ಸುರಕ್ಷಾ ಕ್ರಮ ಅಗತ್ಯ; ಕಾರ್ಯಕ್ರಮ ಆಯೋಜಕರಿಗೆ ಇದು ದೊಡ್ಡ ಪಾಠ

Hathras Stampede
Published on

ಉತ್ತರ ಪ್ರದೇಶದ ಹಾಥರಸ್ ಜಿಲ್ಲೆಯ ಫುಲ್ರಾಯ್ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮವನ್ನು ಮುಗಿಸಿಕೊಂಡು ಸಾವಿರಾರು ಭಕ್ತರು ಮನೆಗೆ ತೆರಳುತ್ತಿದ್ದಾಗ ಭೀಕರ ಕಾಲ್ತುಳಿತ ಸಂಭವಿಸಿದೆ. ನೂರಕ್ಕೂ ಹೆಚ್ಚು ಜನ ಮೃತಪಟ್ಟು, ಹೆಚ್ಚೂ ಕಡಿಮೆ ಅಷ್ಟೇ ಸಂಖ್ಯೆಯ ಭಕ್ತರು ಗಾಯಗೊಂಡಿದ್ದಾರೆ. ಪ್ರಖ್ಯಾತ ಧಾರ್ವಿುಕ ಗುರು ಭೋಲೆ ಬಾಬಾ ಅಲಿಯಾಸ್ ನಾರಾಯಣ ಸಾಕರ್ ಹರಿ ಅವರ ಗೌರವಾರ್ಥ ಆಯೋಜಿಸಿದ್ದ ಕಾರ್ಯಕ್ರಮ ಇದು. ಸಣ್ಣ ಗ್ರಾಮದಲ್ಲಿ ಹಾಕಲಾಗಿದ್ದ ಪೆಂಡಾಲ್​ನಲ್ಲಿ ನಿರೀಕ್ಷೆಗೂ ಮೀರಿ ಸಾವಿರಾರು ಭಕ್ತರು ಸೇರಿದ್ದರು. ಮಧ್ಯಾಹ್ನ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಜನರು ಮನೆಗೆ ಹಿಂದಿರುಗಲು ಒಮ್ಮೆಗೇ ಅವಸರದಲ್ಲಿ ಹೆಬ್ಬಾಗಿಲಿಗೆ ಬರತೊಡಗಿದಾಗ ತೀವ್ರ ಜನದಟ್ಟಣೆ ಉಂಟಾಗಿದೆ. ಪರಿಣಾಮವಾಗಿ ಕೆಲವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ತಮಗೂ ಹಾಗೆಯೇ ಆಗಬಹುದು ಎಂಬ ಭಯದಲ್ಲಿ ಜನರು ಹೊರಹೋಗಲು ಇನ್ನಷ್ಟು ಅವಸರ ಮಾಡಿದ್ದಾರೆ. ಕೆಲವರು ಓಡತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಕೆಳಗೆ ಬೀಳುವವರು ಮಹಿಳೆಯರು, ವಯೋವೃದ್ಧರು ಮತ್ತು ಮಕ್ಕಳು. ಇಲ್ಲಿಯೂ ಅದೇ ರೀತಿ ಆಗಿದೆ. ಕೆಳಗೆ ಬಿದ್ದವರನ್ನು ತುಳಿದುಕೊಂಡೇ ಜನರು ಹೊರಹೋಗಲು ಮುಂದಾಗಿದ್ದಕ್ಕೆ ಜೀವಭಯ ಕಾರಣ. ಕಾಲ್ತುಳಿತದಿಂದಾಗಿ ಕೆಲವೇ ನಿಮಿಷಗಳಲ್ಲಿ ನೂರಾರು ಜನರು ಮೃತಪಟ್ಟು ಇಡೀ ಗ್ರಾಮ ಸ್ಮಶಾನದಂತಾಗಿದೆ.

ಸಾಮಾನ್ಯವಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂಬ ನಿರೀಕ್ಷೆ ಇದ್ದರೆ ಅಲ್ಲಿ ಅದಕ್ಕೆ ತಕ್ಕುದಾದ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ. ಆದರೆ ಸ್ಥಳೀಯ ಅಧಿಕಾರಿಗಳು ಹೇಳುವ ಪ್ರಕಾರ, ಇಷ್ಟು ಜನ ಸೇರುತ್ತಾರೆ ಎಂಬ ಅಂದಾಜು ಸ್ವತಃ ಆಯೋಜಕರಿಗೇ ಇರಲಿಲ್ಲ. ಹಾಗಾಗಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಭದ್ರತೆಗೆ ಎಷ್ಟು ಬೇಕೋ ಅಷ್ಟೇ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಿದ್ದರು. ಬಾಕಿ ಎಲ್ಲ ವ್ಯವಸ್ಥೆಗಳನ್ನು ಸತ್ಸಂಗದ ಸಂಘಟಕರೇ ಮಾಡಬೇಕಾಗಿತ್ತು ಎಂಬುದು ಸ್ಥಳೀಯ ಜಿಲ್ಲಾಧಿಕಾರಿಯ ಹೇಳಿಕೆ. ಆದರೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾರ್ಯಕ್ರಮ ನಡೆದಿದೆ. ಭಕ್ತರ ಸಂಖ್ಯೆಯನ್ನು ನೋಡಿದ ಬಳಿಕ, ಅಧಿಕಾರಿಗಳಿಗೆ ಅಲ್ಲಿ ತಕ್ಷಣವೇ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಅರಿವು ಆಗಬೇಕಾಗಿತ್ತು. ಈ ಹಿಂದೆ ದೇಶದ ಹಲವೆಡೆ ನಡೆದ ಘಟನೆಗಳ ಕಹಿ ಅನುಭವ ನೆನಪಾಗಬೇಕಾಗಿತ್ತು.

ಸಂಘಟಕರು ಕೂಡ ನಿಯಂತ್ರಣ ಮೀರಿ ಭಕ್ತರು ಆಗಮಿಸಿದ್ದನ್ನು ಸ್ಥಳೀಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಪ್ಪದೇ ತರಬೇಕಿತ್ತು. ಕೊನೇ ಪಕ್ಷ ಅಲ್ಲಿ ಭದ್ರತೆಗೆ ನಿಯೋಜಿತರಾಗಿದ್ದ ಸಿಬ್ಬಂದಿಯಾದರೂ ತಮ್ಮ ಹಿರಿಯ ಅಧಿಕಾರಿಗಳ ಗಮನ ಸೆಳೆಯಬೇಕಿತ್ತು. ಈ ವಿಷಯದಲ್ಲಿ ಸಂಘಟಕರು ಮತ್ತು ಅಧಿಕಾರಿಗಳು ಎಡವಿದ್ದಾರೆ. ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಉತ್ತರಪ್ರದೇಶ ಸರ್ಕಾರ ಈಗಾಗಲೇ ಈ ಘಟನೆಯ ಕುರಿತು ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಕಾಲ್ತುಳಿತ ಆರಂಭವಾಗಿದ್ದು ಹೇಗೆ, ಅದಕ್ಕೆ ಕಾರಣ ಏನು, ತಪ್ಪಿತಸ್ಥರಾರು ಎಂಬ ಎಲ್ಲ ಸಂಗತಿಗಳು ತನಿಖೆಯಿಂದ ಹೊರಬರಬೇಕಿದೆ. ಆದರೆ ಇದರಿಂದ ಇಡೀ ದೇಶದ ಜನರು ಮತ್ತು ಅಧಿಕಾರಿಗಳು ಕಲಿಯಬೇಕಾದ ಪಾಠ ದೊಡ್ಡದಿದೆ. ಇಷ್ಟು ದೊಡ್ಡ ಸಮಾರಂಭವನ್ನು ಆಯೋಜಿಸುವಾಗ ವಹಿಸಬೇಕಾದ ಮುಂಜಾಗ್ರತೆ, ಸಿದ್ಧತೆ ಬಗ್ಗೆ ಈ ಘಟನೆಯೇ ತಿಳಿಹೇಳುವಂತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net