'ಕಾಂತಾರ'ಕ್ಕೆ ಕರಾವಳಿ ಬೆಡಗಿಯರ ಮೆಚ್ಚುಗೆ: ಅನುಷ್ಕಾ ಶೆಟ್ಟಿ ಬಳಿಕ ಇದೀಗ ಶಿಲ್ಪಾ ಶೆಟ್ಟಿ...

Kantara
Published on

ಬೆಂಗಳೂರು: ಫಾರಿನ್ ಲೊಕೇಷನ್​, ಗಾಂಧಿನಗರದ ಸಿದ್ಧಸೂತ್ರ ಯಾವುದೂ ಇರದೆ, ಒಂದು ಸಣ್ಣ ಊರಿನಲ್ಲಿ ಶೂಟಿಂಗ್ ಆದ, ಹಳ್ಳಿ ಸೊಗಡಿನ ಕಥಾಹಂದರದ 'ಕಾಂತಾರ' ಬರೀ ಕನ್ನಡ ಭಾಷೆಯಲ್ಲೇ ಜಗತ್ತಿನಾದ್ಯಂತ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾತ್ರವಲ್ಲ, ಚಿತ್ರಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯಿಂದಾಗಿ ಅದೀಗ ಹಿಂದಿ ಜತೆಗೆ ದಕ್ಷಿಣ ಭಾರತದ ಇತರ ಭಾಷೆಗಳಿಗೂ ಡಬ್​ ಆಗಿ ಬಿಡುಗಡೆಗೊಂಡಿದೆ.

ಹೀಗಾಗಿ ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳ ಸಿನಿಮಾ ದಿಗ್ಗಜರೂ ಕಾಂತಾರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಇದು ಬೇರೆ ಕಡೆಯ ಪ್ರೇಕ್ಷಕರಿಗೆ ಉತ್ತಮ ಸಿನಿಮಾ ಎಂಬ ಫೀಲ್ ಕೊಡುತ್ತಿದ್ದರೆ, ಕರಾವಳಿಯ ಕಡೆಯವರಿಗೆ ಅತ್ಯುತ್ತಮ ಎನ್ನುವ ಅನುಭವ ನೀಡುತ್ತಿದೆ. ಅದೇ ಕಾರಣಕ್ಕೆ ಈ ಸಿನಿಮಾ ಬಗ್ಗೆ ಈಗಾಗಲೇ ಕರಾವಳಿ ಬೆಡಗಿ, ತೆಲುಗಿನಲ್ಲಿ ಖ್ಯಾತ ನಟಿಯಾಗಿರುವ ಅನುಷ್ಕಾ ಶೆಟ್ಟಿ ಹೊಗಳಿ ಮಾತನಾಡಿದ್ದರು. ಇದೀಗ ಶಿಲ್ಪಾ ಶೆಟ್ಟಿ ಸರದಿ.

ಬಾಲಿವುಡ್​ ನಟಿ, ಕರಾವಳಿ ಮೂಲಕ ಶಿಲ್ಪಾ ಶೆಟ್ಟಿ ಕಾಂತಾರ ಸಿನಿಮಾ ನೋಡಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಂತಾರ ಸಿನಿಮಾವನ್ನು ನೋಡಿದೆ. ಎಂಥ ನಿರೂಪಣೆ, ಎಂಥ ಭಾವನೆ, ಕ್ಲೈಮ್ಯಾಕ್ಸ್​ ಅಂತೂ ರೋಮಾಂಚಕ. ಇದು ಸಿನಿಮಾದ ಶಕ್ತಿ. ಇದು ನನಗೆ ನನ್ನದೇ ಪ್ರಪಂಚದೊಳಕ್ಕೆ ಕರೆದೊಯ್ದಿದೆ, ನನ್ನನ್ನು ನನ್ನ ಮೂಲಕ್ಕೆ ತೆಗೆದುಕೊಂಡು ಹೋಗಿದೆ. ಯಾವುದೇ ಭೇದಭಾವ ಇಲ್ಲದೆ, ಇದು ಚಿತ್ರಕಥೆ, ಅಭಿನಯ, ತೊಡಗಿಸಿಕೊಂಡ ರೀತಿ, ನಿರ್ದೇಶನದಿಂದಾಗಿ ನೋಡಲೇಬೇಕಾದ ಸಿನಿಮಾ ಎಂದಿರುವ ಶಿಲ್ಪಾ ಶೆಟ್ಟಿ, ರಿಷಬ್​ ಶೆಟ್ಟಿ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿ, ಹ್ಯಾಟ್ಸಾಫ್ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net