

ರಾಷ್ಟ್ರದ ಹಿತ, ರಾಷ್ಟ್ರವಾದದ ಚಿಂತನೆಗಿಂತ ಮಿಗಿಲಾದದ್ದೂ ಯಾವುದೂ ಇಲ್ಲ. ದೇಶದ ವಿಷಯ ಬಂದಾಗ ಎಲ್ಲ ವಿಷಯಗಳನ್ನು ಬದಿಗೊತ್ತಿ, ಏಕತೆಯ ಭಾವ ಪ್ರದರ್ಶಿಸಬೇಕು, ರಾಜಕೀಯವನ್ನು ದೂರವಿಡಬೇಕು. ಈ ದೇಶದಲ್ಲಿ ಇದ್ದುಕೊಂಡು, ಇಲ್ಲಿಯ ಸಕಲ ಸೌಲಭ್ಯಗಳನ್ನು ಪಡೆದು, ಜೀವನ ರೂಪಿಸಿಕೊಂಡಿರುವವರೇ ರಾಷ್ಟ್ರಭಾವನೆಗಳಿಗೆ ಘಾತಕವಾಗಿ ನಡೆದುಕೊಂಡರೆ ಅಂಥ ಕೃತ್ಯವನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಬಾರದು.
ಫೆಬ್ರವರಿ 27ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವು ಸಾಧಿಸಿದರು. ಗೆದ್ದ ಖುಷಿಯಲ್ಲಿ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದು, ವ್ಯಾಪಕ ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಬಗೆಯ ಘಟನೆಯೇ ನಡೆದಿಲ್ಲ, ಪಾಕ್ ಪರ ಘೋಷಣೆ ಕೂಗಲಾಗಿಲ್ಲ ಎಂದು ತನಿಖೆ ನಡೆಯುವ ಮೊದಲೇ ಕೆಲವು ಸಚಿವರು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದು ಉಂಟು. ಆದರೆ, ಈ ಸಂಬಂಧ ಎಫ್ಎಸ್ಎಲ್ ವರದಿಯನ್ನು ಆಧರಿಸಿ ಪೊಲೀಸರು ಮೂವರು ಆರೋಪಿಗಳನ್ನು ಸೋಮವಾರ ಬಂಧಿಸಿರುವುದು ಮಹತ್ವದ ಬೆಳವಣಿಗೆ. ಯಾವುದೇ ರೀತಿಯ ಒತ್ತಡಗಳಿಗೂ ಒಳಗಾಗದೇ ಮೂವರು ಆರೋಪಿಗಳನ್ನು ಬಂಧಿಸಿರುವುದು ಬೆಂಗಳೂರು ಪೊಲೀಸರ ಕರ್ತವ್ಯನಿಷ್ಠೆಗೆ ಸಾಕ್ಷಿಯಾಗಿದೆ. ಆದರೆ, ವಿಧಾನಸೌಧದಲ್ಲೇ ಇಂಥ ಘಟನೆ ನಡೆದಿರುವುದು ಆಂತರಿಕ ಭದ್ರತೆಗೆ ಮಾರಕ ಮತ್ತು ರಾಷ್ಟ್ರವಿರೋಧಿ ತತ್ತ್ವಗಳು ಸಕ್ರಿಯವಾಗಿರುವುದಕ್ಕೆ ಸಾಕ್ಷಿ. ಇದು ಖಂಡಿತವಾಗಿಯೂ ಆತಂಕಕಾರಿ ಬೆಳವಣಿಗೆ. ಈ ರಾಷ್ಟ್ರದ ಮೇಲ್ಮನೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿ ಶತ್ರುರಾಷ್ಟ್ರದ ಪರವಾಗಿ ಕೆಲಸ ಮಾಡಬೇಕು ಎಂಬುದು ಅವರ ಅನುನಾಯಿಗಳ ಭಾವನೆಯಾಗಿತ್ತೆ? ಈ ಘಟನೆಯನ್ನು ನಾಸೀರ್ ಹುಸೇನ್ ತೀವ್ರವಾಗಿ ಖಂಡಿಸಿ, ಜವಾಬ್ದಾರಿ ಮೆರೆಯಬೇಕಿತ್ತು. ಆದರೆ, ಅವರು ಮಾಧ್ಯಮಗಳ ವಿರುದ್ಧವೇ ಹರಿಹಾಯ್ದಿದ್ದು ಅವರ ಹತಾಶೆಗೆ ನಿದರ್ಶನ. ಅಲ್ಲದೆ, ಎಫ್ಎಸ್ಎಲ್ ವರದಿ ಬರುವ ಮುನ್ನವೇ ಕಾಂಗ್ರೆಸ್ ನಾಯಕರು, ಹಲವು ಸಚಿವರು ‘ತೀರ್ಪ’ ನೀಡಿದ್ದು ಸರಿಯಲ್ಲ.
ಎಫ್ಎಸ್ಎಲ್ ವರದಿಯು, ಘಟನಾ ಸ್ಥಳದಲ್ಲಿ ಚಿತ್ರೀಕರಿಸಿದ್ದ ವಿಡಿಯೋ ಅಸಲಿ ಎಂದು ಸ್ಪಷ್ಟಪಡಿಸಿದ್ದು, ಪಾಕ್ ಪರ ಘೋಷಣೆ ಕೂಗಿದ್ದು ದೃಢಪಟ್ಟಿದೆ ಎಂದಿದೆ. ವೈಜ್ಞಾನಿಕ ವಿಧಾನದಲ್ಲಿ ಈ ವಿಡಿಯೋಗಳನ್ನು ಪರೀಕ್ಷಿಸಲಾಗಿದೆ. ಈ ಪ್ರಕರಣವನ್ನು ರಾಜಕೀಯ ದೃಷ್ಟಿಕೋನದಿಂದ ನೋಡದೆ ರಾಷ್ಟ್ರಕ್ಕೆ ಎಸಗಿದ ಅವಮಾನವೆಂದು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳು ಆಡಳಿತಾರೂಢ ಪಕ್ಷಕ್ಕೆ ಸೇರಿದವರು. ಆದರೂ ತನಿಖೆಯಲ್ಲಿ ಯಾವುದೇ ನ್ಯೂನತೆ ಆಗದಿರುವಂತೆ ಪೊಲೀಸ್ ಇಲಾಖೆ ಕಾಳಜಿ ವಹಿಸಬೇಕಿದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವ ಮೂಲಕ ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಬೇಕಿದೆ. ಅಲ್ಲದೆ, ಯಾರೂ ಇಂತಹ ದುಸ್ಸಾಹಸಕ್ಕೆ ಕೈಹಾಕದಂತೆ, ರಾಷ್ಟ್ರವಿರೋಧಿ ಭಾವನೆಗಳಿಗೆ ಉತ್ತೇಜನ ನೀಡದಂತೆ ಈ ಪ್ರಕರಣ ಒಂದು ಪಾಠವಾಗಲಿ. ಯಾವುದೇ ಪಕ್ಷ, ಜಾತಿ-ಧರ್ಮಕ್ಕಿಂತ ದೇಶ ಮುಖ್ಯ ಎಂಬುದನ್ನು ಎಲ್ಲರೂ ಅರಿಯಲಿ. ಆಗ ಮಾತ್ರ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು, ಪಟ್ಟಭದ್ರ ಹಿತಾಸಕ್ತಿಗಳನ್ನು ಮಣಿಸಲು ಸಾಧ್ಯ ಎಂಬುದನ್ನು ಮರೆಯದಿರೋಣ.