ಯುವಶಕ್ತಿ ಸದ್ಬಳಕೆಯಾಗಲಿ: ಗ್ರಾಮೀಣ, ನಗರ ಯುವಶಕ್ತಿ ಸಮೀಕರಣ ಉದ್ದೇಶ ಸಫಲವಾಗಲಿ

MY Bharat
Published on

ಯುವ ಸಮುದಾಯದ ಅಭಿವೃದ್ಧಿ ಮತ್ತು ತಂತ್ರಜ್ಞಾನದಿಂದ ಮುನ್ನಡೆಸಲ್ಪಡುವ ಯುವಜನರ ನೇತೃತ್ವದಲ್ಲಿ ದೇಶದ ಅಭಿವೃದ್ಧಿ ಹಾಗೂ ಯುವಜನರಿಗೆ ಸಮಾನವಾದ ಪ್ರವೇಶ ಒದಗಿಸುವ ಮೇರಾ ಯುವ ಭಾರತ್ (ಎಂವೈ ಭಾರತ್) ಎಂಬ ಸ್ವಾಯತ್ತ ಸಂಸ್ಥೆ ಸ್ಥಾಪನೆಗೆ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆ ಅಕ್ಟೋಬರ್ 31ರಂದು ಚಾಲನೆ ಪಡೆಯಲಿದೆ. ಅಭಿವೃದ್ಧಿಶೀಲ ಭಾರತ ನಿರ್ವಣಕ್ಕೆ ಯುವಶಕ್ತಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದು ಹಾಗೂ ಅಭಿವೃದ್ಧಿಗೆ ಇದನ್ನು ಸಂಪೂರ್ಣ ಸರ್ಕಾರಿ ವೇದಿಕೆಯನ್ನಾಗಿ ಮಾಡುವುದೇ ಎಂವೈ ಭಾರತ್​ನ ಪ್ರಾಥಮಿಕ ಉದ್ದೇಶ. ಈ ಮೂಲಕ ರಾಷ್ಟ್ರ ನಿರ್ವಣಕ್ಕಾಗಿ ಅಪಾರ ಯುವಶಕ್ತಿಯನ್ನು ಬಳಸಿಕೊಳ್ಳುವ ಪ್ರಯತ್ನ ಇದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಭಾರತದ ಭವಿಷ್ಯವೇ ಯುವ ಸಂಪತ್ತು. ಭವಿಷ್ಯದ 25 ವರ್ಷಗಳಲ್ಲಿ ಈ ಯುವಶಕ್ತಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿಯಲ್ಲಿ ಗಣನೀಯ ಸಾಧನೆ ಮಾಡುವುದು ಈ ಯೋಜನೆಯ ಹಿಂದಿನ ಉದ್ದೇಶ ಎಂದು ಹೇಳಲಾಗಿದೆ. ಗ್ರಾಮೀಣ ಪ್ರದೇಶದ ಯುವಶಕ್ತಿಯ ಅವಶ್ಯಕತೆಯನ್ನು ಗುರುತಿಸಿ ನಗರ ಯುವಕರೊಂದಿಗೆ ಸಮೀಕರಿಸಿ ಅಭಿವೃದ್ಧಿಯ ಹಾದಿಯಲ್ಲಿ ಒಟ್ಟಿಗೆ ತೆಗೆದುಕೊಂಡು ಹೋಗುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಲಾಗಿದೆ. ಯುವಶಕ್ತಿಯ ಅಭಿವೃದ್ಧಿಗೆ ಸರ್ಕಾರದ ಎಲ್ಲ ವೇದಿಕೆಗಳನ್ನು ಬಳಕೆ ಮಾಡಿಕೊಳ್ಳುವುದು ಯೋಜನೆಯ ಪ್ರಾಥಮಿಕ ಗುರಿಯಾಗಿದೆ. ರಾಷ್ಟ್ರ ನಿರ್ವಣದಲ್ಲಿ ಅವರನ್ನು ವ್ಯವಸ್ಥಿತವಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತದೆ. ಮೇರಾ ಯುವ ಭಾರತ್ ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಯುವಜನ ವ್ಯವಹಾರಗಳ ವಿಭಾಗದ ಚಟುವಟಿಕೆಗಳಿಗೆ ನೆರವಾಗಲಿದೆ. ಇಂದಿನ ಸಮಕಾಲೀನ ತಂತ್ರಜ್ಞಾನ ನೇತೃತ್ವದ ವೇದಿಕೆಯಲ್ಲಿ ಯುವಶಕ್ತಿಯನ್ನು ತೊಡಗಿಸುವುದರಿಂದ ಅವರ ಸಾಮರ್ಥ್ಯ ವೃದ್ಧಿ ಹಾಗೂ ಸಮುದಾಯ ಚಟುವಟಿಕೆಗಳಲ್ಲಿ ಗಣನೀಯ ಪರಿಣಾಮ ಸಾಧ್ಯವಿದೆ.

ಮೇರಾ ಯುವ ಭಾರತ್ ಸ್ವಾಯತ್ತ ಸಂಸ್ಥೆಯಾಗಿದ್ದು, 15ರಿಂದ 29 ವರ್ಷದೊಳಗಿನ ಯುವ ಸಮೂಹಕ್ಕೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಯುವ ಕೇಂದ್ರಿತ ಚಟುವಟಿಕೆಗಳು ಮತ್ತು ಯೋಜನೆಗಳಿಗೆ ಸಂಸ್ಥೆ ಪೂರಕವಾಗಲಿದೆ. ಈ ಯೋಜನೆಯಲ್ಲಿ ಪ್ರಮುಖವಾಗಿ 11 ಅಂಶಗಳನ್ನು ಗುರುತಿಸಿ, ಈ ಆಧಾರದ ಮೇಲೆ ಕಾರ್ಯಕ್ರಮಗಳನ್ನು ರೂಪಿಸುವ ಉದ್ದೇಶ ಹೊಂದಲಾಗಿದೆ. ನಾಯಕತ್ವ ಗುಣ ಬೆಳೆಸುವುದು, ಯುವ ಕೇಂದ್ರಿತ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡುವುದು, ಈಗ ಇರುವ ಯೋಜನೆಗಳನ್ನು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರುವುದು ಈ ಯೋಜನೆಯಲ್ಲಿ ಸೇರಿದೆ.

ಯುವಶಕ್ತಿಯನ್ನು ಸರ್ಕಾರ ಮತ್ತು ಸಮಾಜದೊಂದಿಗೆ ಯುವಸೇತುವಾಗಿ ಬಳಕೆ ಮಾಡಿಕೊಳ್ಳುವುದು ಕೇಂದ್ರದ ಉದ್ದೇಶ. ಯುವಶಕ್ತಿಯೇ ದೇಶದ ಭವಿಷ್ಯ ಎನ್ನುವುದನ್ನು ಅಲ್ಲಗಳೆಯಲಾಗದು. ಭಾರತ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರ. ಈ ಯುವ ಶಕ್ತಿಗೆ ಸೂಕ್ತ ವೇದಿಕೆ ಒದಗಿಸುವುದರೊಂದಿಗೆ ಸರಿಯಾದ ಮಾರ್ಗದಲ್ಲಿ ಕೊಂಡೊಯ್ದರೆ ಯೋಜನೆಯ ಉದ್ದೇಶ ಸಫಲವಾಗುವುದರಲ್ಲಿ ಸಂದೇಹ ಇಲ್ಲ. ಆದರೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದು ಮುಖ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net