ಹಿಂದಿಗಿಂತ ದುಬಾರಿಯಾದರೂ, ಐಪಿಎಲ್​ ದಾಖಲೆ ಸರಿಗಟ್ಟಲಿಲ್ಲ ಟೀಮ್​ ಇಂಡಿಯಾ ಪಂದ್ಯಗಳ ಮೌಲ್ಯ!

ipl india web
Published on

ಬೆಂಗಳೂರು: ಭಾರತದಲ್ಲಿ ಮುಂದಿನ 5 ವರ್ಷಗಳ ಕಾಲ ನಡೆಯಲಿರುವ ದ್ವಿಪಯ ಕ್ರಿಕೆಟ್​ ಸರಣಿಗಳ ನೇರಪ್ರಸಾರದ ಟಿವಿ ಮತ್ತು ಡಿಜಿಟಲ್​ ಹಕ್ಕುಗಳನ್ನು ಬಿಸಿಸಿಐ, ರಿಲಯನ್ಸ್​ ಸಮೂಹದ ಮಾಧ್ಯಮ ಸಂಸ್ಥೆ 'ವಯಾಕಾಮ್​18'ಗೆ ಒಟ್ಟು 5,963 ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಿದೆ. ಇದರಿಂದ ಟೀಮ್​ ಇಂಡಿಯಾದ ತವರಿನ ಪಂದ್ಯಗಳು ಈಗ 67.8 ಕೋಟಿ ರೂ. ಮೌಲ್ಯ ಪಡೆದುಕೊಂಡಿದೆ. ಇದು ಕಳೆದ 5 ವರ್ಷಗಳ ಒಪ್ಪಂದಕ್ಕಿಂತ ಶೇ. 12.92 ಅಂದರೆ 7.8 ಕೋಟಿ ರೂ. ಅಧಿಕವಾಗಿದೆ. ಆದರೂ ಐಪಿಎಲ್​ ದಾಖಲೆಯಿಂದ ಟೀಮ್​ ಇಂಡಿಯಾದ ಪಂದ್ಯಗಳು ದೂರವೇ ಉಳಿದಿವೆ.

ಕಳೆದ ವರ್ಷ ಐಪಿಎಲ್​ ಪ್ರಸಾರ ಹಕ್ಕು ಬರೋಬ್ಬರಿ 48,490 ಕೋಟಿ ರೂ.ಗಳಿಗೆ ಮಾರಾಟವಾಗಿತ್ತು. ಇದರನ್ವಯ ಪ್ರತಿ ಪಂದ್ಯದ ಮೌಲ್ಯ 118 ಕೋಟಿ ರೂ. ಆಗಿತ್ತು. ಇತ್ತ, ಟೀಮ್​ ಇಂಡಿಯಾದ ಪಂದ್ಯ ಮೌಲ್ಯ ಈ ಬಾರಿ 100 ಕೋಟಿ ರೂ. ದಾಟುವ ನಿರೀಕ್ಷೆ ಹುಸಿಯಾಗಿದ್ದು, ಐಪಿಎಲ್​ ಪಂದ್ಯಕ್ಕಿಂತ ಸರಿಸುಮಾರು ಅರ್ಧ ಮೌಲ್ಯ ಹೊಂದಿದೆ.

ಬಿಸಿಸಿಐ ಇದೇ ಮೊದಲ ಬಾರಿಗೆ ಟಿವಿ-ಡಿಜಿಟಲ್​ ಹಕ್ಕುಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಿದ್ದರೂ, ಎರಡೂ ವಯಾಕಾಮ್​18 ಪಾಲಾಗಿವೆ. ಡಿಜಿಟಲ್​ ಹಕ್ಕು 3,101 ಕೋಟಿ ರೂ.ಗಳಿಗೆ ಮತ್ತು ಟಿವಿ ಹಕ್ಕು 2,862 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ಇದರನ್ವಯ ಪ್ರತಿ ಪಂದ್ಯದ ಟಿವಿ ಪ್ರಸಾರ ಹಕ್ಕು 32.5 ಕೋಟಿ ರೂ. ಮತ್ತು ಡಿಜಿಟಲ್​ ಪ್ರಸಾರ ಹಕ್ಕು 35.3 ಕೋಟಿ ರೂ. ಮೌಲ್ಯ ಪಡೆದಿದೆ. ಬಿಸಿಸಿಐ 2018ರಲ್ಲಿ ಭಾರತ ತಂಡದ 5 ವರ್ಷಗಳ ಪ್ರಸಾರ ಹಕ್ಕನ್ನು ಸ್ಟಾರ್​ ಸ್ಪೋರ್ಟ್ಸ್​ಗೆ 6,138.1 ಕೋಟಿ ರೂ.ಗೆ (102 ಪಂದ್ಯ) ನೀಡಿತ್ತು. ಅಂದರೆ ಆಗಲೂ ಪ್ರತಿ ಪಂದ್ಯದ ಮೌಲ್ಯ 60.18 ಕೋಟಿ ರೂ. ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net