

ತುಮಕೂರು: ಆದಾಯ ತೆರಿಗೆ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು ಕಾರಿನಲ್ಲಿ ತಿರುಗಾಡುತ್ತಿದ್ದವನೊಬ್ಬ ಗಸ್ತು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ತುಮಕೂರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಕುಣಿಗಲ್ ತಾಲೂಕಿನ ಸಂಕೇನಪುರದ ನಿವಾಸಿ ಶಿವಣ್ಣ (45) ಸಿಕ್ಕಿಬಿದ್ದ ಆರೋಪಿ.
ತನ್ನ ಇಟಿಯೋಸ್ ಕಾರಿನ ಹಿಂದೆ ಹಾಗೂ ಮುಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಂದು ನಾಮಫಲಕ ಹಾಕಿಸಿಕೊಂಡಿದ್ದ ಈತ, ಇಲಾಖೆ ಕಾರಿನ ರೀತಿಯಲ್ಲೇ ಅದನ್ನು ಇರಿಸಿಕೊಂಡಿದ್ದ. ಕುಣಿಗಲ್ ಪೊಲೀಸರು ಗಸ್ತಿನಲ್ಲಿದ್ದಾಗ ಅನುಮಾನ ಉಂಟಾಗಿ ಕಾರು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಾರು ಹಾಗೂ ಶಿವಣ್ಣ ಇಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂದು ಹೇಳಿಕೊಂಡು ಈತ ಹಲವರಿಗೆ ವಂಚನೆ ಮಾಡಿರುವ ಶಂಕೆಯ ಮೇರೆಗೆ ಕುಣಿಗಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.