

ಉತ್ತರಾಖಂಡ ರಾಜ್ಯದ ಪ್ರಸಿದ್ಧ ಜೋಶಿಮಠ ಪಟಟ್ಣವು ಭೂಕುಸಿತದಿಂದಾಗಿ ಭೀತಿ ಎದುರಿಸುತ್ತಿದ್ದು, ಈಗಾಗಲೇ 4 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಭೂಕುಸಿತ ನಿರ್ಣಯಿಸುವ ತಜ್ಞರ ಸಮಿತಿಯು ಹಾನಿಗೊಳಗಾದ ಮನೆಗಳನ್ನು ಕೆಡವಲು ಶಿಫಾರಸು ಮಾಡಿದ್ದು, ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆಯ (ಸಿಬಿಆರ್ಐ) ತಂಡವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಜತೆಗೂಡಿ ಮೊದಲ ಹಂತದಲ್ಲಿ 100 ಮನೆಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಕೈಗೊಳ್ಳಲು ಮುಂದಾಗಿರುವುದು ಬಿಕ್ಕಟ್ಟಿನ ತೀವ್ರತೆಯನ್ನು ಸೂಚಿಸುತ್ತದೆ. ಕೊರೆಯುವ ಚಳಿಯ ನಡುವೆಯೇ ಅನೇಕ ಜನರು ಜೀವಭಯದಿಂದ ಮನೆ ತೊರೆದು ಬೀದಿಯಲ್ಲಿ ಬಿಡಾರ ಹೂಡಿದ್ದಾರೆ. ಈ ಪಟ್ಟಣದ 20 ಸಾವಿರ ಜನರು ಆತಂಕದಲ್ಲಿ ದಿನದೂಡಬೇಕಾದ ಪರಿಸ್ಥಿತಿ ತಲೆದೋರಿದೆ.
ಜೋಶಿಮಠವನ್ನು ಹಿಂದೂಗಳ ಪವಿತ್ರ ದೇವರು ಬದರಿನಾಥನ ‘ಚಳಿಗಾಲದ ಮನೆ’ ಎಂದೇ ಗುರುತಿಸಲಾಗುತ್ತದೆ. ಪ್ರಸಿದ್ಧ ಯಾತ್ರಾ ಸ್ಥಳಗಳಾದ ಬದರಿನಾಥ, ಔಲಿ, ಸಿಖ್ಖರ ಪವಿತ್ರ ಕ್ಷೇತ್ರ ಹೇಮಕುಂಡ್ ಸಾಹಿಬ್ಗೆ ಜೋಶಿಮಠವು ಹೆಬ್ಬಾಗಿಲು ಕೂಡ ಆಗಿದೆ. ಈ ಪ್ರದೇಶದಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಮತ್ತು ಕಾರ್ಯಗತಗೊಳಿಸುವಾಗ ದುರ್ಬಲವಾದ ಹಿಮಾಲಯ ಪರ್ವತ ಶ್ರೇಣಿಗಳ ವ್ಯವಸ್ಥೆಯ ವಿಶಿಷ್ಟ, ನಿರ್ದಿಷ್ಟ ಗುಣಲಕ್ಷಣಗಳು ಮತ್ತು ವಿಲಕ್ಷಣತೆಯನ್ನು ಗುರುತಿಸಿ ಅದಕ್ಕನುಗುಣವಾಗಿ ಚಟುವಟಿಕೆ ಕೈಗೊಳ್ಳದ್ದು ಪ್ರಸ್ತುತ ಬಿಕ್ಕಟ್ಟಿಗೆ ಕಾರಣ ಎನ್ನಲಾಗಿದೆ. ಐದು ದಶಕಗಳ ಹಿಂದೆಯೇ ಸರ್ಕಾರವು ಆಗಿನ ಗರ್ವಾಲ್ ಕಮಿಷನರ್ ಮಹೇಶ್ ಚಂದ್ರ ಮಿಶ್ರಾ ಅಧ್ಯಕ್ಷತೆಯಲ್ಲಿ ಈ ಪ್ರದೇಶದಲ್ಲಿ ಭೂಮಿ ಕುಸಿತದ ಕಾರಣವನ್ನು ತನಿಖೆ ಮಾಡಲು ಸಮಿತಿ ರಚಿಸಿದಾಗಲೇ ಎಚ್ಚರಿಕೆಯ ಗಂಟೆಗಳು ಬಾರಿಸಲಾರಂಭಿಸಿದ್ದವು. ಈ ಸಮಿತಿಯು 1976ರಲ್ಲಿ ಸಲ್ಲಿಸಿದ ವರದಿಯಲ್ಲಿ ಜೋಶಿಮಠದಲ್ಲಿ ಪ್ರಮುಖ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಬಾರದು. ಏಕೆಂದರೆ, ಹಿಮದ ಅವಶೇಷಗಳು ಸಂಗ್ರಹವಾಗುವ ಸ್ಥಳ ಇದಾಗಿದೆ ಎಂದು ಹೇಳಿತ್ತು. ನಂತರದ ಹಲವಾರು ಅಧ್ಯಯನಗಳು ಕೂಡ ಇದೇ ರೀತಿಯ ಕಾಳಜಿ ವ್ಯಕ್ತಪಡಿಸಿದ್ದವು. ಆದರೆ, ಇವುಗಳನ್ನು ಯೋಗ್ಯ ರೀತಿಯಲ್ಲಿ ಗಣನೆಗೆ ತೆಗೆದುಕೊಳ್ಳದೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ಆರೋಪ ಈಗ ಕೇಳಿಬಂದಿದೆ.
ಪರಿಸರಕ್ಕೆ ಪೂರಕವಾಗಿ ಕೈಗೊಳ್ಳದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಜಲವಿದ್ಯುತ್ ಯೋಜನೆಗಳೇ ಭೂಕುಸಿತಕ್ಕೆ ಕಾರಣ ಎಂದು ಅನೇಕ ತಜ್ಞರು ಆರೋಪಿಸಿದ್ದಾರೆ. ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ (ಎನ್ಟಿಪಿಸಿ) ಜಲವಿದ್ಯುತ್ ಯೋಜನೆಯ ಸುರಂಗಗಳಲ್ಲಿ ಸಂಭವಿಸಿದ ಸ್ಪೋಟದ ಪರಿಣಾಮವಾಗಿ ಮನೆಗಳು ಮತ್ತು ರಸ್ತೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ ಎಂದು ನಿವಾಸಿಗಳು ದೂರಿದ್ದಾರೆ. ಜೋಶಿಮಠ ಬಿಕ್ಕಟ್ಟಿನಿಂದ ನಾವು ಅನೇಕ ಪಾಠಗಳನ್ನು ಕಲಿಯಬೇಕಿದೆ. ಮೂಲಸೌಕರ್ಯಗಳನ್ನು ಕಲ್ಪಿಸಲು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವುದು ಅಗತ್ಯ ಎಂಬುದನ್ನು ಒಪ್ಪಬಹುದು. ಯಾವುದೇ ಪ್ರದೇಶ ಏನೂ ಸವಲತ್ತು ಇಲ್ಲದೆ ಇರಲಾಗದು. ಆದರೆ, ಸ್ಥಳೀಯ ಪರಿಸರಕ್ಕೆ ಪೂರಕವಾಗಿರುವಂತೆ ಹಿತಮಿತವಾಗಿ ಇವುಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿಯೂ ಸರ್ಕಾರಗಳು ವಿವೇಚನೆ ತೋರಬೇಕು. ಇಲ್ಲದಿದ್ದರೆ, ಅಭಿವೃದ್ಧಿ ಯೋಜನೆಗಳೇ ತೊಂದರೆದಾಯಕವಾಗಬಲ್ಲವು ಎಂಬುದಕ್ಕೆ ಜೋಶಿಮಠ ಒಂದು ನಿದರ್ಶನವಾಗಿದೆ. ಪರಿಸರ ಸಂರಕ್ಷಣೆ ಕುರಿತು ತಜ್ಞರು ನೀಡುವ ಎಚ್ಚರಿಕೆಯನ್ನು ಸರ್ಕಾರಗಳು ಹಗುರವಾಗಿ ಪರಿಗಣಿಸದೆ, ವಾಸ್ತವ ನೆಲೆಗಟ್ಟಿನಲ್ಲಿ ಆಲೋಚಿಸಿ ಮುಂದಡಿಯಿಡಬೇಕು.