ಸಾಮಾಜಿಕ ಅನ್ಯಾಯ: ಪರಿಶಿಷ್ಟರ ಅನುದಾನ ಸದ್ಬಳಕೆ ಅಗತ್ಯ..

Editorial
Published on

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಬಲೀಕರಣ ಹಾಗೂ ಅಭಿವೃದ್ಧಿಯ ಉದ್ದೇಶದಿಂದ ರಾಜ್ಯ ಸರ್ಕಾರದ ಬಜೆಟ್​ನಲ್ಲಿ ಪ್ರತಿ ವರ್ಷವೂ ಸಹಸ್ರಾರು ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗುತ್ತದೆ. ಆದರೆ, ಇದರಲ್ಲಿ ಸಾವಿರಾರು ಕೋಟಿ ರೂ. ಹಣವು ಅನ್ಯರ ಪಾಲಾಗುತ್ತಿರುವುದು ಬೆಳಕಿಗೆ ಬಂದಿದೆ. ಅದರಲ್ಲೂ ಸಚಿವರು ಹಾಗೂ ಆಡಳಿತಾರೂಢ ಪಕ್ಷದ ಶಾಸಕರುಗಳೇ ಈ ಮೀಸಲು ಹಣದಲ್ಲಿ ಅನುದಾನವನ್ನು ಮಂಜೂರು ಮಾಡಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪವು ಶೋಷಿತ ಸಮುದಾಯವನ್ನು ಪ್ರಭಾವಿಗಳೇ ಪರೋಕ್ಷವಾಗಿ ಶೋಷಣೆ ಮಾಡುತ್ತಿರುವುದರ ಪ್ರತೀಕವಾಗಿದೆ.

ಆಡಳಿತಾರೂಢ ಪಕ್ಷದ ಶಾಸಕರು ತಮ್ಮ ವೈಯಕ್ತಿತ ಸಂಸ್ಥೆಗಳಿಗೆ ಅನುದಾನ ರೂಪದಲ್ಲಿ ಹಣ ಪಡೆದಿದ್ದಾರೆ. ಶಿಕ್ಷಣ ಸಂಸ್ಥೆ, ಧಾರ್ವಿುಕ ಸಂಸ್ಥೆಗಳಿಗೆ ವಿಶೇಷ ಅನುದಾನ ನೆಪದಲ್ಲಿ ಅರ್ಜಿ ಸಲ್ಲಿಸಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಇದಕ್ಕಾಗಿ ಶೇ.10ರಷ್ಟು ಕಮೀಷನ್ ಪಡೆದುಕೊಳ್ಳುತ್ತಾರೆಂಬ ಆರೋಪವೂ ಬಿಜೆಪಿ ವಲಯದಲ್ಲೇ ಕೇಳಿಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ಪರಿಶಿಷ್ಟ ಜಾತಿಗಳಿಗೆ ವಿಶೇಷ ಘಟಕ ಯೋಜನೆ (ಎಸ್​ಸಿಪಿ) ಮತ್ತು ಪರಿಶಿಷ್ಟ ಪಂಗಡಗಳಿಗೆ ಬುಡಕಟ್ಟು ಉಪ ಯೋಜನೆ (ಟಿಎಸ್​ಪಿ) ಕಾಯ್ದೆಯನ್ವಯ 2021-22ರ ರಾಜ್ಯ ಬಜೆಟ್​ನಲ್ಲಿ ಯೋಜನಾ ವೆಚ್ಚದ ಶೇ. 24.1ರಷ್ಟನ್ನು (26,695 ಕೋಟಿ ರೂಪಾಯಿ) ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಡಲಾಗಿತ್ತು. ಇದರಲ್ಲಿ 7885 ಕೋಟಿ ರೂ.ಗಳನ್ನು ಮೂಲಸೌಕರ್ಯದ ಯೋಜನೆಗಳಿಗೆ ವ್ಯಯ ಮಾಡಿತ್ತು. 2018-21ರ ನಾಲ್ಕು ವರ್ಷಗಳ ಅವಧಿಯಲ್ಲಿ ಇದೇ ರೀತಿ 7885 ಕೋಟಿ ರೂಪಾಯಿಗಳನ್ನು ನೀರಾವರಿ, ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಗಳ ಯೋಜನೆಗಳಿಗೆ ಖರ್ಚು ಮಾಡಲಾಗಿದೆ. ಎಸ್​ಸಿಪಿ, ಟಿಎಸ್​ಪಿ ಹಣದ ಸ್ವಲ್ಪ ಭಾಗವನ್ನು ಸಾಮಾನ್ಯ ಮೂಲಸೌಕರ್ಯಗಳಿಗೆ ಬಳಸಲು ಕಾಯ್ದೆಯಲ್ಲಿ ಅವಕಾಶವಿರುವುದನ್ನೇ ದುರ್ಬಳಕೆ ಮಾಡಿಕೊಂಡಿರುವುದು ಗೋಚರಿಸುತ್ತದೆ.

ಇನ್ನೊಂದೆಡೆ ಪರಿಶಿಷ್ಟರ ಅಭ್ಯುದಯಕ್ಕಾಗಿ ಸರ್ಕಾರ ರೂಪಿಸಿರುವ ಎಸ್​ಸಿಪಿ, ಟಿಎಸ್​ಪಿ ಕಾಯ್ದೆಯ ಪ್ರಯೋಜನ ಕೂಡ ದಲಿತ ಉದ್ಯಮಿಗಳಿಗೆ ತಲುಪುತ್ತಿಲ್ಲ. ಪರಿಣಾಮ ನಿರೀಕ್ಷೆ ಮಾಡಿದಷ್ಟು ದಲಿತ ಉದ್ಯಮಿಗಳು ರೂಪುಗೊಂಡಿಲ್ಲ.ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯದಷ್ಟು ಭೂಮಿ ಸಿಗದಿರುವುದು, ಕೌಶಲ ತರಬೇತಿ ದೊರೆಯದಿರುವುದು, ಮೃದು ಸಾಲ ಲಭ್ಯವಾಗದಿರುವುದು, ಮೂಲಸೌಕರ್ಯ ಅಭಿವೃದ್ಧಿಯಾಗದಿರುವುದು ಇದಕ್ಕೆ ಕಾರಣ. ಪ್ರಧಾನಿ ನರೇಂದ್ರ ಮೋದಿ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡವನ್ನು ಮುಖ್ಯವಾಹಿನಿಗೆ ತರಲು ಅನೇಕ ಯೋಜನೆ-ಕಾರ್ಯಕ್ರಮ ರೂಪಿಸಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಿ ಎಸ್​ಸಿ/ಎಸ್​ಟಿ ಜನರನ್ನು ಉದ್ಯಮಿಗಳಾಗಿ ಹಾಗೂ ಉದ್ಯೋಗದಾತರಾಗಿ ರೂಪುಗೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ. ಕೇಂದ್ರದ ಮುದ್ರಾ ಯೋಜನೆಯಲ್ಲಂತೂ ಶೇ. 50ರಷ್ಟು ಫಲಾನುಭವಿಗಳು ಪರಿಶಿಷ್ಟರೇ ಆಗಿದ್ದಾರೆ. ಶೋಷಿತ ಸಮುದಾಯದೊಂದಿಗೆ ತಾವಿದ್ದೇವೆ ಎಂಬುದನ್ನು ಸಾರಲು ಸಫಾಯಿ ಕರ್ಮಚಾರಿಗಳ ಪಾದವನ್ನು ಕೂಡ ಪ್ರಧಾನಿ ತೊಳೆದಿದ್ದಾರೆ. ರಾಷ್ಟ್ರದ ಅತ್ಯುನ್ನತ ರಾಷ್ಟ್ರಪತಿ ಹುದೆಯು ಪರಿಶಿಷ್ಟ ಮಹಿಳೆಗೆ ಲಭಿಸುವಂತೆ ಮಾಡಿ ಆ ಸಮುದಾಯದ ಸ್ವಾಭಿಮಾನ ಹಾಗೂ ಗೌರವವನ್ನು ಎತ್ತಿಹಿಡಿದಿದ್ದಾರೆ. ಆದರೆ, ರಾಜ್ಯದಲ್ಲಿ ತಳಸಮುದಾಯಕ್ಕೆ ಮೀಸಲಿಟ್ಟ ಯೋಜನೆಗಳ ಪ್ರಯೋಜನ ತಲುಪದಿರುವುದು ಹಾಗೂ ಹಣ ದುರುಪಯೋಗ ಆಗುತ್ತಿರುವುದು ಸಾಮಾಜಿಕ ಅನ್ಯಾಯದ ಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net