

ಪ್ರವಾಹ ಪರಿಹಾರ, ಬಜೆಟ್ ಅನುಷ್ಠಾನದ ಪ್ರಗತಿ ಪರಾಮರ್ಶೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಕಾರ್ಯಶೈಲಿ ಬದಲಾಗದಿದ್ದರೆ ಬದಲಾಯಿಸುವೆ’ ಎಂದು ಜಿಲ್ಲಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿರುವುದು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಕಾರ್ಯವೈಖರಿ ತೃಪ್ತಿಕರವಾಗಿಲ್ಲ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸುವಂತಿದೆ. ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಇದನ್ನು ಗಮನದಲ್ಲಿರಿಸಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ಮಾರ್ವಿುಕವಾಗಿ ಹೇಳಿರುವುದನ್ನು ಅಧಿಕಾರಿಗಳು ಮನಗಾಣುವ ಅವಶ್ಯಕತೆ ಇದೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಅನೇಕ ಕಡೆಗಳಲ್ಲಿ ಮನೆಗಳು ಕುಸಿದು ಜನರು ಸೂರು ಕಳೆದುಕೊಂಡಿದ್ದಾರೆ. ಮುಂಗಾರು ಫಸಲನ್ನು ಬಹುತೇಕವಾಗಿ ನುಂಗಿರುವ ವರುಣ, ಹಿಂಗಾರು ಕೂಡ ರೈತರ ಕೈಗೆಟುಕದ ರೀತಿಯಲ್ಲಿ ಮಳೆ ಮುಂದುವರಿಸಿದ್ದಾನೆ.
ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಗೀಡಾಗಿರುವ ಮನೆ ಹಾಗೂ ಬೆಳೆ ಪರಿಹಾರ ವಿತರಣೆ ತೃಪ್ತಿಕರವಾಗಿಲ್ಲ ಎಂಬ ಸಂಗತಿಯು ಸಹಜವಾಗಿಯೇ ಮುಖ್ಯಮಂತ್ರಿಗೆ ಆಕ್ರೋಶ ತಂದಿದ್ದು, ಪರಿಹಾರ ವಿತರಣೆಯ ನೇರ ಜವಾಬ್ದಾರಿ ಹೊಂದಿರುವ ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಪರಿಹಾರ ಕಾರ್ಯ ಕೈಗೊಳ್ಳದಿರುವುದರಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿರುವುದು ಸಮೀಪಿಸುತ್ತಿರುವ ವಿಧಾನಸಭೆ ಚುನಾವಣೆಯ ಒತ್ತಡದ ಸೂಚನೆ ಎಂಬಂತಿದೆ.
ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವುದು ಇದೇ ಮೊದಲೇನಲ್ಲ. ಕೆಳಹಂತದ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು ಎಂಬ ಆಲೋಚನೆಯನ್ನು ಜಿಲ್ಲಾಧಿಕಾರಿಗಳು ಬಿಡಬೇಕು. ವಿವೇಚನೆ, ವಿನಯತೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂಬ ಸಲಹೆ ಸೂಚನೆಗಳನ್ನು ಕೆಲ ತಿಂಗಳುಗಳ ಹಿಂದೆ ಅವರು ನೀಡಿದ್ದರು. ಆರೋಗ್ಯ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ಇಲ್ಲದಿರುವ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಮಂಗಳೂರಿನಲ್ಲಿ ಕೋವಿಡ್ ಪರಿಶೀಲನೆ ಸಭೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು ಶಾಸಕಾಂಗವನ್ನು ಪ್ರತಿನಿಧಿಸುತ್ತಾರೆ. ಶಾಸಕಾಂಗವು ರೂಪಿಸುವ ನೀತಿ- ನಿಯಮಗಳನ್ನು ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆ ಕಾರ್ಯಾಂಗದ ಮೇಲಿರುತ್ತದೆ. ಶಾಸಕಾಂಗ ಹಾಗೂ ಕಾರ್ಯಾಂಗದ ಕೊಂಡಿಯಂತೆ ಕಾರ್ಯನಿರ್ವಹಿಸುವ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಶಾಸಕಾಂಗ ವಹಿಸಿದ ಜವಾಬ್ದಾರಿಗಳನ್ನು ಅನುಷ್ಠಾನಕ್ಕೆ ತರಲು ಕಾರ್ಯಾಂಗಕ್ಕೆ ಸಲಹೆ-ಸೂಚನೆಗಳನ್ನು ನೀಡುವುದು ಸುಸೂತ್ರ ಆಡಳಿತಕ್ಕೆ ಅಗತ್ಯವೂ ಆಗಿರುತ್ತದೆ. ಕಾರ್ಯಾಂಗದಲ್ಲಿ ಬಹಳ ಮಹತ್ವದ ಪಾತ್ರ ಸರ್ಕಾರಿ ನೌಕರರು, ಅಧಿಕಾರಿಗಳದ್ದಾಗಿರುತ್ತದೆ. ಇನ್ನು ಜಿಲ್ಲಾಧಿಕಾರಿಯೆಂದರೆ ಆ ಜಿಲ್ಲೆಯ ಎಲ್ಲ ಜವಾಬ್ದಾರಿ ಹೊಂದಿರುತ್ತಾರೆ. ಹೀಗಾಗಿ, ಅವರಿಂದ ಉತ್ತಮ ಕೆಲಸ ನಿರೀಕ್ಷಿಸುವುದು ಸಹಜವೇ ಆಗಿದೆ. ಅದರಲ್ಲೂ ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದ ಜನರು ಸಂಕಷ್ಟಕ್ಕೆ ಸಿಲುಕಿರುವಾಗ, ಜಿಲ್ಲಾ ಮಟ್ಟದಲ್ಲಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂಬುದು ಅಪೇಕ್ಷಣೀಯವೇ ಆಗಿದೆ.
ಮನೆ ಹಾಗೂ ಬೆಳೆ ಹಾನಿಯ ಪರಿಹಾರದ ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳ ಹೆಸರನ್ನು ವೆಬ್ಪೋರ್ಟಲ್ಗೆ ಸೇರಿಸಲು ಅಕ್ಟೋಬರ್ ಅಂತ್ಯದವರೆಗೂ ಸರ್ಕಾರ ಕಾಲಾವಕಾಶ ಸರ್ಕಾರ ನೀಡಿದೆ. ಈಗಲಾದರೂ ಜಿಲ್ಲಾಧಿಕಾರಿಗಳು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಆಡಳಿತವನ್ನು ಚುರುಕುಗೊಳಿಸಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದೆ.