ಗ್ರಾಹಕರ ಹಿತರಕ್ಷಣೆ: ಚಿಲ್ಲರೆ ಮಳಿಗೆಗಳು ಫೋನ್ ನಂಬರ್ ಕೇಳುವುದು ಸಲ್ಲ

Editorial
Published on

ವೈಯಕ್ತಿಕ ಮೊಬೈಲ್​ಫೋನ್ ನಂಬರ್​ಗಳನ್ನು ನೀಡುವಂತೆ ಅಂಗಡಿ, ಚಿಲ್ಲರೆ ಮಳಿಗೆಗಳ ಮಾಲೀಕರು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಆನ್​ಲೈನ್ ಹಾಗೂ ಸೈಬರ್ ವಂಚನೆಗಳ ಸಾಧ್ಯತೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಇಂತಹ ಸೂಚನೆ ನೀಡಿರುವುದು ಜನಸ್ನೇಹಿ ಕ್ರಮವಾಗಿದೆ. ತಮ್ಮ ಸಂಪರ್ಕ ಸಂಖ್ಯೆಯನ್ನು ಹಂಚಿಕೊಳ್ಳದ ಹೊರತು ಸೇವೆಗಳನ್ನು ಒದಗಿಸಲು ಕೆಲವು ಚಿಲ್ಲರೆ ವ್ಯಾಪಾರಿಗಳು ನಿರಾಕರಿಸುತ್ತಾರೆ ಎಂದು ಅನೇಕ ಗ್ರಾಹಕರಿಂದ ದೂರುಗಳು ವ್ಯಕ್ತವಾಗಿದ್ದವು. ವೈಯಕ್ತಿಕ ಸಂಪರ್ಕ ವಿವರಗಳನ್ನು ಒದಗಿಸದ ಹೊರತು ಗ್ರಾಹಕರಿಗೆ ಬಿಲ್ ನೀಡಲು ಸಾಧ್ಯವಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ ಎಂಬ ಆಪಾದನೆಗಳೂ ಕೇಳಿಬಂದ ಹಿನ್ನೆಲೆಯಲ್ಲಿ ಚಿಲ್ಲರೆ ಉದ್ಯಮ ಮತ್ತು ಉದ್ಯಮ ಚೇಂಬರ್​ಗಳಾದ ಸಿಸಿಐ, ಎಫ್​ಸಿಸಿಐಗೆ ಗ್ರಾಹಕ ವ್ಯವಹಾರಗಳ ಸಚಿವಾಲಯವು ಈ ಸೂಚನೆ ನೀಡಿದೆ.

ಈ ರೀತಿ ಗ್ರಾಹಕರ ವೈಯಕ್ತಿಕ ಫೋನ್ ನಂಬರ್ ಕೇಳುವುದು ಅನ್ಯಾಯವೆಂದು ಪರಿಗಣಿಸಲಾಗಿದೆ ಮತ್ತು ಇದು ಗ್ರಾಹಕ ಸಂರಕ್ಷಣಾ ಕಾಯ್ದೆಗೆ ವಿರುದ್ಧವಾಗಿದೆ. ಈ ಮಾಹಿತಿ ಸಂಗ್ರಹಿಸಲು ಚಿಲ್ಲರೆ ವ್ಯಾಪಾರಿಗಳಿಗೆ ಯಾವುದೇ ಯೋಗ್ಯ ಕಾರಣವಿಲ್ಲ. ವೈಯಕ್ತಿಕ ಸಂಪರ್ಕ ವಿವರಗಳನ್ನು ಒದಗಿಸದಿದ್ದರೆ ಬಿಲ್ ಉತ್ಪಾದಿಸಲು ಸಾಧ್ಯವಿಲ್ಲ ಎಂದು ಮಾರಾಟಗಾರರು ಹೇಳುವುದು ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಅನ್ಯಾಯ ಮತ್ತು ನಿರ್ಬಂಧಿತ ವ್ಯಾಪಾರ ಪದ್ಧತಿಯಾಗಿದೆ. ವೈಯಕ್ತಿಕ ಮಾಹಿತಿ ಸಂಗ್ರಹಿಸುವುದರ ಹಿಂದೆ ಯಾವುದೇ ತರ್ಕಬದ್ಧತೆ ಇಲ್ಲ ಎಂದು ಸಚಿವಾಲಯವು ವಿವರಿಸಿರುವುದು ಇನ್ನು ಮುಂದೆ ಗ್ರಾಹಕರಿಗೆ ಈ ನಿಟ್ಟಿನಲ್ಲಿ ಉಂಟಾಗುವ ಕಿರುಕುಳ ತಪ್ಪಿಸಲು ನೆರವಾಗಬಹುದೆಂದು ಆಶಿಸಬಹುದು.

ಅಂಗಡಿಯ ಮಾಲೀಕರು ಗ್ರಾಹಕರ ವೈಯಕ್ತಿಕ ಫೋನ್ ಸಂಖ್ಯೆಗಳನ್ನು ಪಡೆದುಕೊಳ್ಳುವುದರ ಹಿಂದೆ ಸ್ವಹಿತಾಸಕ್ತಿ ಇದೆ ಎಂದು ಗ್ರಾಹಕರು ಭಾವಿಸಲನುವಾಗುತ್ತದೆ. ವೈಯಕ್ತಿಕ ಸಂಪರ್ಕ ಸಂಖ್ಯೆಗಳನ್ನು ಮಾರ್ಕೆಟಿಂಗ್ ಸಂದೇಶಗಳನ್ನು ಕಳುಹಿಸಲು ಅಥವಾ ಮಾರಾಟ ಸಂಬಂಧಿ ಕರೆಗಳನ್ನು ಮಾಡಲು ಬಳಸಿಕೊಳ್ಳುವ ಸಾಧ್ಯತೆಗಳಿವೆ. ಈ ರೀತಿ ಬರುವ ಅನಪೇಕ್ಷಿತ ಸಂದೇಶ ಮತ್ತು ಕರೆಗಳಿಂದ ಗ್ರಾಹಕರಿಗೆ ಅನಗತ್ಯ ಕಿರಿಕಿರಿ ಉಂಟಾಗುತ್ತದೆ. ಇಂತಹ ಕರೆಗಳನ್ನು ನಿರ್ಬಂಧಿಸುವ ಆಯ್ಕೆ ಗ್ರಾಹಕರ ಫೋನ್​ಗಳಲ್ಲಿ ಲಭ್ಯವಿದೆ. ಆದರೆ, ಮಳಿಗೆಗಳ ಮಾಲಿಕರು ತಮ್ಮ ಹಾಗೂ ಸಿಬ್ಬಂದಿಯ ವೈಯಕ್ತಿಕ ಫೋನ್ ಸಂಖ್ಯೆಗಳಿಂದ ಕರೆ ಮಾಡಿದರೆ ಅವುಗಳನ್ನು ಪ್ರತ್ಯೇಕವಾಗಿ ಗುರುತಿಸಿ ನಿರ್ಬಂಧಿಸಲು ಸಾಧ್ಯವಿಲ್ಲ. ಹೀಗಾಗಿ, ಇದರಿಂದಾಗುವ ಕಿರಿಕಿರಿ, ಸಮಯ ವ್ಯರ್ಥವಾಗುವುದನ್ನು ತಡೆಯಲಾಗದು.

ಎಲ್ಲಕ್ಕಿಂತ ಮುಖ್ಯವಾಗಿ ಆನ್​ಲೈನ್ ಹಾಗೂ ಸೈಬರ್ ವಂಚನೆ ಸಾಧ್ಯತೆಯ ಭೀತಿ. ಗ್ರಾಹಕರ ಮೊಬೈಲ್​ಫೋನ್ ಸಂಖ್ಯೆಗಳನ್ನು ಮಳಿಗೆಯವರು ಬೇರೆಯವರೊಂದಿಗೆ ಹಂಚಿಕೊಂಡರೆ, ಆಗ ಆ ವಿವರಗಳು ಸೈಬರ್ ವಂಚಕರ ಕೈಸೇರುವ ಸಾಧ್ಯತೆ ಅಲ್ಲಗಳೆಯಲಾಗದು. ಕರೆ ಮಾಡಿ ಇಲ್ಲವೇ ಸಂದೇಶ ಕಳುಹಿಸಿ ಹಾದಿ ತಪ್ಪಿಸುವ ಮೂಲಕ ಸೈಬರ್ ವಂಚಕರು ಅಮಾಯಕ ಗ್ರಾಹಕರನ್ನು ಸುಲಿಗೆ ಮಾಡುವ ಅಪಾಯಗಳಿಗೂ ಇದು ಅವಕಾಶ ಮಾಡಿಕೊಡುತ್ತದೆ. ಗ್ರಾಹಕರ ವೈಯಕ್ತಿಕ ಫೋನ್ ನಂಬರ್ ಪಡೆಯದಿರಲು ಸೂಚನೆ ನೀಡಿರುವ ಕೇಂದ್ರ ಸರ್ಕಾರವು ಈ ಕುರಿತಂತೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಗತ್ಯವಾದರೆ ಈ ಅಂಶವನ್ನು ಕಾನೂನಿನಲ್ಲಿ ಸೇರ್ಪಡೆ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net