ರಾಜಕೀಯ ಹಗೆತನ ಬೇಡ: ರಾಜ್ಯಪಾಲರು, ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟ ಒಳ್ಳೆಯದಲ್ಲ

Editorial
Published on

ನಿಜಕ್ಕೂ ಇದು ದುರದೃಷ್ಟಕರ ಬೆಳವಣಿಗೆ. ರಾಜ್ಯ ಸರ್ಕಾರಗಳು ಮತ್ತು ರಾಜ್ಯಪಾಲರ ನಡುವಿನ ತಿಕ್ಕಾಟ ಮಿತಿಮೀರಿದ್ದು, ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತ ಎಂದೇ ಹೇಳಬಹುದು. ಈ ಕುರಿತಾದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನವೆಂಬರ್ 10ರಂದು ಪಂಜಾಬ್ ಮತ್ತು ತಮಿಳುನಾಡು ರಾಜ್ಯಪಾಲರ ವಿರುದ್ಧ ಚಾಟಿ ಬೀಸಿತ್ತು. ಅಲ್ಲದೆ, ‘ನೀವು ಬೆಂಕಿಯೊಡನೆ ಆಟವಾಡುತ್ತಿದ್ದೀರಿ’ ಎಂದು ರಾಜ್ಯಪಾಲರಿಗೆ ಎಚ್ಚರಿಸಿತ್ತು. ರಾಜ್ಯ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳ ಬಗ್ಗೆ ಆಕ್ಷೇಪಗಳಿದ್ದರೆ ರಾಜ್ಯಪಾಲರು ಸ್ಪಷ್ಟನೆ ಕೋರಿ ಅದನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಬೇಕೆ ಹೊರತು, ಅನಿರ್ದಿಷ್ಟ ಕಾಲದವರೆಗೆ ಸರ್ಕಾರ ಕಾಯುವಂತೆ ಮಾಡಬಾರದು. ಇದರಿಂದ ಸರ್ಕಾರದ ಕಾರ್ಯನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಈ ಬೆಳವಣಿಗೆಯ ಬಳಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆ ಇತ್ತಾದರೂ, ತಮಿಳುನಾಡಿನಲ್ಲಿ ವ್ಯತಿರಿಕ್ತವಾಗಿದೆ. ಅಲ್ಲಿನ ರಾಜ್ಯಪಾಲ ಎನ್.ರವಿ ಬಾಕಿ ಇರುವ ಹತ್ತು ಮಸೂದೆಗಳನ್ನು ಸರ್ಕಾರಕ್ಕೆ ವಾಪಸ್ ಕಳಿಸಿದ್ದಾರೆ. ಅವುಗಳಲ್ಲಿ ಎರಡು ಹಿಂದಿನ ಎಐಎಡಿಎಂಕೆ ಸರ್ಕಾರ ಅಂಗೀಕರಿಸಿದ್ದಾಗಿವೆ. ಈ ಬೆಳವಣಿಗೆಯ ಬೆನ್ನಲ್ಲೇ, ತಮಿಳುನಾಡು ಸ್ಪೀಕರ್ ಎಂ. ಅಪ್ಪಾವು ನಾಳೆ (ಶನಿವಾರ) ವಿಶೇಷ ಅಧಿವೇಶನ ಕರೆದಿದ್ದಾರೆ. ಅಧಿವೇಶನದಲ್ಲಿ ಎಲ್ಲ ಮಸೂದೆಗಳನ್ನು ಮತ್ತೆ ಅಂಗೀಕರಿಸಿ ರಾಜ್ಯಪಾಲರಿಗೆ ಕಳಿಸುವ ಸಾಧ್ಯತೆ ಇದೆ. ಎರಡನೇ ಬಾರಿ ಮಸೂದೆ ಅಂಗೀಕಾರವಾದರೆ ಆಗ ರಾಜ್ಯಪಾಲರು ಸಹಿ ಹಾಕಲೇಬೇಕಾಗುತ್ತದೆ.

ಇಲ್ಲಿ ಎರಡೂ ಆಯಾಮಗಳಿಂದ ಪ್ರಕರಣವನ್ನು ಗಮನಿಸಬೇಕಿದೆ. ತಮಿಳುನಾಡು ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ನೇಮಿಸುವ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲು ಅಲ್ಲಿನ ಸರ್ಕಾರ ಮುಂದಾಗಿದ್ದು, ಈ ಮಸೂದೆಗೆ ರಾಜ್ಯಪಾಲರು ವಿರೋಧ ವ್ಯಕ್ತಪಡಿಸಿದ್ದಾರೆ. ಅದೇ ರೀತಿ, ಎಐಎಡಿಎಂಕೆ ಮಾಜಿ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮಸೂದೆ ರಾಜಕೀಯ ಹಗೆತನದಿಂದ ಕೂಡಿದೆ ಎಂಬುದು ರಾಜ್ಯಪಾಲರ ವಾದ. ಇಲ್ಲಿ ಸರ್ಕಾರ ಕೂಡ ಎಡವಿದೆ. ಕಾನೂನು ರೂಪಿಸುವ ಅಧಿಕಾರ ಅದಕ್ಕಿದೆಯಾದರೂ, ಅದು ವಿರೋಧಿಗಳನ್ನು ಹಣಿಯುವ ರಾಜಕೀಯದ ಅಸ್ತ್ರವಾಗಬಾರದು. ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ಸರ್ಕಾರ ನಡುವಿನ ಸಂಘರ್ಷ ತೀವ್ರಸ್ವರೂಪ ಪಡೆದುಕೊಂಡಿರುವುದಕ್ಕೆ ಇದೇ ಕಾರಣ. ಇನ್ನು, ರಾಜ್ಯಪಾಲರು ಕೂಡ ವಿರೋಧಕ್ಕಾಗಿ ವಿರೋಧ ಎಂಬ ನಡೆಯನ್ನು ಅನುಸರಿಸಬಾರದು.

ಸುಪ್ರೀಂ ಕೋರ್ಟ್ ಹೇಳಿರುವಂತೆ, ‘ಅಂತರಾತ್ಮದಲ್ಲಿ ಇಣುಕಿ, ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು’. ರಾಜ್ಯಪಾಲರ ಕಚೇರಿಗಳು ರಾಜಕೀಯ ಚಟುವಟಿಕೆಗಳ ತಾಣವಾಗಬಾರದು. ಅವರ ಅಧಿಕಾರದ ವ್ಯಾಪ್ತಿಯನ್ನು ಸರ್ಕಾರ ಅತಿಕ್ರಮಿಸಬಾರದು. ಎರಡೂ ಕಡೆ ಸಂಯಮ ಹಾಗೂ ಕಾನೂನಿನ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net