ಸಂಪಾದಕೀಯ: ನಿರ್ಲಕ್ಷ್ಯದ ಪರಮಾವಧಿ; ನಮ್ಮ ಮೆಟ್ರೋ ಕಾಮಗಾರಿ ಸುರಕ್ಷತೆಗೆ ಆದ್ಯತೆ ಅಗತ್ಯ

4587
Published on

ವಾಹನ ದಟ್ಟಣೆಯಿಂದಲೇ ಅಪಖ್ಯಾತಿಗೆ ಪಾತ್ರವಾಗಿರುವ ರಾಜಧಾನಿಯ ಸಂಚಾರ ಸುಧಾರಣೆಯಲ್ಲಿ ನಮ್ಮ ಮೆಟ್ರೋ ನೀಡುತ್ತಿರುವ ಕೊಡುಗೆ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿಯೇ ಮೆಟ್ರೊ ಮಾರ್ಗವನ್ನು ವಿಸ್ತರಿಸುವ ಮೂಲಕ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾಮಗಾರಿಗಳು ಹಲವಾರು ಕಡೆಗಳಲ್ಲಿ ಭರದಿಂದ ಸಾಗಿವೆ. ಈಗಾಗಲೇ ಇರುವ ಹಸಿರು ಮತ್ತು ನೇರಳೆ ಮಾರ್ಗಗಳನ್ನು ಇನ್ನಷ್ಟು ವಿಸ್ತರಿಸಲು ಹಾಗೂ ವಿವಿಧ ದಿಕ್ಕುಗಳಿಂದ ಈ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಜಂಕ್ಷನ್​ಗಳ ಸಂಖ್ಯೆಯನ್ನು ಹೆಚ್ಚಲು ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ. ಆದರೆ, ಇಷ್ಟೊಂದು ಜನಪ್ರಿಯ ಹಾಗೂ ಸಾರ್ವಜನಿಕ ಸ್ನೇಹಿ ಯೋಜನೆಗೆ ಈಗ ಕಪು್ಪಚುಕ್ಕೆ ಅಂಟಿಕೊಂಡಿದೆ. ಕಳೆದ ಮಂಗಳವಾರ ನಾಗವಾರದ ಎಚ್​ಬಿಆರ್ ಲೇಔಟ್ ಬಳಿ ಸಂಭವಿಸಿದ ಮೆಟ್ರೋ ಪಿಲ್ಲರ್ ದುರಂತವು ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದರ ಹಿಂದೆಯೇ ಗುರುವಾರ ಬ್ರಿಗೇಡ್ ರಸ್ತೆಯಲ್ಲಿ ಮೆಟ್ರೋ ಕಾಮಗಾರಿಯಿಂದ ಉಂಟಾದ ರಸ್ತೆಗುಂಡಿಗೆ ಬಿದ್ದು ಬೈಕ್ ಸವಾರರೊಬ್ಬರು ಗಾಯಗೊಂಡಿದ್ದಾರೆ. ಮೆಟ್ರೋ ಕಾಮಗಾರಿಗಳಿಂದಾಗಿ ಸಂಭ ವಿಸಿದ ಈ ಅವಘಡಗಳು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿಗಳು 15 ವರ್ಷಗಳ ಹಿಂದೆಯೇ ಆರಂಭಗೊಂಡಿವೆ. ಬೈಯ್ಯಪ್ಪನಹಳ್ಳಿ ಮತ್ತು ಮಹಾತ್ಮ ಗಾಂಧಿ ರಸ್ತೆ ನಡುವಿನ ನೇರಳೆ ಮಾರ್ಗದ ನಿರ್ವಣಕ್ಕಾಗಿ 2007ರ ಏಪ್ರಿಲ್ 15ರಂದು ಮೊದಲ ಬಾರಿಗೆ ಮೆಟ್ರೋ ಕಾಮಗಾರಿ ಪ್ರಾರಂಭಗೊಂಡಿತು. 2019ರ ಮೇ ತಿಂಗಳಲ್ಲಿ ಕ್ರೇನ್ ಜರ್ಕ್ ಆಗಿ ಬ್ಯಾರಿಕೇಡ್​ಗೆ ತಗುಲಿದಾಗ ಆಟೋ ಅಪಘಾತಕ್ಕೀಡಾಗಿ ವೃದ್ಧನ ತಲೆಗೆ ಪೆಟ್ಟಾಗಿತ್ತು. 2019ರ ನವೆಂಬರ್​ನಲ್ಲಿ ಕಾಮಗಾರಿ ಸ್ಥಳದಲ್ಲಿ ಕ್ರಷ್ ಇಳಿಸುತ್ತಿದ್ದಾಗ ಚೈನ್ ತುಂಡಾಗಿ ಕಾರ್ವಿುಕ ಸಾವನ್ನಪ್ಪಿದ್ದ. 2020ರ ಫೆಬ್ರುವರಿಯಲ್ಲಿ ಎಸ್ಕಲೇಟರ್ ಅಳವಡಿಸುತ್ತಿದ್ದ ವೇಳೆ ಮತ್ತೊಬ್ಬ ಕಾರ್ವಿುಕ ಬಿದ್ದು ಮೃತಪಟ್ಟಿದ್ದ. 2018ರ ಅಕ್ಟೋಬರ್​ನಲ್ಲಿ ಕೆ.ಆರ್.ಪುರ ಮೆಟ್ರೋ ಕಾಮಗಾರಿ ವೇಳೆ ಗ್ಯಾಸ್​ಪೈಪ್ ಲೈನ್ ಒಡೆದುಹೋಗಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಇಷ್ಟೆಲ್ಲ ಅವಘಡಗಳು ಕಣ್ಮುಂದೆ ಇದ್ದರೂ ಕಾಮಗಾರಿ ಸ್ಥಳದಲ್ಲಿ ಮುನ್ನೆಚ್ಚರಿಕೆಯಾಗಿ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳದೆ ಎರಡು ಜೀವಗಳ ಬಲಿಗೆ ಕಾರಣವಾಗಿರುವುದು ಮುಂಜಾಗ್ರತೆ ಕ್ರಮಗಳ ಕೊರತೆಗೆ ಕನ್ನಡಿ ಹಿಡಿಯುತ್ತದೆ.

ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಇಂಜಿನಿಯರ್​ಗಳನ್ನು ಬಿಎಂಆರ್​ಸಿಎಲ್ (ಬೆಂಗಳೂರು ಮೆಟ್ರೋ ರೇಲ್ ಕಾಪೋರೇಶನ್ ಲಿಮಿಟೆಡ್) ಅಮಾನತು ಮಾಡಿ ಆದೇಶ ಹೊರಡಿಸಿದೆ. ಘಟನೆಗೆ ಕಾರಣದ ತನಿಖೆ ಮಾಡಿ ವರದಿ ನೀಡುವಂತೆ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ಗೆ ಪತ್ರವನ್ನು ಕೂಡ ಕಳುಹಿಸಿದೆ. ಆದರೆ, ಮೇಲ್ನೋಟದಲ್ಲಿಯೇ ಗೊತ್ತಾಗುವ ಸಂಗತಿ ಏನೆಂದರೆ, ಇದು ಕಳಪೆ ಕಾಮಗಾರಿ ವಿಷಯವಲ್ಲ ಎಂಬುದು. ‘ಈ ಮಾರ್ಗದಲ್ಲಿ ಕಬ್ಬಿಣದ ಚೌಕಟ್ಟು ನಿಲ್ಲಿಸಿ ಹಲವು ದಿನ ಕಳೆದಿದ್ದರೂ ಅದಕ್ಕೆ ಕಾಂಕ್ರೀಟ್ ಹಾಕಿರಲಿಲ್ಲ. ಹೀಗಾಗಿ, ಭಾರ ಹೆಚ್ಚಾಗಿ ವಾಲಿಕೊಂಡಿತ್ತು. ಇತರೆ ಚೌಕಟ್ಟುಗಳಿಗಿಂತ ಉರುಳಿಬಿದ್ದ ಚೌಕಟ್ಟು ತುಸು ಎತ್ತರವಾಗಿತ್ತು’ ಎಂದು ಸ್ಥಳೀಯರು ಹೇಳಿರುವುದು ವಾಸ್ತವವನ್ನು ತೆರೆದಿಡುವಂತಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಎರಡು ಅಮಾಯಕ ಜೀವಗಳು ಬಲಿಯಾದ ಮೇಲೆ ಬಿಎಂಆರ್​ಸಿಎಲ್ ಅವಘಡದ ಸ್ಥಳದಲ್ಲಿ ಮೆಟ್ರೋ ಪಿಲ್ಲರ್​ಗೆ ಸುರಕ್ಷಾ ಸಾಧನ ಅಳವಡಿಸಿದೆ. ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದ್ದರೆ ಈ ದುರಂತವೇ ಸಂಭವಿಸುತ್ತಿರಲಿಲ್ಲ. ಇನ್ನು ಮುಂದಾದರೂ ಕಾಮಗಾರಿ ಸ್ಥಳಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಿ ಮುನ್ನೆಚ್ಚರಿಕೆ ವಹಿಸಿದರೆ ಅಪಘಡಗಳನ್ನು ತಪ್ಪಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net