ಒತ್ತಡ ಹೇರುವುದು ಸಲ್ಲ: ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಳ ಕಳವಳಕಾರಿ

Student
Published on

ನಮ್ಮ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 2018ರಿಂದ 2023ರ ಮಾರ್ಚ್​ವರೆಗೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 103. ಈ ಪೈಕಿ ಐಐಟಿಗಳ 35, ಕೇಂದ್ರೀಯ ವಿಶ್ವವಿದ್ಯಾಲಯಗಳ 29, ನ್ಯಾಶನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎನ್​ಐಟಿ) 24, ಏಮ್ಸ್​ನ 11 ಹಾಗೂ ಐಐಎಂಗಳ ನಾಲ್ವರು ವಿದ್ಯಾರ್ಥಿಗಳು ಸೇರಿದ್ದಾರೆ. ಇದು ರಾಜ್ಯಸಭೆಯಲ್ಲಿ ಸರ್ಕಾರವೇ ಕೊಟ್ಟಿರುವ ಅಧಿಕೃತ ಅಂಕಿಸಂಖ್ಯೆ. ಶೈಕ್ಷಣಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಅನಾರೋಗ್ಯ ಸೇರಿದಂತೆ ಹಲವು ಕಾರಣಗಳನ್ನು ಸರ್ಕಾರ ಪಟ್ಟಿ ಮಾಡಿದೆ. ಇನ್ನು, ಬಿಹಾರದಲ್ಲಿ ಕೆಲ ತಿಂಗಳುಗಳ ಹಿಂದೆ 11 ಮತ್ತು 12ನೇ ತರಗತಿಯ 10ಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆಗೆ ಶರಣಾದ ಪ್ರಕರಣ ತಲ್ಲಣ ಮೂಡಿಸಿತ್ತು.

ಪ್ರಬಲ ಪೈಪೋಟಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವಂತೆ ಮಕ್ಕಳ ಮೇಲೆ ಪಾಲಕರು ಹೇರುವ ಒತ್ತಡವೇ ದೇಶದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಲು ಪ್ರಮುಖ ಕಾರಣವಾಗಿವೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.

‘ದೇಶದಲ್ಲಿ ಕೋಚಿಂಗ್ ಸೆಂಟರ್​ಗಳು ಇರಬಾರದು ಎಂದು ಬಹುತೇಕರು ಬಯಸುತ್ತಾರೆ. ಆದರೆ, ಶಾಲೆಗಳ ಸ್ಥಿತಿ ಎಲ್ಲ ರೀತಿಯಿಂದಲೂ ಉತ್ತಮವಾಗಿಲ್ಲ. ಮತ್ತೊಂದೆಡೆ ತೀವ್ರ ಸ್ಪರ್ಧೆ ಇದೆ. ಹೀಗಾಗಿ ವಿದ್ಯಾರ್ಥಿಗಳು ತರಬೇತಿ ಕೇಂದ್ರಗಳತ್ತ ವಾಲುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪಾಲಕರ ಒತ್ತಡವೇ ಕಾರಣ’ ಎಂದಿದೆ ಸುಪ್ರೀಂ ಕೋರ್ಟ್.

ಇದು ಸ್ಪರ್ಧಾಜಗತ್ತು. ಉತ್ತಮ ವ್ಯಾಸಂಗದ ಮೂಲಕವೇ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಥಾನ ಪಡೆಯಲು ಸಾಧ್ಯ. ಅದರಲ್ಲೂ, ಸ್ಮರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಎದುರಿಸಬೇಕು ಎಂಬುದು ಬಹುತೇಕ ಪಾಲಕರ ಒತ್ತಾಸೆ. ಆದರೆ, ಇಲ್ಲಿ ವಾಸ್ತವವನ್ನು ಅರಿಯಲು ಅವರು ವಿಫಲರಾಗುತ್ತಿದ್ದಾರೆ ಎನ್ನಬಹುದು. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿ ಆಗಬೇಕಾದರೆ, ಅವರ ಆಸಕ್ತಿ ಮತ್ತು ಸಾಮರ್ಥ್ಯದ ಅನುಸಾರವಾಗಿ ಶಿಕ್ಷಣ ಕ್ರಮ ಅನುಸರಿಸಬೇಕು. ಸಮಸ್ಯೆ ಎಂದರೆ, ಪಾಲಕರು ಮಕ್ಕಳ ಆಸಕ್ತಿ ಏನೆಂಬುದನ್ನು ಗಮನಿಸುತ್ತಿಲ್ಲ, ಒಂದು ವೇಳೆ ಮಕ್ಕಳು ಆ ಬಗ್ಗೆ ಹೇಳಿಕೊಂಡರೂ, ಅದನ್ನು ನಿರ್ಲಕ್ಷಿಸಿ ತಾವು ಹೇಳಿದ ಪ್ರಕಾರ ಆಗಬೇಕು ಎಂದು ಒತ್ತಡ ಹೇರುತ್ತಾರೆ. ಇದರಿಂದ ಸಹಜವಾಗಿಯೇ, ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತದೆ.

ಯಾರೋ ವೈದ್ಯರು ಮತ್ತು ಇಂಜಿನಿಯರ್ ಆದರೆಂಬ ಕಾರಣಕ್ಕೆ ತಮ್ಮ ಮಕ್ಕಳು ಹಾಗೇ ಆಗಬೇಕು ಎಂದು ಹಠ ಹಿಡಿದು, ತರಬೇತಿ ಕೇಂದ್ರಗಳಿಗೆ ಸೇರಿಸುವುದು ಸೂಕ್ತವಲ್ಲ. ಯಶಸ್ಸಿಗೆ, ಜೀವನದ ದಾರಿಗೆ ಬೇರೆಬೇರೆ ಆಯಾಮಗಳಿವೆ. ವಿದ್ಯಾರ್ಥಿಗಳನ್ನು ಒತ್ತಡ, ಖಿನ್ನತೆಗೆ ನೂಕಿ, ಬಳಿಕ ಅವರು ಆತ್ಮಹತ್ಯೆಯ ದಾರಿ ಹಿಡಿದರೆ ಬೇರೆಯವರನ್ನು ದೂಷಿಸಿ ಏನು ಪ್ರಯೋಜನ? ಹಾಗಾಗಿ, ಬದಲಾವಣೆ ಮನೆಗಳಿಂದ, ಪಾಲಕರ ಮನಸುಗಳಿಂದ ಆರಂಭವಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net