

ಕೆಲ ವರ್ಷಗಳಿಂದ ಮುಂದುವರಿದಿರುವ ಮೌಲ್ಯಾಂಕನ ಪರೀಕ್ಷೆ ವಿವಾದ ಈಗಲೂ ಸುಸೂತ್ರವಾಗಿ ಇತ್ಯರ್ಥವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮೌಲ್ಯಾಂಕನ ಪರೀಕ್ಷೆ ಕುರಿತ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದರೂ ಈ ವರ್ಷ ರಾಜ್ಯ ಪಠ್ಯಕ್ರಮ ಶಾಲೆಗಳ 5, 8, 9 ಮತ್ತು 11ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿರುವುದು ಮತ್ತೆ ಗೊಂದಲ ಮುಂದುವರಿಕೆಗೆ ಕಾರಣವಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಅಲ್ಲದೆ, ಈ ಜಂಜಾಟವು ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರ ಆತಂಕವನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಬಹುದಾಗಿದೆ.
ಮೌಲ್ಯಾಂಕನ ವಿರೋಧಿಸಿ ಖಾಸಗಿ ಶಾಲೆಗಳ ಒಕ್ಕೂಟವಾದ ರುಪ್ಸಾ ಸಂಘಟನೆ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ದಾವೆ ಇನ್ನೂ ಇತ್ಯರ್ಥವಾಗಿಲ್ಲ. ಆದರೂ, ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡು, ಮೌಲ್ಯಾಂಕನ ಪರೀಕ್ಷೆಯನ್ನು ಈ ಸಾಲಿನಲ್ಲಿ ನಡೆಸಲು ಶಿಕ್ಷಣ ಇಲಾಖೆ ಸಜ್ಜಾಗುತ್ತಿದೆ. 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕಳೆದ ಮಾರ್ಚ್ 13ರಂದು ನಿಗದಿಪಡಿಸಲಾಗಿದ್ದ ಮೌಲ್ಯಾಂಕನ ಪರೀಕ್ಷೆಯನ್ನು ಹೈಕೋರ್ಟ್ ಆದೇಶದಂತೆ ಮುಂದೂಡಲಾಗಿದೆ. ನ್ಯಾಯಾಲಯವು ಅನುಮತಿಸಿದಲ್ಲಿ ಈ ಮೌಲ್ಯಾಂಕನವನ್ನು ನಡೆಸುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಜ್ಞಾಪಕ ಪತ್ರದಲ್ಲಿ ಈಗಾಗಲೇ ತಿಳಿಸಿದೆ. ಹೀಗಿದ್ದರೂ ಪ್ರಕರಣ ಇತ್ಯರ್ಥವಾಗುವ ಮೊದಲೇ ಇಂತಹ ಪರೀಕ್ಷೆಗೆ ಸಿದ್ಧವಾಗುತ್ತಿರುವುದು ಅರ್ಥವಾಗದ ಸಂಗತಿಯಾಗಿದೆ.
5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ತೀರ್ವನಿಸಿ ಸರ್ಕಾರ 2022ರ ಡಿ.12, 13 ಮತ್ತು 2023ರ ಜ.4ರಂದು ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಹೊರಡಿಸಿತ್ತು. ಈ ಬೋರ್ಡ್ ಪರೀಕ್ಷೆ ರದ್ದುಪಡಿಸುವಂತೆ ಕೋರಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಕೋವಿಡ್ ಸಾಂಕ್ರಾಮಿಕ ರೋಗ ಆವರಿಸಿದ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ವ್ಯಾಸಂಗದಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಅದನ್ನು ಹೆಚ್ಚಿಸಲು 5 ಮತ್ತು 8ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಅವರನ್ನು ಅದೇ ತರಗತಿಯಲ್ಲಿ ಮುಂದುವರಿಸುವುದಿಲ್ಲ. ಮುಂದಿನ ತರಗತಿಗೆ ಕಳುಹಿಸಲಾಗುತ್ತದೆ ಎಂದು ಸರ್ಕಾರದ ವಕೀಲರು ಆಗ ವಾದ ಮಂಡಿಸಿದ್ದರು.
ಮಂಡಳಿಯ ನಿಲುವು ಈ ವಿಷಯದಲ್ಲಿ ಗೊಂದಲದಿಂದ ಕೂಡಿರುವಂತೆ ಕಂಡುಬರುತ್ತದೆ. ಪರೀಕ್ಷೆಯಲ್ಲಿ ಅನುತ್ತೀರ್ಣ ಮಾಡುವುದಿಲ್ಲ, ಮಕ್ಕಳ ಬುದ್ಧಿವಂತಿಕೆ ಪರೀಕ್ಷಿಸುವುದಿಲ್ಲ ಎಂದು ವಾದ ಮುಂದಿಡುವ ಮಂಡಳಿಯು ಮೌಲ್ಯಾಂಕನ ಪರೀಕ್ಷೆಗೆ ಮುಂದಾಗಿರುವುದರಲ್ಲಿ ಯಾವ ತರ್ಕವಿದೆ ಎಂಬ ಪ್ರಶ್ನೆ ಮೂಡುತ್ತದೆ. ಎರಡು ವರ್ಷಗಳ ಕಾಲ ಜನಜೀವನ ಅಸ್ತವ್ಯಸ್ತಗೊಳಿಸಿದ್ದ ಕೋವಿಡ್ ಹೆಮ್ಮಾರಿ ಈಗ ಕಣ್ಮರೆಯಾಗಿದೆ. ಜನಜೀವನ ಮರಳಿ ಸಹಜ ಸ್ಥಿತಿಗೆ ಬಂದಿದೆ. ಶಾಲೆಯ ಆರಂಭದಲ್ಲಿ ಪ್ರತಿವರ್ಷವೂ ಹಿಂದಿನ ವರ್ಷದ ಪಠ್ಯದೊಂದಿಗೆ ಬೆಸೆಯಲು ಸೇತುಬಂಧು ಪಾಠಗಳನ್ನು ಮಾಡಲಾಗುತ್ತದೆ. ಪ್ರತಿ ಎರಡು ತಿಂಗಳಿಗೊಮ್ಮೆ ಶಾಲೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ವಾರ್ಷಿಕ ಪರೀಕ್ಷೆಗಳೂ ನಡೆಯುತ್ತವೆ. ಇಷ್ಟೆಲ್ಲ ರೀತಿಯಲ್ಲಿ ಮಕ್ಕಳ ಮೌಲ್ಯಮಾಪನ ನಿರಂತರವಾಗಿ ನಡೆಯುತ್ತಿರುವಾಗ, ಎರಡ್ಮೂರು ವರ್ಷಗಳ ಹಿಂದಿನ ಕಲಿಕೆ ಕುರಿತು ಈಗ ಪರೀಕ್ಷಿಸುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಶಾಲೆಗಳ ಆಡಳಿತ ಮಂಡಳಿಗಳು, ತಜ್ಞರೊಂದಿಗೆ ಸೌಹಾರ್ದಯುತವಾಗಿ ರ್ಚಚಿಸಿ ಮಕ್ಕಳಿಗೆ ಹೊರೆಯಾಗದಂತೆ ಈ ವಿವಾದವನ್ನು ಶಾಶ್ವತವಾಗಿ ಇತ್ಯರ್ಥಪಡಿಸುವ ತುರ್ತು ಅಗತ್ಯತೆ ಇದೆ.