

ಷೇರು ಮಾರುಕಟ್ಟೆ ದಿನೇದಿನೆ ಹೊಸ ಎತ್ತರಕ್ಕೇರುತ್ತಿದ್ದು, ಈ ವೇಗ ಇತರ ದೇಶಗಳ ಅಚ್ಚರಿಗೆ ಕಾರಣವಾದರೆ, ನಮ್ಮ ದೇಶದಲ್ಲಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ ನಿರ್ವಣಗೊಳ್ಳುತ್ತಿದೆ. 2014ರಲ್ಲಿ, ಅಂದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬರುವ ಮೊದಲು 25 ಸಾವಿರ ಅಂಶಗಳ ಆಸುಪಾಸಿನಲ್ಲಿದ್ದ ಸೆನ್ಸೆಕ್ಸ್ 75 ಸಾವಿರ ಗಡಿ ದಾಟಿ ಈಗ ಹೊಸ ದಾಖಲೆಯನ್ನೇ ಬರೆದಿರುವುದು ಗಮನಾರ್ಹ. ಬಾಂಬೆ ಷೇರು ವಿನಿಮಯ ಕೇಂದ್ರದಲ್ಲಿ (ಬಿಎಸ್ಇ) ನೋಂದಣಿ ಆಗಿರುವ ಕಂಪನಿಗಳ ಮಾರುಕಟ್ಟೆ ಮೌಲ್ಯ 400 ಲಕ್ಷ ಕೋಟಿ ರೂಪಾಯಿ ದಾಟಿ ಹೊಸ ಮೈಲಿಗಲ್ಲನ್ನು ತಲುಪಿದೆ. ಇದಕ್ಕೆಲ್ಲ ಕಾರಣ, ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ದೊಡ್ಡ ಪ್ರಮಾಣದಲ್ಲಿ ನೀತಿ ಬದಲಾವಣೆ (ಪಾಲಿಸಿ ಶಿಫ್ಟ್) ಆಗದೇ ಇರುವುದು. ಸರ್ಕಾರದ ಸ್ಥಿರತೆ ಮತ್ತು ನೀತಿಗಳ ನಿರಂತರತೆ- ಇವು ಉದ್ಯಮಗಳಿಗೆ ಅತ್ಯಂತ ಮುಖ್ಯವಾಗಿ ಅಗತ್ಯವಿರುವ ಅಂಶಗಳು. ಹಾಗಾಗಿಯೇ, ಇಡೀ ಜಗತ್ತಿನ ಇತರ ದೇಶಗಳು ಆರ್ಥಿಕ ಹಿಂಜರಿತದತ್ತ ಸಾಗಿದ್ದರೆ, ಭಾರತ ಮಾತ್ರ ಆರ್ಥಿಕವಾಗಿ ಮುನ್ನಡೆಯುತ್ತಲೇ ಇದೆ.
ಅಷ್ಟೇ ಅಲ್ಲ, ಕರೊನಾ ಸಾಂಕ್ರಾಮಿಕದ ವೇಳೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೂಡ ಆರ್ಥಿಕ ಹಿಂಜರಿತ ಎದುರಿಸಿದವು. ಅಲ್ಲದೆ, ಆ ಸ್ಥಿತಿಯಿಂದ ಸಾವರಿಸಿಕೊಳ್ಳಲು ತುಂಬ ಸಮಯ ತೆಗೆದುಕೊಂಡವು. ಕರೊನಾ ಸೃಷ್ಟಿಸಿದ್ದ ನೈರಾಶ್ಯದ ವಾತಾವರಣವನ್ನು ಕೂಡ ಭಾರತ ಬೇಗನೆ ತಿಳಿಗೊಳಿಸಿತಲ್ಲದೆ, ಆರ್ಥಿಕ ಸುಧಾರಣೆಗಳಿಗೆ ವೇಗ ನೀಡಿತು. ಈ ಎಲ್ಲ ಕ್ರಮಗಳನ್ನು ಕೈಗಾರಿಕಾ ಜಗತ್ತು ಗಮನಿಸುತ್ತಿದ್ದು, ಆರ್ಥಿಕ ಉತ್ಸಾಹದ ವಾತಾವರಣದ ಪರಿಣಾಮ ವಿಶ್ವಾಸದಿಂದ ಮುನ್ನಡೆಯುತ್ತಿದೆ. ಅದರಲ್ಲೂ, ಸೆನ್ಸೆಕ್ಸ್ನ ನಾಗಾಲೋಟ ಇತ್ತೀಚಿನ ವರ್ಷಗಳಲ್ಲಿ ಆರಂಭವಾಗಿದ್ದು, ತನ್ನ ದಾಖಲೆಗಳನ್ನೇ ಮುರಿಯುತ್ತ ಸಾಗಿದೆ.
ಇತಿಹಾಸದತ್ತ ದೃಷ್ಟಿ ಹಾಯಿಸಿದರೆ ಕಳೆದ ಹತ್ತು ವರ್ಷಗಳಲ್ಲಿ ಕಂಡುಬಂದಿರುವ ಆರ್ಥಿಕ ಬೆಳವಣಿಗೆಯ ವೇಗ ವಿಶ್ವಾಸವನ್ನು ಮೂಡಿಸುತ್ತದೆ. ಜಿಡಿಪಿ ಕೂಡ ಏರುಮುಖದಲ್ಲಿದ್ದು, ಇತ್ತೀಚೆಗಷ್ಟೇ ಭಾರತ ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂಬುದು ಆಶಾದಾಯಕ ಸಂಗತಿಯೇ. 2004ರ ಆರಂಭದಲ್ಲಿ 6 ಸಾವಿರ ಅಂಶಗಳಲ್ಲಿ ವಹಿವಾಟು ನಡೆಸುತ್ತಿದ್ದ ಸೆನ್ಸೆಕ್ಸ್ ಅದೇ ವರ್ಷದ ಮೇ ತಿಂಗಳಲ್ಲಿ 4,300 ಅಂಶಗಳಿಗೆ ಕುಸಿದಿತ್ತು. 2014ರಲ್ಲಿ 25 ಸಾವಿರ ಅಂಶಗಳಲ್ಲಿ ವಹಿವಾಟು ನಡೆಸುತ್ತಿದ್ದ ಸೆನ್ಸೆಕ್ಸ್ 2017 ಏಪ್ರಿಲ್ 26ರಂದು 30 ಸಾವಿರದ ಎತ್ತರವನ್ನು ತಲುಪಿತು. 10 ಸಾವಿರ ಅಂಶಗಳ ಏರಿಕೆಯೊಂದಿಗೆ 2019ರ ಆರಂಭದಲ್ಲಿ 40 ಸಾವಿರ, 2021ರ ಆರಂಭದಲ್ಲಿ 50 ಸಾವಿರ ಅಂಶಗಳಿಗೆ ತಲುಪಿತು. ಇದಾದ 158 ದಿನಗಳಲ್ಲೇ 2021 ಸೆಪ್ಟೆಂಬರ್ 24ರಂದು 60 ಸಾವಿರಕ್ಕೆ ಏರಿಕೆಯಾಯಿತು. 60 ಸಾವಿರದಿಂದ 70 ಸಾವಿರಕ್ಕೆ ತಲುಪಲು ತೆಗೆದುಕೊಂಡಿದ್ದು 548 ವಹಿವಾಟು ದಿನಗಳು. ಮೊನ್ನೆ, ಏಪ್ರಿಲ್ 9ರಂದು 75 ಸಾವಿರ ಅಂಶಗಳಿಗೆ ತಲುಪಿದ್ದು, ಸಾರ್ವಕಾಲಿಕ ದಾಖಲೆ. ಆರ್ಥಿಕ ಸುಧಾರಣೆಯ ಕ್ರಮಗಳು ಹಾಗೂ ರಾಜಕೀಯ ಸ್ಥಿರತೆ ಮುಂದುವರಿದರೆ ಮತ್ತಷ್ಟು ಬೆಳವಣಿಗೆ ಖಚಿತ ಎಂಬುದು ತಜ್ಞರ ಅಭಿಪ್ರಾಯ.