

ಜನರ ಕೈಗೆ ಅಧಿಕಾರ ಕೊಡುವ, ಜವಾಬ್ದಾರಿ ಹಂಚಿಕೆ ಮಾಡುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ 26 ಕಾರ್ಯಕ್ರಮಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವರ್ಗಾಯಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ ಎನ್ನಲಾಗಿದೆ. ಶೈಕ್ಷಣಿಕ ಪ್ರಗತಿಗೆ ಸರ್ಕಾರದ ಈ ಕ್ರಮ ಎಷ್ಟು ಪೂರಕವಾಗಿದೆ. ಹಾಗೂ ಇದರ ಸಾಧಕ-ಬಾಧಕಗಳೇನು ಎಂಬ ಬಗ್ಗೆ ಆಲೋಚನೆ ಮಾಡಬೇಕಾಗಿದೆ.
ಚುನಾಯಿತ ಜನಪ್ರತಿನಿಧಿಗಳಿಗೆ ಅಧಿಕಾರದ ಅವಕಾಶ ಕಲ್ಪಿಸಬೇಕು ಎನ್ನುವ ಏಕೈಕ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿರುವ ಲಕ್ಷಣಗಳಿವೆ. ಅಂದರೆ ಶೈಕ್ಷಣಿಕ ಪ್ರಗತಿಗಿಂತ ಬೇರೆ ಉದ್ದೇಶವೇ ಇಲ್ಲಿ ಪ್ರಮುಖವಾದಂತೆ ಕಾಣಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರ ಮೇಲೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸವಾರಿ ಮಾಡುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಸರ್ಕಾರದ ಈ ಯೋಜನೆ ಜಾರಿಗೆ ಬಂದರೆ ಈ ಆರೋಪಗಳು ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ಇಲ್ಲದಿಲ್ಲ.
ಸರ್ಕಾರದ ಈ ಕ್ರಮದಿಂದ ಶಿಕ್ಷಕರ ಹಾಜರಾತಿ ತಪಾಸಣೆ ಹಾಗೂ ಪರಿಶೀಲನೆ ಮಾಡುವ ಹಾಗೂ ಅನಧಿಕೃತ ಗೈರಾದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಎಸ್ಡಿಎಂಸಿ ಅಧ್ಯಕ್ಷರಿಗೆ ದೊರೆಯಲಿದೆ. ಅತಿಥಿ ಶಿಕ್ಷಕರ ನೇಮಕ, ಮಧ್ಯಾಹ್ನದ ಬಿಸಿಯೂಟ ಕಾರ್ಯಕರ್ತರ ನೇಮಕ, ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಬಿಡುಗಡೆ, ಪುಸ್ತಕ ಹಾಗೂ ನೋಟ್ ಪುಸ್ತಕ, ಮಧ್ಯಾಹ್ನದ ಊಟ, ಹಾಲು, ಮೊಟ್ಟೆ, ಬಾಳೆಹಣ್ಣು, ಚಿಕ್ಕಿ, ಅಗತ್ಯ ಸಾಮಗ್ರಿ ಪೂರೈಕೆ, ಅಧಿಕಾರವೂ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರದ ಈ ಉದ್ದೇಶದಲ್ಲಿ ಕೆಲವು ಒಳ್ಳೆಯ ಅಂಶಗಳನ್ನು ಗುರುತಿಸಬಹುದು. ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವಿಕೆ, ತಂಬಾಕು ನಿಷೇಧ, ಆರೋಗ್ಯ ತಪಾಸಣೆ, ಮಕ್ಕಳ ಹಕ್ಕುಗಳ ಜಾಗೃತಿ ಮತ್ತು ಬಾಲಕಿಯರ ಹಕ್ಕುಗಳ ತಿಳಿವಳಿಕೆ, ಸಾಕ್ಷರತಾ ಕೇಂದ್ರಗಳ ನಿಯಂತ್ರಣ ಮತ್ತು ನಿರ್ವಹಣೆ ಅಧಿಕಾರವನ್ನು ನೀಡಬಹುದು. ಇದರಿಂದ ಸಮಸ್ಯೆಯಾಗದು. ಆದರೆ ಶಿಕ್ಷಕರನ್ನು ನಿಯಂತ್ರಿಸುವ ಅಧಿಕಾರ ಮತ್ತು ಖರೀದಿ ಚಟುವಟಿಕೆಗಳು ಸಮಸ್ಯೆ ಸೃಷ್ಟಿಗೆ ಕಾರಣವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಸ್ಥಳೀಯ ಸಂಸ್ಥೆಗಳ ಸದಸ್ಯರು ಶಿಕ್ಷಣ ಇಲಾಖೆ ಮೇಲೆ ಈಗಾಗಲೇ ಪ್ರಭಾವ ಬೀರುತ್ತಿದ್ದಾರೆ. ಈಗ ಅವರಿಗೆ ಅನಪೇಕ್ಷಿತ ಮತ್ತಷ್ಟು ಅಧಿಕಾರ ಕಲ್ಪಿಸಿದರೆ ಪೂರಕಕ್ಕಿಂತ ಮಾರಕವಾಗಬಹುದು. ಎಸ್ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯರು ಈಗಾಗಲೇ ಶಾಲೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬು ದೂರುಗಳು ಇವೆ. ಶಿಕ್ಷಕರ ರಜೆ ಮತ್ತು ವೇತನ ಬಿಡುಗಡೆಯಂತಹ ಅಧಿಕಾರವನ್ನೂ ಅವರಿಗೆ ಕಲ್ಪಿಸಿದರೆ ಕಾನೂನುಬಾಹಿರವಾದ ತಮ್ಮ ಮಾತನ್ನು ಗೌರವಿಸದ ಶಿಕ್ಷಕರ ಮೇಲೆ ಹಗೆತನ ಸಾಧಿಸುವ ಸಾಧ್ಯತೆಗಳೂ ಇವೆ.
ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೆ ಅಗತ್ಯ ಸಂಖ್ಯೆಯ ಶಾಲಾ ಕೊಠಡಿಗಳನ್ನು ನಿರ್ವಿುಸಲು ಸಾಧ್ಯವಾಗಿಲ್ಲ. ಹಳೆಯ ಕಟ್ಟಡಗಳಲ್ಲೇ ಮಕ್ಕಳು ಪಾಠ ಕೇಳುವ ದುಸ್ಥಿತಿ ಇದೆ. ರಿಪೇರಿ ಕಾಣದೆ ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತಿವೆ. ಶಿಕ್ಷಕರ ಕೊರತೆ ಕಾಡುತ್ತಿದೆ. ಮಕ್ಕಳಿಗೆ ಶೌಚಗೃಹಗಳಿಲ್ಲ. ಮಕ್ಕಳ ಕೊರತೆ ಕಾರಣ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿ ಹಲವೆಡೆ ಇದೆ. ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದನ್ನು ಸರ್ಕಾರ ಆಲೋಚನೆ ಮಾಡಬೇಕು. ಹಳ್ಳಿಗಳಲ್ಲಿ ಗುಂಪುಗಾರಿಕೆ ಸರ್ವೆಸಾಮಾನ್ಯ. ಅಧಿಕಾರ ಸಿಕ್ಕರೆ ಈ ಗುಂಪುಗಾರಿಕೆಯೂ ದುಷ್ಪರಿಣಾಮ ಬೀರಬಹುದು. ಸರ್ಕಾರ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು.
ಪಠ್ಯಕ್ರಮ ಬದಲಾವಣೆ ವಿಚಾರ ರಾಜಕೀಯ ಸ್ವರೂಪ ಪಡೆದು ಕೊಂಡಿರುವುದು ಗೊತ್ತಿರುವ ಸಂಗತಿ. ಈಗ ಯಾವುದೋ ಕಾರಣಕ್ಕೆ ಸ್ಥಳೀಯ ಜನಪ್ರತಿನಿಧಿಗಳಿಗೆ ಅಧಿಕಾರ ಕೊಡುವ ಆಲೋಚನೆ ಮಾಡಿರುವುದು ಎಷ್ಟು ಸರಿ? ಎಸ್ಡಿಎಂಸಿ ಮತ್ತು ಗ್ರಾಪಂ ಸದಸ್ಯರಿಗೆ ಯಾವ ಯಾವ ಅಧಿಕಾರ ಕೊಡಬೇಕು ಎಂಬುದು ಚರ್ಚಾಸ್ಪದ.