ಸಂಪಾದಕೀಯ: ಎಚ್ಚರಿಕೆಯ ನಡೆ ಅಗತ್ಯ

india_china_dp
Published on

ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾ ನಡೆಸಿದ ಕುಕೃತ್ಯಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಉಭಯ ದೇಶಗಳ ಸೇನಾಧಿಕಾರಿಗಳ ನಡುವಣ ಮಾತುಕತೆಯಲ್ಲಿ ಸಮ್ಮತಿಸಲಾದ ಅಂಶಗಳನ್ನು ಚೀನಾ ಸೇನೆ ಗಾಳಿಗೆ ತೂರಿ, ಭಾರತದ ಸೈನಿಕರ ಮೇಲೆ ನಡೆಸಿದ ಪೈಶಾಚಿಕ ದಾಳಿ ಬಗ್ಗೆ ದೇಶದಲ್ಲಿ ತೀವ್ರವಾದ ಜನಾಕ್ರೋಶ ವ್ಯಕ್ತವಾಗುತ್ತಿದೆ. ಪದೇಪದೆ ಗಡಿಯಲ್ಲಿ ತಂಟೆ ತೆಗೆಯುವ, ಒಪ್ಪಂದಗಳನ್ನು ಉಲ್ಲಂಘಿಸುವ ಆ ದೇಶದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಜನಾಭಿಪ್ರಾಯ ಗಟ್ಟಿಯಾಗುತ್ತಿದೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯುದ್ಧದ ಬಗ್ಗೆಯೂ ಮಾತಾಡುತ್ತಿದ್ದಾರೆ. ಒಟ್ಟಿನಲ್ಲಿ, ಕರೊನಾ ಹಾವಳಿಯನ್ನು ಎದುರಿಸುವಲ್ಲಿ ಮಗ್ನವಾಗಿರುವ ಭಾರತಕ್ಕೆ ನೆರೆದೇಶಗಳಾದ ಚೀನಾ, ಪಾಕಿಸ್ತಾನ ಮತ್ತು ನೇಪಾಳಗಳಿಂದ ಏಕಕಾಲಕ್ಕೆ ಬೇರೆ ಬೇರೆ ಬಗೆಯ ತೊಂದರೆಗಳು ಸೃಷ್ಟಿಯಾಗುತ್ತಿರುವುದು ಮಾತ್ರ ನಿಜ.

ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಎರಡೂ ದೇಶಗಳ ಸೈನಿಕರನ್ನು ವಾಪಸ್ ಕರೆಸಿಕೊಳ್ಳಬೇಕು ಮತ್ತು ಅಲ್ಲಿ ಶಾಂತಿಯುತ ವಾತಾವರಣ ಕಾಯ್ದುಕೊಳ್ಳಬೇಕು ಎಂದು ಜೂನ್ 6ರಂದು ಉಭಯ ದೇಶಗಳ ಸೇನಾಧಿಕಾರಿಗಳ ಮಟ್ಟದ ಮಾತುಕತೆಯಲ್ಲಿ ನಿರ್ಧಾರವಾಗಿತ್ತು. ಆದರೆ ಈ ಅಂಶವನ್ನು ಚೀನಾ ಸಾರಾಸಗಟಾಗಿ ಉಲ್ಲಂಘಿಸಿದೆ ಎಂಬುದು ಮೊನ್ನಿನ ಘಟನೆಯಿಂದ ಸ್ಪಷ್ಟವಾಗಿದೆ. ಅಷ್ಟಕ್ಕೂ, ಆ ದೇಶ ಒಪ್ಪಂದಗಳನ್ನು ಉಲ್ಲಂಘಿಸುವುದು ಹೊಸದೇನೂ ಅಲ್ಲ, ಹಿಂದೆಯೂ ನಡೆದಿದೆ. ಇದೇನೆ ಇದ್ದರೂ, ಭಾರತ ಸರ್ಕಾರ ಮತ್ತು ಸೇನೆ ಎದುರು ಈಗ ದೊಡ್ಡ ಸವಾಲೇ ಇದೆ. ಚೀನಾಕ್ಕೆ ಪಾಠ ಕಲಿಸಬೇಕು ಎಂಬುದು ನಿಜ. ಆದರೆ ಹೇಗೆ ಎಂಬುದು ದೊಡ್ಡ ಪ್ರಶ್ನೆ. ನೇರಯುದ್ಧವೇ ಘಟಿಸಿದರೆ ಎರಡೂ ಕಡೆ ಅಪಾರ ಹಾನಿ ಕಟ್ಟಿಟ್ಟ ಬುತ್ತಿ. ಏಕೆಂದರೆ ಭಾರತ ಮತ್ತು ಚೀನಾ ಎರಡೂ ಅಣ್ವಸ್ತ್ರ ಹೊಂದಿವೆ ಮತ್ತು ಅಗಾಧ ಸೇನಾಬಲವನ್ನೂ ಹೊಂದಿವೆ. ಹೀಗಿದ್ದರೂ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಆಡಿದ ಮಾತು ಕುತೂಹಲವನ್ನಂತೂ ಮೂಡಿಸಿದೆ. ‘ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸಮರ್ಥರು. ನಮ್ಮ ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಪಾಕ್​ಪ್ರೇರಿತ ಭಯೋತ್ಪಾದಕರು ಪುಲ್ವಾಮಾದಲ್ಲಿ ದಾಳಿ ನಡೆಸಿ ನಮ್ಮ ಅನೇಕ ಸೈನಿಕರನ್ನು ಹತ್ಯೆಗೈದ ಸಂದರ್ಭದಲ್ಲೂ ಮೋದಿ ಹೀಗೆಯೇ ಹೇಳಿದ್ದರು. ನಂತರದ ಕೆಲವೇ ದಿನಗಳಲ್ಲಿ ಭಾರತೀಯ ಸೇನೆ ಪಾಕ್ ಗಡಿದಾಟಿ ವಾಯುದಾಳಿ ನಡೆಸಿದ್ದು ಈಗ ಇತಿಹಾಸ. ಚೀನಾ ವಿಚಾರದಲ್ಲಿ ಏನಾಗಬಹುದೆಂದು ಈಗಲೇ ಹೇಳುವುದು ಕಷ್ಟವಾದರೂ, ಆ ತಂಟೆಕೋರ ದೇಶವನ್ನು ಕಟ್ಟಿಹಾಕಲು ಅನ್ಯಮಾರ್ಗಗಳಲ್ಲಿಯೂ ಯತ್ನಿಸಬಹುದು ಎಂಬುದು ಮಾತ್ರ ನಿಜ.

ಕರೊನಾ ವಿಚಾರದಲ್ಲಿ ಈಗಾಗಲೇ ಬಹುತೇಕ ದೇಶಗಳು ಚೀನಾ ಬಗ್ಗೆ ಅಸಮಾಧಾನ ಹೊಂದಿವೆ. ಜಾಗತಿಕವಾಗಿ ರಾಜತಾಂತ್ರಿಕವಾಗಿ ಆ ದೇಶವನ್ನು ಮಣಿಸಲು ಇದೊಂದು ಸದವಕಾಶ. ಹಾಗೆಯೇ, ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕೂಗೂ ದೇಶದಲ್ಲೀಗ ಜೋರಾಗುತ್ತಿದೆ. ಈ ಭಾವನೆ ಸಂಕಲ್ಪರೂಪ ತಳೆದಲ್ಲಿ ಆ ದೇಶದ ಆರ್ಥಿಕ ಶಕ್ತಿಯನ್ನು ಕುಗ್ಗಿಸಲು ಅನುವಾಗುತ್ತದೆ. ಚೀನಾ ಈಗ ಶಾಂತಿಯ ಮಾತಾಡುತ್ತಿದ್ದರೂ ಬಡಪೆಟ್ಟಿಗೆ ಅದನ್ನು ನಂಬುವಂತಿಲ್ಲ. ಹೀಗಾಗಿ ಭಾರತ ಜಾಗರೂಕತೆಯ, ವಿವೇಕದ ಹೆಜ್ಜೆಯನ್ನಿಡಬೇಕೆಂಬುದಂತೂ ನಿರ್ವಿವಾದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net