ಮಹಿಳೆ ವೇಷ ಧರಿಸಿ ಲಕ್ಷಾಂತರ ಬೆಲೆಯ ಹೂ ಗಿಡಗಳನ್ನು ಕದ್ದ ಖದೀಮ!

Police arrests man accused of stealing anthurium plants after disguising himself as woman
Published on

ಕೊಚ್ಚಿ: ಹೂವಿಗೂ ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಇದೆ. ಹೀಗಾಗಿ ಅನೇಕ ಮಂದಿ ಇಂದು ಅಲಂಕಾರಿಕ ಹೂಗಳ ಕೃಷಿ ಮಾಡಿ, ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತೆಯೇ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹೂವಿನ ಕೃಷಿ ಮಾಡುವಾಗ ಜಾಗರೂಕತೆ ಹಾಗೂ ಭದ್ರತೆಯೂ ಅತೀ ಮುಖ್ಯವಾಗುತ್ತದೆ. ಕಾರಣ ಕಳ್ಳರ ಕಣ್ಣು ಹೂವಿನ ಮೇಲಿರುತ್ತದೆ.

ಇದೀಗ ಬರೋಬ್ಬರಿ ಎರಡು ಲಕ್ಷ ರೂಪಾಯಿ ಮೌಲ್ಯದ ಅಂತೂರಿಯಮ್ ಹೂವಿನ ಗಿಡಗಳನ್ನು ಕದ್ದ ಆರೋಪಿಯನ್ನು ಕೇರಳದ ರಾಜ್ಯದ ಕೊಲ್ಲಂ ಚವರ ಗ್ರಾಮದ ಪುದುಕ್ಕಾಡ್ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿನೀತ್ ಕ್ಲೀಟಸ್(28) ಬಂಧಿತ ಆರೋಪಿ.

ವಿಲಾಸಿನಿ ಭಾಯಿ ಎಂಬುವವರು ಕಳೆದ ಕೆಲ ವರ್ಷಗಳಿಂದ ಅಂತೂರಿಯಮ್ ಹೂವಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ತಮ್ಮ ಮನೆಯಂಗಳದಲ್ಲಿ ಬೆಲೆಬಾಳುವ ವಿವಿಧ ಮಾದರಿಯ ಅಂತೂರಿಯಮ್ ಹೂವಿನ ಕುಂಡಗಳನ್ನು ಜೋಡಿಸಿಟ್ಟಿದ್ದರು. ಇದನ್ನು ಅರಿತುಕೊಂಡಿದ್ದ ಬಂಧಿತ ಆರೋಪಿ ವಿನೀತ್, ಮನೆಯಿಂದ ಸುಮಾರು 200 ಅಂತೂರಿಯಮ್ ಹೂಕುಂಡಗಳನ್ನು ಕದ್ದೊಯ್ದಿದ್ದಾನೆ.

ಆರೋಪಿ ವಿನೀತ್ ಅಂತೂರಿಯಮ್ ಹೂಕುಂಡಗಳನ್ನು ಕಳ್ಳತನ ನಡೆಸಲು ವಿಭಿನ್ನ ಆಲೋಚನೆ ಮಾಡಿದ್ದಾನೆ. ಯಾರಿಗೂ ಅನುಮಾನ ಬರಬಾರದೆಂದು ಮಹಿಳೆಯ ವೇಷ ತೊಟ್ಟು ಹೂಕುಂಡಗಳನ್ನು ಕಳ್ಳತನ ಮಾಡಿ ಹೊರ ಸಾಗಿಸಿದ್ದಾನೆ. ಈತನ ಕೃತ್ಯ ಮುಂಜಾಗ್ರತೆಗೆಂದು ವಿಲಾಸಿನಿ ಭಾಯಿ ತಮ್ಮ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರಯಾಗಿದೆ.

ಅಂತೂರಿಯಮ್ ಹೂಕುಂಡಗಳು ಕಳ್ಳತನವಾಗಿರುವ ಬಗ್ಗೆ ವಿಲಾಸಿನಿ ಭಾಯಿ ಪೊಲೀಸ್ ದೂರು ನೀಡಿದ್ದಾರೆ ಅದರಂತೆ ಪೊಲೀಸರು ಸಿಸಿಟಿವಿ ಪರಿಶೀಲಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಈ ವೇಳೆ ಖದೀಮ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ತಂಡ ರಚಿಸಿ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಕದ್ದೊಯ್ದ ಹೂಕುಂಡಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮಾರಾಟ ಮಾಡಲು ಯತ್ನಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ನೆಯ್ಯಟಿಂಕರ ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net