

ಸಹಕಾರ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ಲೋಕಸಭೆಯಲ್ಲಿ ಮಂಗಳವಾರ ಅನುಮೋದನೆಗೊಂಡಿರುವ ತಿದ್ದುಪಡಿ ಮಸೂದೆ ಸಹಕಾರಿ ಬ್ಯಾಂಕ್ಗಳ ಆಡಳಿತ, ಸೇವೆಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಕೇಂದ್ರ ಸರ್ಕಾರ ಈ ವಿಧೇಯಕದ ಮೂಲಕ ಸಹಕಾರಿ ಬ್ಯಾಂಕ್ಗಳ ವ್ಯವಹಾರಗಳನ್ನು ಆರ್ಬಿಐ ವ್ಯಾಪ್ತಿಗೆ ತರುವ ಉದ್ದೇಶ ಹೊಂದಿದೆ. ಈ ಮೂಲಕ ಸಹಕಾರಿ ಬ್ಯಾಂಕ್ಗಳನ್ನು ಹೆಚ್ಚಾಗಿ ಅವಲಂಬಿಸಿರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಸಹಕಾರಿ ಬ್ಯಾಂಕ್ಗಳಲ್ಲಿ ದೊಡ್ಡ ಪ್ರಮಾಣದ ಅಕ್ರಮ, ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ಆರೋಪಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದ್ದು, ಈ ಅಕ್ರಮಗಳಿಗೆ ಕಡಿವಾಣ ಬೀಳಬೇಕಿದೆ. ಇಲ್ಲವಾದರೆ ಸಹಕಾರ ತತ್ವದ ಆಶಯಗಳು ವಿಫಲವಾಗಲಿವೆ. ಕೇಂದ್ರ ಸಹಕಾರ ಸಚಿವರು ಮಂಡನೆ ಮಾಡಿರುವ ಮಸೂದೆಯನ್ನು ಗಮನಿಸಿದರೆ ಅಕ್ರಮಗಳಿಗೆ ಕಡಿವಾಣ ಹಾಕುವ ಆಶಯ ವ್ಯಕ್ತವಾಗುತ್ತಿದೆ. ಆದರೆ ಈ ಮಸೂದೆ ಎಷ್ಟರಮಟ್ಟಿಗೆ ಫಲಪ್ರದವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಸಹಕಾರ ವ್ಯವಹಾರಗಳಲ್ಲಿ ಆರ್ಬಿಐ ಅನುಮೋದಿತ ಲೆಕ್ಕ ಪರಿಶೋಧಕರನ್ನು ನೇಮಿಸಿಕೊಳ್ಳುವುದೂ ತಿದ್ದುಪಡಿಯಲ್ಲಿ ಸೇರಿದೆ.
ಕರ್ನಾಟಕ ರಾಜ್ಯವನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳಬಹುದಾದರೆ ಹಲವು ಸಹಕಾರಿ ಬ್ಯಾಂಕುಗಳ ದಿವಾಳಿಯಿಂದ ಸಾವಿರಾರು ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ ನಿದರ್ಶನಗಳಿವೆ. ಅಲ್ಪಸ್ವಲ್ಪ ಆದಾಯದಲ್ಲೇ ಉಳಿತಾಯ ಮಾಡಿ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಬ್ಯಾಂಕ್ಗಳ ದಿವಾಳಿಯಿಂದ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಮಕ್ಕಳ ಮದುವೆ, ಪುಟ್ಟ ಸೂರು ಮತ್ತಿತರ ಉದ್ದೇಶಗಳಿಗೆ ಉಳಿತಾಯ ಮಾಡಿ ಠೇವಣಿ ಇಟ್ಟಿದ್ದು, ದಿವಾಳಿಯಾದಾಗ ಠೇವಣಿದಾರರು ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳಿಗೆ ಕೊರತೆ ಇಲ್ಲ. ಕೆಲವು ಹಿರಿಯ ನಾಗರಿಕರಂತೂ ಈ ಬ್ಯಾಂಕುಗಳ ಠೇವಣಿ ಬಡ್ಡಿಯನ್ನು ವೈದ್ಯಕೀಯ ಸವಲತ್ತಿಗೆ ಮೂಲವಾಗಿ ನಂಬಿದ್ದರು, ಇದೀಗ ಕೆಲವರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ಸಹಿತ ರಾಜ್ಯದಲ್ಲಿ ಹಲವು ಸಹಕಾರಿ ಬ್ಯಾಂಕುಗಳು ಆರ್ಬಿಐ ಮಾರ್ಗಸೂಚಿ ಉಲ್ಲಂಘನೆ ಮಾಡಿ ಬಾಗಿಲು ಮುಚ್ಚಿವೆ. ಠೇವಣಿದಾರರು ದಿನವೂ ಬ್ಯಾಂಕುಗಳಿಗೆ ಅಲೆದಾಡುತ್ತಿದ್ದಾರೆ. ಹೀಗಾಗಿ ಸಹಕಾರಿ ತತ್ವದ ಆಶಯ ಈಡೇರಬೇಕಾದರೆ, ಸ್ವಜನಪಕ್ಷಪಾತ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಸಹಕಾರಿ ತತ್ವ ಔಪಚಾರಿಕವಾಗದೆ ಕಡ್ಡಾಯವಾಗಿ ಪಾಲನೆಯಾಗಬೇಕು. ಗ್ರಾಹಕರಿಗಾಗಿ ಜಾರಿಯಾಗುವ ಸುಲಭ ನಿಯಮಾವಳಿಗಳನ್ನು ಮನಃಬಂದಂತೆ ಬಳಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜಾರಿಗೆ ಬರಬೇಕು. ಸಹಕಾರ ವಲಯದ ಮೇಲೆ ನಂಬಿಕೆ ಬಲವಾಗುವ ಹೆಜ್ಜೆಗಳು ಇನ್ನಷ್ಟು ದೃಢವಾಗಬೇಕು.