

ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ರಾಜ್ಯದಲ್ಲಿನ ಪರಿಸ್ಥಿತಿ ಕಂಡು ಕಳವಳ ವ್ಯಕ್ತಪಡಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬೆಳೆ ರಕ್ಷಣೆ ಮಾತಿರಲಿ, ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಬಹುದು ಎಂಬ ಕಳಕಳಿ ಮಾತುಗಳನ್ನಾಡಿದೆ. ಮಳೆಯಾಗದೆ ಬೆಳೆ ಕೈಕೊಟ್ಟಿದ್ದು, ರೈತರು ಇರುವ ಅಲ್ಪಸ್ವಲ್ಪ ಬೆಳೆಯನ್ನಾದರೂ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಮಸ್ಯೆ ಎದುರಾಗಿದೆ.
ಮಳೆ ಕೈಕೊಟ್ಟಿದ್ದರೂ ಹಲವೆಡೆ ಲಭ್ಯ ಜಲಮೂಲ ಆಧರಿಸಿ ಬಿತ್ತನೆ ಮಾಡಲಾಗಿದೆ. ಬೆಳವಣಿಗೆ ಹಂತದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗದ ಪರಿಣಾಮ ಬೆಳೆಗೆ ನೀರು ಪೂರೈಕೆ ಮಾಡಲು ಸಾಧ್ಯವಾಗದೆ ಕೃಷಿಗೆ ಹೂಡಿರುವ ಬಂಡವಾಳ ಮರಳಿ ಬರುವ ವಿಶ್ವಾಸವೂ ರೈತರಲ್ಲಿ ಇಲ್ಲದಂತಾಗಿದೆ. ತೋಟಗಾರಿಕೆ ಬೆಳೆಗಳನ್ನೂ ಉಳಿಸಿಕೊಳ್ಳುವ ಸವಾಲು ಇದೆ. ತೆಂಗು, ಬಾಳೆ, ಅಡಕೆ ತೋಟಗಳು ನೀರಿಲ್ಲದೆ ಒಣಗುತ್ತಿವೆ.
ವಿದ್ಯುತ್ ಲಭ್ಯತೆ ಮತ್ತು ಬೇಡಿಕೆ ನಿರ್ವಹಣೆಯಲ್ಲಿ ಎಡವಿದ್ದರಿಂದ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಮುಂಗಾರು ಮಳೆ ವೈಫಲ್ಯದಿಂದ ಜಲ ಮೂಲ, ಕಲ್ಲಿದ್ದಲು ದಾಸ್ತಾನು ಸಮಸ್ಯೆಯಿಂದ ಶಾಖೋತ್ಪನ್ನ ಮೂಲದ ವಿದ್ಯುತ್ ಉತ್ಪಾದನೆ ಕುಸಿದಿದೆ. ಆದರೆ ಬೇಡಿಕೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೃಷಿ, ಕೈಗಾರಿಕೆ, ವಾಣಿಜ್ಯ, ಗೃಹ ವಲಯಗಳ ಬೇಡಿಕೆ ಹೆಚ್ಚತೊಡಗಿದೆ. ಕಳೆದ ಮೂರು ತಿಂಗಳಲ್ಲಿ 2,500 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೂ ಬೇಡಿಕೆಯನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ತಾಂತ್ರಿಕ ಅಡಚಣೆ ನೆಪದಲ್ಲಿ ಅನಧಿಕೃತ ಲೋಡ್ಶೆಡ್ಡಿಂಗ್ ಮೂಲಕ ಒತ್ತಡ ಸರಿದೂಗಿಸುವ ಪ್ರಯತ್ನಗಳು ನಡೆದಿವೆ ಎನ್ನಲಾಗಿದೆ.
ವಿದ್ಯುತ್ ಸಮಸ್ಯೆಗೆ ಮಳೆ ಕೊರತೆ ಮಾತ್ರವಲ್ಲ, ಹಿಂದಿನ ಹಾಗೂ ಈಗಿನ ಸರ್ಕಾರದ ನಿರ್ಲಕ್ಷ್ಯವೂ ವಿದ್ಯುತ್ ಅಭಾವ ಸೃಷ್ಟಿಗೆ ಕಾರಣ ಎನ್ನಲಾಗಿದೆ. ಸಾರ್ವಜನಿಕ ಸ್ವಾಮ್ಯದ ಕೆಪಿಸಿಎಲ್ ನಿರ್ಲಕ್ಷ್ಯಕ್ಕೊಳಗಾಗಿದ್ದು, ವಿದ್ಯುತ್ ಜಾಲಕ್ಕೆ ಹೊಸದಾಗಿ ಒಂದೇ ಒಂದು ಯುನಿಟ್ ಸೇರಿಸಲು ಸಾಧ್ಯವಾಗಿಲ್ಲ. ಕಲ್ಲಿದ್ದಲು ಖರೀದಿ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲಾಗದ ಕಾರಣ ಒಂದು ವಾರಕ್ಕೆ ಬೇಕಾಗುವಷ್ಟು ದಾಸ್ತಾನಿಡಲು ಸಾಧ್ಯವಾಗಿಲ್ಲ. ಇದು ಶಾಖೋತ್ಪನ್ನ ಸ್ಥಾವರದ ಪೂರ್ಣ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಗೆ ಅಡ್ಡಗಾಲು ಹಾಕಿದೆ ಎಂದು ಮೂಲಗಳು ಸ್ಪಷ್ಟಪಡಿಸುತ್ತಿವೆ.
ವಿದ್ಯುತ್ ಸಮಸ್ಯೆ ಈಗ ಸೃಷ್ಟಿಯಾಗಿರುವುದಲ್ಲ. ಮಳೆ ವೈಫಲ್ಯವೂ ಒಂದು ಕಾರಣವಾಗಿರಬಹುದು.ಇದರೊಂದಿಗೆ ಇನ್ನೂ ಹಲವು ಕಾರಣಗಳು ಸೇರಿರಬಹುದು. ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆ ತೀವ್ರವಾಗಿ ಕುಸಿದಿರುವ ಪರಿಣಾಮ ವಿದ್ಯುತ್ ಸಮಸ್ಯೆ ತಲೆದೋರಿದೆ. ಹವಮಾನ ವೈಪರಿತ್ಯದಿಂದ ಬೇಡಿಕೆಯಲ್ಲಿ ಸರಾಸರಿ 2 ಸಾವಿರ ಮೆವಾ ಕೊರತೆ ಎದುರಾಗಿದ್ದು, ಇದನ್ನು ನಿಭಾಯಿಸಲು ಸರ್ಕಾರ ಪವರ್ ಕಟ್ ಮೊರೆ ಹೋಗಿದೆ. ರೈತರಿಗೆ 7 ಗಂಟೆ ವಿದ್ಯುತ್ ಬದಲಿಗೆ 2 ಗಂಟೆ ಕಡಿತ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ವಿದ್ಯುತ್ ವ್ಯತ್ಯಯ ಮಾಡಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಹೇಳುತ್ತವೆ.
ಸದ್ಯದ ಸ್ಥಿತಿಯಲ್ಲಿ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕಲ್ಪಿಸುವುದಷ್ಟೇ ಅಲ್ಲ, ಇರುವ ಅಲ್ಪಸ್ವಲ್ಪ ಬೆಳೆ ರಕ್ಷಣೆ ಮಾಡಿಕೊಳ್ಳಲು ಅವರ ನೆರವಿಗೆ ಬರಬೇಕಾಗಿದೆ. ಹೀಗಾಗಿ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು. ತ್ರೀಫೇಸ್ ವಿದ್ಯುತ್ ಒದಗಿಸಬೇಕು. ಆಗ ಮಾತ್ರ ರೈತರು ಬೆಳೆ ಉಳಿಸಿಕೊಳ್ಳಲು ಸಾಧ್ಯ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.