ಸಂಪಾದಕೀಯ: ಉತ್ತರ ಕರ್ನಾಟಕಕ್ಕೆ ಒತ್ತು; ಬೆಳಗಾವಿ ಸಂಪುಟ ಸಭೆಯಲ್ಲಿ ನೀರಾವರಿ ಯೋಜನೆಗಳಿಗೆ ಅಸ್ತು

78542
Published on

ರಾಜ್ಯದ ಎರಡನೇ ರಾಜಧಾನಿಯಾಗಿರುವ ಬೆಳಗಾವಿಯಲ್ಲಿ ವಿಧಾನ ಮಂಡಲದ ವಿಶೇಷ ಅಧಿವೇಶನಗಳನ್ನು ಇತ್ತೀಚಿನ ವರ್ಷಗಳಲ್ಲಿ ನಡೆಸಿಕೊಂಡು ಬರಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ವರ್ಷಕ್ಕೊಮ್ಮೆ ನಡೆಯುವ ಈ ಅಧಿವೇಶನವನ್ನು ಆ ಭಾಗದ ಕುರಿತ ಸಮಸ್ಯೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆಗೆ ಮೀಸಲಿಡಬೇಕೆಂಬ ಬೇಡಿಕೆ ಇದೆ. ಜತೆಗೆ ಅಧಿವೇಶನದಿಂದ ವಿಶೇಷ ಪ್ರಯೋಜನ ಏನೂ ಆಗುತ್ತಿಲ್ಲವೆಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಇದನ್ನು ಅರಿತೋ ಏನೋ ಸುವರ್ಣ ವಿಧಾನಸೌಧದಲ್ಲಿ ಗುರುವಾರ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಗಳಿಗೆ ಐದೂವರೆ ಸಾವಿರ ಕೋಟಿ ರೂಪಾಯಿ ಮೊತ್ತದ ನೀರಾವರಿ ಯೋಜನೆಗಳನ್ನು ಪ್ರಕಟಿಸಿರುವುದು ಈ ಭಾಗದ ಜನರಿಗೆ ಒಂದಿಷ್ಟು ಸಮಾಧಾನ ತರುವ ಸಂಗತಿಯಾಗಿದೆ.

ಒಟ್ಟು 13 ಪ್ರಮುಖ ನೀರಾವರಿ ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿದೆ. ಇದರಲ್ಲಿ ಏಳು ಏತ ನೀರಾವರಿಗಳು ಸೇರಿದ್ದರೆ ಉಳಿದವುಗಳು ಕೆರೆ ತುಂಬಿಸುವ ಯೋಜನೆಗಳಾಗಿವೆ. ಇದಕ್ಕಾಗಿ ಸರ್ಕಾರ ಒಟ್ಟು 5,701 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಿದೆ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಮುಂತಾದ ಜಿಲ್ಲೆಗಳ ಜಮೀನುಗಳಿಗೆ ಕೃಷ್ಣಾ ನದಿಯ ಮೂಲಕ ನೀರಾವರಿ ಸೌಲಭ್ಯ ದೊರೆಯುತ್ತದೆ. ಈ ಯೋಜನೆಗಳಿಗೆ ಹಣಕಾಸಿನ ತೊಂದರೆಯಾಗದಂತೆ ನೋಡಿಕೊಳ್ಳುವುದು ಸಹ ಮುಖ್ಯ. ಬಚಾವತ್ ಆಯೋಗದ ತೀರ್ಪಿನ ಪ್ರಕಾರ, ಕೃಷ್ಣಾ ನದಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಹಂಚಿಕೆ ಮಾಡಲಾಗಿದೆ. ಆದರೆ, ಈ ಆಯೋಗದ ಬಿ ಸ್ಕೀಂನಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿರುವ ನೀರಿನ ಪೈಕಿ ಅಂದಾಜು 100 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳದೆ ಇರುವುದು ಈ ಭಾಗದ ರೈತರನ್ನು ನೀರಾವರಿ ಸೌಲಭ್ಯಗಳಿಂದ ವಂಚಿತರಾಗುವಂತೆ ಮಾಡಿದೆ. ಪ್ರಸ್ತುತ ಸಂಪುಟವು ಅನುಮೋದನೆ ನೀಡಿರುವ ಯೋಜನೆಗಳಲ್ಲಿ ಹಲವು ಕೃಷ್ಣಾ ನದಿ ಪಾತ್ರದ ಪ್ರದೇಶಗಳಿಗೆ ಸಂಬಂಧಿಸಿದ್ದೇ ಆಗಿವೆ. ಆದರೆ, ಕೃಷ್ಣಾ ನದಿಯಲ್ಲಿ ಬಳಸಿಕೊಳ್ಳದೆ ಇರುವ ನಮ್ಮ ಪಾಲಿನ ಅಪಾರ ಪ್ರಮಾಣದ ನೀರನ್ನು ಉಪಯೋಗಿಸಲು ವ್ಯವಸ್ಥಿತವಾದ ಯೋಜನೆಗಳನ್ನು ಜಾರಿಗೆ ತರುವ ಅಗತ್ಯ ಇದೆ.

ರಾಜ್ಯದಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಕುರಿತಂತೆ ಡಾ. ಡಿ.ಎಂ. ನಂಜುಂಡಪ್ಪ ಸಮಿತಿಯು 2002ರಲ್ಲಿ ವರದಿ ಸಲ್ಲಿಸಿತ್ತು. ಆ ಸಮಿತಿ ವರದಿಯ ಪ್ರಕಾರ ಉತ್ತರ ಕರ್ನಾಟಕದ ಪ್ರದೇಶಗಳೇ ಹೆಚ್ಚು ಹಿಂದುಳಿದಿವೆ. ರಾಜ್ಯದಲ್ಲಿ 135 ಹಿಂದುಳಿದ ತಾಲೂಕುಗಳನ್ನು ಗುರುತಿಸಿದ್ದ ಸಮಿತಿಯು ಅವುಗಳ ಅಭಿವೃದ್ಧಿಗೆ ಹಲವು ಮಾಡಿದ ಶಿಫಾರಸುಗಳನ್ನು ಮಾಡಿದೆ. ಇದರ ಜಾರಿ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ಅಲ್ಲದೆ, ಹಿಂದುಳಿದ ಪ್ರದೇಶವನ್ನು ಗುರುತಿಸಲು ನಂಜುಂಡಪ್ಪ ವರದಿಯ ಬದಲಾಗಿ ನೀತಿ ಆಯೋಗದ ಸೂಚಕಗಳನ್ನು ಮುಂದಿನ ವರ್ಷದಿಂದ ಪರಿಗಣಿಸಲು ಸರ್ಕಾರ ತೀರ್ವನಿಸಿದೆ. ಮಾನದಂಡ ಯಾವುದಿದ್ದರೂ ಒಟ್ಟಾರೆಯಾಗಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯ ರಾಜಕೀಯ ಬದ್ಧತೆ-ಇಚ್ಛಾಶಕ್ತಿಯನ್ನು ಜನಪ್ರತಿನಿಧಿಗಳು ತೋರುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net