದ್ದು, ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಮೆರಿಕದ ಹಿಂಡನ್​ಬರ್ಗ್ ಸಂಸ್ಥೆ ಕೆಲವು ತಿಂಗಳ ಹಿಂದೆ ಮಾಡಿದ ಆರೋಪಗಳಿಂದ ತೀವ್ರ ಆಘಾತಕ್ಕೀಡಾಗಿದ್ದ ಗೌತಮ್ ಅದಾನಿ ನೇತೃತ್ವದ ಉದ್ಯಮ ಸಮೂಹ ಈಗ ಅದೇ ರೀತಿಯ ಮತ್ತೊಂದು ಭಾರಿ ಆರೋಪಕ್ಕೆ ಒಳಗಾಗಿದೆ. ಇದು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.

ಷೇರುಗಳಲ್ಲಿ ಹೂಡಿಕೆಯನ್ನು ಎರಡು ರೀತಿ ನೋಡಬಹುದು. ಲಾಭಾಂಶ ಉದ್ದೇಶಕ್ಕೆ ಹೂಡಿಕೆ ಮಾಡುವುದು ಒಂದು ವರ್ಗವಾದರೆ, ಇನ್​ವೆಸ್ಟ್ ರೀತಿ ಹೂಡಿಕೆ ಮಾಡುವ ಮತ್ತೊಂದು ವರ್ಗವನ್ನು ಕಾಣಬಹುದು. ನಿರ್ದಿಷ್ಟ ಉದ್ದೇಶ ಇಟ್ಟುಕೊಂಡು ಲಾಭಾಂಶ ಲೆಕ್ಕಚಾರದಲ್ಲಿ ಹೂಡಿಕೆ ಮಾಡುವವರಲ್ಲಿ ಹಿರಿಯ ನಾಗರಿಕರು, ವೇತನದಾರರ ಸಂಖ್ಯೆ ಹೆಚ್ಚಿದೆ. ಷೇರುಪೇಟೆಯಲ್ಲಿ ಈ ರೀತಿಯ ಏರುಪೇರುಗಳಾದಾಗ ನಿರ್ದಿಷ್ಟ ಲಾಭಾಂಶದ ನಿರೀಕ್ಷೆಯೊಂದಿಗೆ ಹೂಡಿಕೆ ಮಾಡಿದವರಿಗೆ ಲೆಕ್ಕ ತಪ್ಪಲಿದೆ. ಹಿಂಡನ್​ಬರ್ಗ್ ಆರೋಪದಿಂದ ಅದಾನಿ ಗ್ರೂಪ್​ನ ಷೇರು ಮೌಲ್ಯ ಕುಸಿತ ಕಂಡು, ಅಂದಾಜು 150 ಶತಕೋಟಿ ಡಾಲರ್​ನಷ್ಟು ಸಂಪತ್ತು ನಷ್ಟ ಹೊಂದಿತ್ತು. ಗುರುವಾರ ಮತ್ತೆ ಅದಾನಿ ಸಮೂಹದ ಷೇರುಗಳ ಬೆಲೆಗಳಲ್ಲಿ ಕುಸಿತ ದಾಖಲಾಗಿದೆ. ಅದಾನಿ ಗ್ರೀನ್ ಎನರ್ಜಿ ಕಂಪನಿಯ ಷೇರುಗಳ ಮೌಲ್ಯ ಶೇಕಡಾ 4.43ರಷ್ಟು ಕುಸಿತವಾಗಿ ಒಂದು ಷೇರಿನ ಬೆಲೆ 927.65 ರೂಪಾಯಿ ಆಗಿದೆ. ಇದರ ಮಾರುಕಟ್ಟೆ ಮೌಲ್ಯ ಮೊತ್ತ 1.47 ಲಕ್ಷ ಕೋಟಿ ರೂಪಾಯಿ ಆಗಿದೆ. ಇದು ಸಹಜವಾಗಿಯೇ ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸದ್ಯಕ್ಕೆ ಅದಾನಿ ಷೇರು ಉದಾಹರಣೆಯಾದರೂ ಒಟ್ಟಾರೆಯಾಗಿ ಮಾರುಕಟ್ಟೆಯ ಮೇಲೆ ಇಂತಹ ಬೆಳವಣಿಗೆಗಳು ಆಘಾತಕಾರಿ ಪರಿಣಾಮ ಉಂಟು ಮಾಡುತ್ತವೆ. ಷೇರು ವಹಿವಾಟಿನಲ್ಲಿ ಹಣ ಕಳೆದುಕೊಂಡವರು ಆತ್ಮಹತ್ಯೆಗೆ ಶರಣಾಗುತ್ತಿರುವ ಉದಾಹರಣೆಗಳು ಸಾಕಷ್ಟು ವರದಿಯಾಗುತ್ತಿವೆ. ಷೇರುಪೇಟೆ ನಿಯಂತ್ರಣ ಪ್ರಾಧಿಕಾರ ಕಟ್ಟು ನಿಟ್ಟಿನ ನಿರ್ಧಾರಗಳ ಮೂಲಕ ಅನಾಹುತಗಳನ್ನು ತಡೆಯಬಹುದಾಗಿದೆ.

ಅದಾನಿ ಗ್ರೂಪ್ ಸೇರಿ ಕೆಲ ಕಂಪನಿಗಳಲ್ಲಿ ಏನು ನಡೆಯುತ್ತಿದೆ ಎಂಬ ಚಿತ್ರಣವನ್ನು ತೆರೆದಿಡಲು ಸೆಬಿ ವಿಫಲವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. 2014ರಲ್ಲಿ ಅದಾನಿ ಕಂಪನಿ ವಿರುದ್ದ ತನಿಖೆ ಕೈಗೊಂಡಾಗ ಸೆಬಿ ಸುಪ್ರಿಮ್ ಕೋರ್ಟ್​ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂಬ ಆರೋಪವೂ ಇದೆ.

ನವದೆಹಲಿಯಲ್ಲಿ ಜಿ20 ರಾಷ್ಟ್ರಗಳ ಶೃಂಗ ಸಭೆಗೆ ಬೆರಳೆಣಿಕೆ ದಿನಗಳಿದ್ದು, ಆರ್ಥಿಕ ಅಪರಾಧಿಗಳ ಸ್ವರ್ಗ ಎಂಬ ಹಣೆಪಟ್ಟಿಯನ್ನು ತೊಲಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲೇ ಅದಾನಿ ಗ್ರೂಪ್​ನ ಕಂಪನಿಗಳಲ್ಲಿನ ಅನಾಮಧೇಯ ಹೂಡಿಕೆಗಳು ಬೆಳಕಿಗೆ ಬರುತ್ತಿವೆ. ವಿದೇಶಿಯರ ಬೇನಾಮಿ ಹೂಡಿಕೆ ದೊಡ್ಡ ಪ್ರಮಾಣದಲ್ಲಿದ್ದು, ಈ ವ್ಯವಹಾರವನ್ನು ಕತ್ತಲೆಯಲ್ಲಿ ಇಡಲಾಗಿದೆ. ಬೇನಾಮಿ ಹೂಡಿಕೆ ಮೇಲೆ ಬೆಳಕು ಚೆಲ್ಲಬೇಕಾಗಿದೆ. ಹಿಂದಿನ ಸೆಬಿ ಅಧ್ಯಕ್ಷರೂ ಕೂಡ ತಮ್ಮ ಹೊಣೆಯನ್ನು ಸಮರ್ಪಕವಾಗಿ ನಿಭಾಯಿಸಲು ವಿಫಲರಾಗಿದ್ದಾರೆ. ಇದೆಲ್ಲದರ ಪರಿಣಾಮ ಅದಾನಿ ಗ್ರೂಪ್​ಗೆ ಸಂಬಂಧಿಸಿದ ಶೆಲ್ ಕಂಪನಿಗಳಲ್ಲಿನ ಭ್ರಷ್ಟಾಚಾರ ಹೆಚ್ಚುತ್ತಿದೆ. ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಮಾಡಿದರೆ ಮಾತ್ರ ವಾಸ್ತವ ಏನು ಎಂಬುದು ಬೆಳಕಿಗೆ ಬರಲಿದೆ ಎಂಬ ಕಾಂಗ್ರೆಸ್ ಪಕ್ಷದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net