ಬಡ್ಡಿ ದರ ಇಳಿಕೆಯಾಗಲಿ: ಹಣದುಬ್ಬರ ದರ ಕುಸಿತ, ನಿಯಂತ್ರಣದಲ್ಲಿ ಬೆಲೆಗಳು

Editorial
Published on

ಕಳೆದ ಡಿಸೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ದರವು ಶೇ. 5.72ಕ್ಕೆ ಇಳಿಕೆಯಾಗಿ ಕಳೆದ ಒಂದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ. ಈ ದರವು ಕಳೆದ ಅಕ್ಟೋಬರ್​ನಲ್ಲಿ ಶೇ. 6.77 ಹಾಗೂ ನವೆಂಬರ್​ನಲ್ಲಿ ಶೇ. 5.88 ಇತ್ತು. ಹಣದುಬ್ಬರ ದರ ಕಡಿಮೆಯಾಗಲು ಮುಖ್ಯ ಕಾರಣ ಆಹಾರ ಪದಾರ್ಥಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಎಂಬುದು ಸಾರ್ವಜನಿಕರಿಗೆ ಒಂದಿಷ್ಟು ಸಮಾಧಾನಕರ ತರುವ ಸಂಗತಿಯಾಗಿದೆ. ಆಹಾರ ಪದಾರ್ಥಗಳ ಹಣದುಬ್ಬರ ದರವು ಕಳೆದ ನವೆಂಬರ್​ನಲ್ಲಿ ಶೇ. 4.67 ಇದ್ದುದು ಡಿಸೆಂಬರ್​ನಲ್ಲಿ ಶೇ. 4.19ಕ್ಕೆ ಇಳಿಕೆಯಾಗಿದೆ.

ದೇಶದ ಉತ್ತಮ ಆರ್ಥಿಕ ಸ್ಥಿತಿಗತಿಯ ದೃಷ್ಟಿಯಿಂದ ಹಣದುಬ್ಬರ ದರವು ಶೇ. 2ರಿಂದ 6ರ ವ್ಯಾಪ್ತಿಯೊಳಗೆ ಇರಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಬಯಸುತ್ತದೆ. ಸರಕು ಮತ್ತು ಸೇವೆಗಳ ಬೆಲೆಗಳಲ್ಲಿ ಹೆಚ್ಚಳವಾಗುವುದೇ ಹಣದುಬ್ಬರ ದರ ಏರಿಕೆಯಾಗಿದ್ದು, ಇದನ್ನು ಜನಸಾಮಾನ್ಯರ ಭಾಷೆಯಲ್ಲಿ ಬೆಲೆ ಏರಿಕೆ ಎಂದು ಗುರುತಿಸಬಹುದಾಗಿದೆ. ಹಣದುಬ್ಬರ ದರ ಒಂದು ಮಿತಿಗಿಂತ ಹೆಚ್ಚಾದ ಸಂದರ್ಭದಲ್ಲಿ ಇದನ್ನು ನಿಯಂತ್ರಿಸಲು ಆರ್​ಬಿಐ ಸಾಮಾನ್ಯವಾಗಿ ರೆಪೊ ದರ ಏರಿಕೆ ಅಸ್ತ್ರವನ್ನು ಪ್ರಯೋಗಿಸುತ್ತದೆ. ಹಣದ ಹರಿವನ್ನು ನಿಯಂತ್ರಿಸಿ ಸರಕು ಮತ್ತು ಸೇವೆಗಳ ಬೆಲೆಯನ್ನು ನಿಯಂತ್ರಿಸುವುದು ಇದರ ಉದ್ದೇಶ. 2026ರವರೆಗೂ ಹಣದುಬ್ಬರ ಪ್ರಮಾಣವನ್ನು ಶೇ. 4-6ರ ವ್ಯಾಪ್ತಿಯಲ್ಲಿ ಕಾಯ್ದುಕೊಳ್ಳುವಂತೆ ಸರಕಾರ ಆರ್​ಬಿಐಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಆರ್​ಬಿಐ ಸತತ 4 ಬಾರಿ ಸಾಲಗಳ ಮೇಲಿನ ಬಡ್ಡಿ ದರ ಏರಿಕೆಯನ್ನು ಕಳೆದ ವರ್ಷ ಮಾಡಿತ್ತು. ಡಿಸೆಂಬರ್ 7ರಂದು ಕೊನೆಯ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು 35 ಮೂಲ ಅಂಕ ಏರಿಕೆ ಮಾಡಿತ್ತು. ಇದಕ್ಕೂ ಮುನ್ನ ಮೂರು ಬಾರಿ ರೆಪೋ ದರವನ್ನು 50 ಮೂಲ ಅಂಕ ಹೆಚ್ಚಳ ಮಾಡಿತ್ತು. ಇದರಿಂದಾಗಿ 2020ರ ಅಕ್ಟೋಬರ್ ಶೇ. 4ರಷ್ಟಿದ್ದ ರೆಪೊ ದರವು ಈಗ ಶೇ. 6.25ಕ್ಕೆ ಏರಿಕೆಯಾಗಿದೆ. ವಾಣಿಜ್ಯ ಬ್ಯಾಂಕ್​ಗಳಿಗೆ ಆರ್​ಬಿಐ ವಿಧಿಸುವ ಬಡ್ಡಿ ದರವಾಗಿರುವ ರೆಪೋ ದರದ ಏರಿಕೆ ಪರಿಣಾಮವಾಗಿ ಗೃಹ, ವಾಹನ ಮುಂತಾದ ಸಾಲ ಪಡೆದುಕೊಂಡ ಗ್ರಾಹಕರ ಐಎಂಐ ಪಾವತಿಯಲ್ಲಿ ಹೆಚ್ಚಳವಾಗಿದೆ.

ಎರಡು ವರ್ಷಗಳ ಕೋವಿಡ್ ಸಾಂಕ್ರಾಮಿಕದ ಸಂಕಷ್ಟ ಹಾಗೂ ಪ್ರಸ್ತುತ ರಷ್ಯಾ-ಯೂಕ್ರೇನ್ ಯುದ್ಧದ ಪರಿಣಾಮವಾಗಿ ಜಗತ್ತಿನ ಎಲ್ಲ ದೇಶಗಳಲ್ಲಿ ಬೆಲೆ ಏರಿಕೆ ಹೆಚ್ಚುತ್ತಲೇ ಸಾಗಿದ್ದು, ಹಣದುಬ್ಬರ ದರವನ್ನು ನಿಯಂತ್ರಣಕ್ಕೆ ತರುವುದು ಸವಾಲಿನ ಸಂಗತಿಯಾಗಿದೆ. ಹಣದುಬ್ಬರ ದರವು ನೆರೆಯ ರಾಷ್ಟ್ರಗಳಾದ ಪಾಕಿಸ್ತಾನದಲ್ಲಿ ಶೇ. 35, ಶ್ರೀಲಂಕಾದಲ್ಲಿ ಶೇ. 65ರಷ್ಟಿದೆ. ಚೀನಾದಲ್ಲಿ ಶೇ. 2ರ ಆಸುಪಾಸಿನಲ್ಲಿದೆ. ಜಾಗತಿಕವಾಗಿ ಒಟ್ಟಾರೆ ಹಣದುಬ್ಬರ ದರವು ಶೇ. 8.8ರಷ್ಟಿದೆ. ಈ ಅಂಕಿ-ಅಂಶಗಳನ್ನು ಪರಿಗಣಿಸಿದರೆ ಭಾರತದ ಹಣದುಬ್ಬರ ದರವು ತೃಪ್ತಿಕರ ಮಟ್ಟದಲ್ಲಿದೆ ಎನ್ನಬಹುದಾಗಿದೆ. ಹಣದುಬ್ಬರ ಹೆಚ್ಚಳವಾದಾಗ ಏರಿಸಲಾಗದ ರೆಪೋ ದರವನ್ನು ಈ ಹಣದುಬ್ಬರ ಕಡಿಮೆಯಾದ ಹಿನ್ನೆಲೆಯಲ್ಲಿ ಇಳಿಸಬೇಕೆಂಬುದು ಸಾರ್ವಜನಿಕರ ಸಹಜ ನಿರೀಕ್ಷೆಯಾಗಿದೆ. ಆರ್​ಬಿಐನ ಮುಂದಿನ ಹಣಕಾಸು ನೀತಿ ಸಮಿತಿ ಸಭೆಯು ಫೆಬ್ರವರಿ 6-8ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಬಡ್ಡಿ ದರ ಇಳಿಸುವ ಶುಭ ಸುದ್ದಿಯನ್ನು ಆರ್​ಬಿಐ ನೀಡಬಹುದೆಂದು ಅಪೇಕ್ಷಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net