ಗುಣಗ್ರಾಹಿತ್ವವಿರಲಿ: ಪಕ್ಷಾಧಾರಿತವಾಗಿ ನಿರ್ಣಯ ಆಗದಿರಲಿ

Indira Canteen (1)
Published on

ಕಡಿಮೆ ದರದಲ್ಲಿ ಊಟ ಉಪಾಹಾರ ನೀಡುವ ಇಂದಿರಾ ಕ್ಯಾಂಟೀನ್​ಗಳಿಗೆ ಮರುಜೀವ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬೆಂಗಳೂರಿನಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಈ ಕೇಂದ್ರಗಳ ಸ್ಥಿತಿಗತಿ ಕುರಿತು ಅವರು ಅಧಿಕಾರಿಗಳಿಂದ ವಿವರ ಪಡೆದಿದ್ದು, ಹೊಸ ಟೆಂಡರ್ ಕರೆಯಲು ಸಿದ್ಧತೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಬೆಂಗಳೂರೊಂದರಲ್ಲೇ 250 ಇಂದಿರಾ ಕ್ಯಾಂಟೀನ್ ಆರಂಭಿಸಲು ಆಲೋಚಿಸಲಾಗಿದೆ. ಉಳಿದಂತೆ ರಾಜ್ಯದ ಎಲ್ಲೆಡೆಯೂ ಕ್ರಮೇಣ ಚಾಲನೆ ಸಿಗುವ ಸಾಧ್ಯತೆ ಇದೆ.

ಈ ಕ್ಯಾಂಟೀನುಗಳಿಗೆ ತಗುಲುವ ವೆಚ್ಚದಲ್ಲಿ, ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ತಲಾ ಶೇ.50 ಭರಿಸುವುದೆಂದು ನಿಶ್ಚಯವಾಗಿದೆ. ಉಳಿದೆಡೆಗಳಲ್ಲಿ ಸರ್ಕಾರ ಶೇ. 70 ಮತ್ತು ಆಯಾ ಸ್ಥಳೀಯ ಸಂಸ್ಥೆಗಳು ಶೇ.30 ಹಣವನ್ನು ಭರಿಸಬೇಕಾಗುತ್ತದೆ. ಇಲ್ಲಿ ನೀಡಲಾಗುವ ಆಹಾರಕ್ರಮದಲ್ಲಿ ಬದಲಾವಣೆ ಮಾಡಲಾಗುವುದು; ಆದರೆ ದರದಲ್ಲಿ ವ್ಯತ್ಯಾಸ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಈ ಯೋಜನೆ ಜಾರಿಗೆ ಬಂದಿತ್ತು. ನಂತರದಲ್ಲಿ ಅನುದಾನ ಕೊರತೆ, ಅವ್ಯವಹಾರ, ಆಹಾರ ಗುಣಮಟ್ಟದ ಕುರಿತು ದೂರು ಇತ್ಯಾದಿ ಕಾರಣದಿಂದ ಕ್ರಮೇಣವಾಗಿ ಇವುಗಳ ಹೊಳಪು ಕುಂದುತ್ತ ಬಂತು. ಕೊನೆಕೊನೆಗೆ ಎಷ್ಟೋ ಕ್ಯಾಂಟೀನುಗಳು ಬಂದ್ ಆದವು; ಕೆಲವು ಹಾಗೂಹೀಗೂ ಏದುಸಿರು ಬಿಡುತ್ತ ನಡೆದವು. ಈಗ ಮತ್ತೆ ಪುನರಾರಂಭದ ಮುಹೂರ್ತ ಕೂಡಿಬಂದಹಾಗಿದೆ. ಅಂದಹಾಗೆ, ಈ ಯೋಜನೆ ಹೆಸರಿನ ಬಗ್ಗೆ ಪರ-ವಿರೋಧಗಳೂ ಇರುವುದು ಬೇರೆಮಾತು.

ನಮ್ಮಲ್ಲಿ ಪಕ್ಷಾಧಾರಿತ ವ್ಯವಸ್ಥೆ ಇರುವುದರಿಂದಾಗಿ, ಆಯಾ ಪಕ್ಷದ ಸೈದ್ಧಾಂತಿಕ ಹಿನ್ನೆಲೆ, ಅಭಿವೃದ್ಧಿ ಪರಿಕಲ್ಪನೆ, ಮುಂದಾಳತ್ವ ಇತ್ಯಾದಿ ಆಧಾರದ ಮೇಲೆ, ಆ ಪಕ್ಷ ಸರ್ಕಾರ ರಚಿಸಿದರೆ ಅದರ ಕಾರ್ಯಕ್ರಮಗಳು, ಯೋಜನೆಗಳು ರೂಪುಗೊಳ್ಳುತ್ತವೆ. ಅದರಲ್ಲೂ ತನ್ನ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಪ್ರತಿ ಪಕ್ಷವೂ ಒತ್ತು ನೀಡಿ ಕೆಲಸ ಮಾಡುತ್ತದೆ; ಆ ಯೋಜನೆ ಜಾರಿಗೆ ಹೆಚ್ಚು ಮುತುವರ್ಜಿ ವಹಿಸುತ್ತದೆ. ಹಾಗೇ, ಪ್ರತಿ ಸರ್ಕಾರದಲ್ಲೂ ಒಂದಷ್ಟು ಉತ್ತಮ ಯೋಜನೆಗಳಿರಬಹುದು; ಜನಪರ ಆಲೋಚನೆಗಳಿರಬಹುದು. ಸರ್ಕಾರ ಬದಲಾದಾಕ್ಷಣ, ಬೇರೆ ಪಕ್ಷ ಅಧಿಕಾರಕ್ಕೆ ಬಂತೆಂಬ ಒಂದೇ ಕಾರಣಕ್ಕೆ ಉತ್ತಮ ಪರಿಕಲ್ಪನೆಗಳಿಗೆ ಎಳ್ಳುನೀರು ಬಿಡಬೇಕೆಂದೇನೂ ಇಲ್ಲ. ಈ ರೀತಿ ಮಾಡಿದಲ್ಲಿ ನಿಜವಾಗಿ ನಷ್ಟವಾಗುವುದು ಜನರಿಗೆ ಮತ್ತು ಒಟ್ಟಾರೆ ವ್ಯವಸ್ಥೆಗೆ.

ಇಂಥದೊಂದು ಮನಸ್ಥಿತಿಗೆ ಉದಾರ ನಿಲುವು ಮತ್ತು ಜನಪರ ಕಾಳಜಿ ಬೇಕಾಗುತ್ತದೆ. ‘ಅವರು ತಂದ ಯೋಜನೆ ನಾವೇಕೆ ಮುಂದುವರಿಸಬೇಕು?’ ಎಂದು ಒಂದು ರಾಜಕೀಯ ಪಕ್ಷ ಆಲೋಚಿಸುವುದು; ‘ಹಿಂದೆ ನಾವು ಜಾರಿಗೊಳಿಸಿದ ಯೋಜನೆಯನ್ನು ಅವರು ರದ್ದುಗೊಳಿಸಿದ್ದರು. ನಾವೂ ಹಾಗೇ ಮಾಡಿ ಪಾಠ ಕಲಿಸಬೇಕು’ಎಂದು ಮತ್ತೊಂದು ಪಕ್ಷ ಆಲೋಚಿಸುವುದು- ಇಂಥ ಧೋರಣೆಯಿಂದ ಪ್ರಯೋಜನವಾಗದು. ಅಗತ್ಯ ಎನಿಸಿದಲ್ಲಿ ಯೋಜನೆಯಲ್ಲಿ ಪರಿಷ್ಕರಣೆ ಅಥವಾ ಮಾರ್ಪಾಡು ಮಾಡುವುದು ಬೇರೆ; ಯೋಜನೆಯನ್ನೇ ಮೂಲೆಗೊತ್ತುವುದು ಬೇರೆ. ಯಾವ ಪಕ್ಷದ ಸರ್ಕಾರವಿದ್ದರೂ ಈ ಧಾಟಿಯಲ್ಲಿ ಚಿಂತನೆ ನಡೆಸಿ ಆಡಳಿತ ನಡೆಸಬೇಕು; ಇಂಥ ವಿವೇಕ-ವಿವೇಚನೆಯನ್ನು ನಾಯಕರು ಪ್ರದರ್ಶಿಸಬೇಕು ಎಂಬುದು ಜನರ ನಿರೀಕ್ಷೆ-ಅಪೇಕ್ಷೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net