

ಕೃಷಿ ಕ್ಷೇತ್ರ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದು, ರೈತರು ಎದುರಿಸುತ್ತಿರುವ ಸವಾಲುಗಳು ಒಂದೆರಡಲ್ಲ. ಒಂದು ವರ್ಷ ಅತಿವೃಷ್ಟಿ ಕಾಡಿದರೆ, ಇನ್ನೊಂದು ವರ್ಷ ಅನಾವೃಷ್ಟಿ. ಈ ನಡುವೆ ಪ್ರಕೃತಿ ವಿಕೋಪಗಳು ಕಾಡದೆ ಉತ್ತಮ ಬೆಳೆ ಬಂದರೂ, ಅದಕ್ಕೆ ನ್ಯಾಯಯುತ ಬೆಲೆ ಸಿಗುತ್ತದೆ ಎಂಬುದು ಖಾತ್ರಿಯಿಲ್ಲ. ಈ ಎಲ್ಲ ಸ್ಥಿತ್ಯಂತರಗಳ ಪರಿಣಾಮ ಕೃಷಿಯಿಂದ ವಿಮುಖರಾಗುವ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದೆಡೆ, ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆ ಪ್ರಮಾಣವೂ ಏರಿಕೆ ಆಗುತ್ತಿದ್ದು, ಕಳವಳದ ವಿಚಾರವೇ ಹೌದು. ಅದೇನಿದ್ದರೂ, ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಉತ್ಪಾದನೆ ಹೆಚ್ಚಿಸುವ ಹೊಣೆಗಾರಿಕೆಯೂ ಇದೆ. ಕೃಷಿ ಕ್ಷೇತ್ರವನ್ನು ಸಮಸ್ಯೆಗಳಿಂದ ಮುಕ್ತಗೊಳಿಸಿ, ಹೊಸ ಸಾಧ್ಯತೆಗಳೆಡೆಗೆ ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ರೈತರ ಹಿತವನ್ನು ಕಾಯುವುದು ಅಷ್ಟೇ ಮುಖ್ಯವಾಗಿದೆ.
ಕೃಷಿಯ ಪ್ರಸಕ್ತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಮಹತ್ವದ ಮಾತುಗಳನ್ನು ಆಡಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು- ‘ಪ್ರಕೃತಿ ವಿಕೋಪಗಳನ್ನು ಎದುರಿಸಲು, ಬೆಳೆಗಳು ಹಾಳಾಗದಂತೆ ರಕ್ಷಿಸಲು ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚಿನ ಸಂಶೋಧನೆಗಳನ್ನು ನಡೆಸಬೇಕು. ಕಡಿಮೆ ನೀರಿನಲ್ಲಿ ಯಾವೆಲ್ಲ ಬೆಳೆ ಬೆಳೆಯಬಹುದು ಎಂಬ ಮಾಹಿತಿ ರೈತರವರೆಗೆ ತಲುಪಿಸಬೇಕು. ಮುಖ್ಯವಾಗಿ, ಪ್ರಯೋಗಶಾಲೆಯಲ್ಲಿ ಕೈಗೊಂಡ ಪ್ರಯೋಗದ ಫಲಿತಾಂಶಗಳು ಕೃಷಿಭೂಮಿವರೆಗೆ ತಲುಪಬೇಕು. ಹೊಸ ತಳಿಗಳನ್ನು ಸಂಶೋಧಿಸಿದರೂ, ಅವು ರೈತರಿಗೆ ತಲುಪದಿದ್ದರೆ ಏನು ಪ್ರಯೋಜನ?’ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಕೃಷಿಗೆ ಪೂರಕವಾಗಿ ವೈಜ್ಞಾನಿಕ ಸಂಶೋಧನೆಗಳು ಹೆಚ್ಚಬೇಕು. ಇದಕ್ಕೆ ಸರ್ಕಾರ ಕೂಡ ಪ್ರೋತ್ಸಾಹ ನೀಡಲಿದೆ ಎಂದು ಅಭಯ ನೀಡಿದ್ದಾರೆ. ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ಕೃಷಿಗೆ ಸಂಬಂಧಿಸಿ ಜಾರಿಗೆ ತಂದಿರುವ ಹೊಸ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ.
ಕೃಷಿ ಕ್ಷೇತ್ರ ವ್ಯಾಪಕವಾಗಿ ಬದಲಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಸುಧಾರಿತ ಮಾಹಿತಿ-ತಂತ್ರಜ್ಞಾನ, ವೈಜ್ಞಾನಿಕ ಅನ್ವೇಷಣೆಗಳ ಬಲದಿಂದ ಸುಧಾರಣೆಯ ಹೊಸ ಸ್ಪರ್ಶವನ್ನೇ ಕೃಷಿಗೆ ನೀಡಬಹುದಾಗಿದೆ. ಕೃಷಿ ವಿಶ್ವವಿದ್ಯಾಲಯಗಳು ಇಂಥ ಪ್ರಯತ್ನಗಳನ್ನು ಹೆಚ್ಚಿಸುವುದು ಕಾಲದ ಅಗತ್ಯ. ರೈತರು ಕೃಷಿಗೆ ಪೂರಕವಾದ ಚಟುವಟಿಕೆಗಳನ್ನು ಕೈಗೊಂಡರೆ ಲಾಭದತ್ತ ಮುಖಮಾಡಲು ಸಾಧ್ಯ. ಕೃಷಿಗೆ ಸಂಬಂಧಿಸಿದ ನವೋದ್ಯಮಗಳು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ. ಸಾಂಪ್ರದಾಯಿಕ ವಿಧಾನಗಳ ಜತೆಗೆ ಹೊಸ ಪ್ರಯೋಗಗಳನ್ನು ಅನುಷ್ಠಾನಕ್ಕೆ ತಂದರೆ ಕೃಷಿಯ ಚಿತ್ರಣವೇ ಬದಲಾಗುತ್ತದೆ. ಮುಖ್ಯಮಂತ್ರಿಗಳು ಹೇಳಿರುವಂತೆ, ಕೃಷಿ ವಿವಿಗಳ ಸಂಶೋಧನೆಗಳು ರೈತರವರೆಗೂ ತಲುಪಬೇಕು. ಅಲ್ಲದೆ, ರೈತರಲ್ಲಿ ಸೂಕ್ತ ಅರಿವು, ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಆಗಲೇ ರೈತರಲ್ಲೂ ವಿಶ್ವಾಸ ಮೂಡಿಸಲು ಸಾಧ್ಯ. ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಕೃಷಿಕ್ಷೇತ್ರ ಸುಧಾರಣೆಗಳಿಗೆ ತೆರೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಮುದಾಯ; ಎರಡರ ಪಾತ್ರ ಹಾಗೂ ಸಹಕಾರ ಮುಖ್ಯ ಎಂಬುದನ್ನು ಮರೆಯುವಂತಿಲ್ಲ.