

ಶೇಕಡಾ 99 ಭಾರತೀಯ ಪಾದಚಾರಿಗಳು ಅಪಘಾತಕ್ಕೆ ಈಡಾಗುವ ಅಪಾಯ ಎದುರಿಸುತ್ತಿದ್ದಾರೆ ಎಂದು ಬಾಷ್ ಲಿಮಿಟೆಡ್ ಕಂಪನಿಯ ಅಧ್ಯಯನ ವರದಿಯೊಂದು ಹೇಳಿರುವುದು ಶೇಕಡಾ 100ರಷ್ಟು ಸತ್ಯ ಎನ್ನುವಂತಹ ವಾತಾವರಣವೇ ವಾಸ್ತವದಲ್ಲಿ ಕಂಡುಬರುತ್ತದೆ. ದೇಶದಲ್ಲಿ ಪ್ರತಿ ಹತ್ತು ಸಂಚಾರ ಅಪಘಾತಗಳ ಪೈಕಿ ಒಂದು ಪಾದಚಾರಿ ಸಂಬಂಧಿತವಾಗಿರುತ್ತದೆ. 2021ರಲ್ಲಿ ಭಾರತದ ಪಾದಚಾರಿ ಸಾವುಗಳು 29,200 ರಷ್ಟಿದ್ದು, 60,000 ಮಂದಿ ಗಾಯಗೊಂಡಿದ್ದಾರೆ. ಇದು ಇಡೀ ಐರೋಪ್ಯ ಒಕ್ಕೂಟ ರಾಷ್ಟ್ರಗಳು ಮತ್ತು ಜಪಾನ್ ದೇಶಗಳಲ್ಲಿ ಒಟ್ಟಾರೆಯಾಗಿ ಸಂಭವಿಸಿದ ರಸ್ತೆ ಅಪಘಾತದ ಸಾವುಗಳನ್ನು ಮೀರಿದೆ. ಗ್ರಾಮೀಣ ರಸ್ತೆಗಳಲ್ಲಿ ಸಂಭವಿಸುವ ಪಾದಚಾರಿ ಅಪಘಾತಗಳಲ್ಲಿ ಅರ್ಧದಷ್ಟು ಜನರು ಸಾವಿಗೀಡಾಗುತ್ತಾರೆ ಎಂದೂ ವರದಿಯಲ್ಲಿ ಹೇಳಿರುವುದು ಕಳವಳಕಾರಿ ಸಂಗತಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಯೋಜನೆಗಳಲ್ಲಿ ಫುಟ್ಪಾತ್ಗಳನ್ನು ಯೋಗ್ಯ ರೀತಿಯಲ್ಲಿ ನಿರ್ವಿುಸಲು ಗಮನ ನೀಡಲಾಗುತ್ತಿಲ್ಲ. ವಾಹನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ರಸ್ತೆಗಳನ್ನು ಅಗಲದಲ್ಲಿ ವಿಸ್ತರಿಸುವುದು ಸಾಮಾನ್ಯವಾಗುತ್ತಿದೆ. ಈ ವಿಸ್ತರಣೆಗೆ ಬಲಿಯಾಗುವುದು ಬಹುತೇಕವಾಗಿ ಪಾದಚಾರಿ ಮಾರ್ಗವೇ ಆಗಿರುತ್ತದೆ. ಇದರಿಂದಾಗಿ ಮಹಾನಗರ, ನಗರ, ಪಟ್ಟಣ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳು ನಿರಂತರವಾಗಿ ಅಗಲದಲ್ಲಿ ಕಿರಿದಾಗುತ್ತಲೇ ಹೋಗುತ್ತಿವೆ. ಅಂಡರ್ಪಾಸ್, ಫ್ಲೈ ಓವರ್, ಮೆಟ್ರೋ ರೈಲು.. ಹೀಗೆ ಹಲವು ಸಂಚಾರ ಮೂಲಸೌಕರ್ಯಗಳನ್ನು ರೂಪಿಸುವಾಗ ಪಾದಚಾರಿ ಮಾರ್ಗದ ಜಾಗವನ್ನೇ ಕಬಳಿಸಲಾಗುತ್ತದೆ. ಬೆಂಗಳೂರಿನಲ್ಲಿಯೇ ಮೆಟ್ರೋ ನಿಲ್ದಾಣದ ಮುಂಭಾಗದಲ್ಲಿನ ಫುಟ್ಪಾತ್ಗಳು ಕೆಲವೆಡೆ 2-3 ಅಡಿ ಮಾತ್ರ ಅಗಲ ಇವೆ. ಇಲ್ಲಿ ನಡೆದುಕೊಂಡು ಹೋಗುವಾಗ ಆಯತಪ್ಪಿಬಿದ್ದರೆ, ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಜಾರಿ ರಸ್ತೆಗೆ ಬಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಬಹುತೇಕ ಅಂಡರ್ಪಾಸ್ಗಳಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ.
ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್, ಸಂಚಾರ ದೀಪಗಳ ಕಂಬ, ಗೂಡಂಗಡಿ, ಮರಗಳು, ಕಸದಬುಟ್ಟಿ, ಬಸ್ ನಿಲ್ದಾಣ... ಇವೆಲ್ಲವಕ್ಕೂ ಫುಟ್ಪಾತ್ನಲ್ಲೇ ಜಾಗ ಕಲ್ಪಿಸಲಾಗುತ್ತದೆ. ಕೆಲವೆಡೆ ಫುಟ್ಪಾತ್ನಲ್ಲಿಯೇ ಬಣ್ಣ ಬಳಿದು ಸೈಕಲ್ ಸಂಚಾರಕ್ಕೆ ಮಾರ್ಗ ತೋರಿಸಲಾಗಿದೆ. ಇಂತಹ ಕಡೆಗಳಲ್ಲಿ ಬೈಕ್ ಸವಾರರೂ ನುಗ್ಗಿ ಪಾದಚಾರಿಗಳಿಗೆ ಭೀತಿ ಸೃಷ್ಟಿಸುವುದು ಸಾಮಾನ್ಯವಾಗುತ್ತಿದೆ. ಹಲವು ಕಡೆಗಳಲ್ಲಿ ಹಾಲಿನ ಮಳಿಗೆಗಳು ಸಂಪೂರ್ಣ ಫುಟ್ಪಾತ್ ನುಂಗಿಹಾಕಿವೆ. ಇಂತಹ ಕಡೆಗಳಲ್ಲೆಲ್ಲ ಜನರು ಅನಿವಾರ್ಯವಾಗಿ ರಸ್ತೆಗಿಳಿಯುವುದರಿಂದ ಅಪಘಾತ ಸಾಧ್ಯತೆ ಹೆಚ್ಚಾಗುತ್ತದೆ. ಸಂಚಾರ ದೀಪಗಳಿರುವಲ್ಲಿ ಪಾದಚಾರಿಗಳು ರಸ್ತೆಗಳನ್ನು ದಾಟಲು ನಿಗದಿ ಮಾಡಿರುವ ಸಮಯವೂ ಕಡಿಮೆ ಇದ್ದು, ಓಡಿಕೊಂಡೇ ರಸ್ತೆ ದಾಟಬೇಕಾದ ಪರಿಸ್ಥಿತಿ ಇದೆ. ಸಂಚಾರ ಯೋಜನೆ ತಯಾರಿಸುವವರು ವಾಹನ ಸಂಚಾರ ಸುಗಮವಾಗಿಸುವತ್ತ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪಾದಚಾರಿಗಳ ಓಡಾಟದತ್ತ ತೋರುತ್ತಿರುವ ದಿವ್ಯ ನಿರ್ಲಕ್ಷ್ಯವನ್ನು ತೊರೆಯಬೇಕಿದೆ.
ಪಾಶ್ಚಿಮಾತ್ಯ ಜಗತ್ತಿನಲ್ಲಿ ಚಾಲಕನು ವಾಹನವನ್ನು ನಿಲ್ಲಿಸುತ್ತಾನೆ ಮತ್ತು ಪಾದಚಾರಿಗಳು ದಾಟಲು ಅನುವು ಮಾಡಿಕೊಡುತ್ತಾನೆ. ಆದರೆ, ಭಾರತದಲ್ಲಿ ಅಂಥ ರಸ್ತೆ ಶಿಸ್ತಿನ ಮಾನಸಿಕತೆಯೇ ಇನ್ನೂ ಬೆಳೆಯಬೇಕಿದೆ. ನಿರಂತರವಾಗಿ ವಾಹನಗಳಲ್ಲಿಯೇ ಓಡಾಡಿದರೂ ಒಂದಿಲ್ಲೊಂದು ಸಮಯದಲ್ಲಿ ಫುಟ್ಪಾತ್ ಬಳಕೆ ಅನಿವಾರ್ಯ ಹಾಗೂ ಪಾದಚಾರಿಗಳಾಗಿಯೇ ಸಾಗಬೇಕಾಗುತ್ತದೆ ಎಂಬ ವಾಸ್ತವವನ್ನು ಪ್ರತಿಯೊಬ್ಬ ವಾಹನ ಚಾಲಕನೂ ಅರಿತುಕೊಂಡಾಗ ಪಾದಚಾರಿಗಳಿಗಿರುವ ಅಪಾಯ ತಗ್ಗಿಸಲು ಸಾಧ್ಯ.