

ಲೋಕಸಭೆಯಿಂದ ಸಂಸದರೊಬ್ಬರನ್ನು ಉಚ್ಚಾಟಿಸಲು ನೈತಿಕ ಸಮಿತಿ ಶಿಫಾರಸು ಮಾಡಿರುವುದು ದೇಶದ ಸಂಸದೀಯ ಇತಿಹಾಸದಲ್ಲಿಯೇ ಇದೇ ಮೊದಲು. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ‘ಕಾಸಿಗಾಗಿ ಪ್ರಶ್ನೆ’ ಪ್ರಕರಣ ಇತ್ತೀಚೆಗೆ ದೇಶದ ರಾಜಕಾರಣದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಜಗತ್ತಿನ ಪ್ರಮುಖ ಕಂಪನಿಗಳಲ್ಲಿ ಒಂದಾದ ಅದಾನಿ ಗ್ರೂಪ್ ಹಾಗೂ ಪ್ರಧಾನಿ ಮೋದಿ ಅವರಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲು ಹಣ ಪಡೆದ ಆರೋಪಕ್ಕೆ ಸಂಬಂಧಿಸಿರುವುದರಿಂದ ಸಹಜವಾಗಿಯೇ ಇದು ಸಾಕಷ್ಟು ಗಮನ ಸೆಳೆದಿದೆ. ರಾಜಕೀಯ ವಾದ-ವಿವಾದಗಳೇನೇ ಇದ್ದರೂ ಟಿಎಂಸಿ ಸಂಸದೆಯನ್ನು ಲೋಕಸಭೆಯಿಂದ ಉಚ್ಚಾಟಿಸಲು ಸಮಿತಿ ಶಿಫಾರಸು ಮಾಡಿರುವುದು ನೈತಿಕವಾಗಿ ಸೂಕ್ತ ಕ್ರಮ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ.
ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ದುಬೈ, ಯುಎಇ ಮೂಲದ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಮಹುವಾ ಹಣ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ವಕೀಲ ಜೈ ಅನಂತ ದೇಹದ್ರಾಯ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ನೈತಿಕ ಸಮಿತಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಮೊಯಿತ್ರಾ ಉದ್ಯಮಿಯೊಂದಿಗೆ ತಮ್ಮ ಸಂಸದೀಯ ಲಾಗಿನ್ ಹಂಚಿಕೊಳ್ಳುವ ಮೂಲಕ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದೂ ದುಬೆ ಆಪಾದಿಸಿದ್ದರು.
ಲಾಗಿನ್ ಹಂಚಿಕೆ ಮಾಡಿಕೊಂಡಿದ್ದನ್ನು ಮತ್ತು ಮೊಯಿತ್ರಾ ಅವರ ಬೇಡಿಕೆಯಂತೆ ಉಡುಗೊರೆ ನೀಡಿದ್ದನ್ನು ಸ್ವತಃ ಹಿರಾನಂದನಿ ಒಪ್ಪಿಕೊಂಡಿದ್ದಾರೆ. ಮಹುವಾ ಕೂಡ ಲಾಗಿನ್ ಹಂಚಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ, ದುಬೆ ಮಾಡಿರುವ ಆರೋಪಗಳು ಸತ್ವಯುತ ಹಾಗೂ ಗಂಭೀರ ಸ್ವರೂಪದ್ದಾಗಿವೆ. ಈ ಹಿನ್ನೆಲೆಯಲ್ಲಿಯೇ ನೈತಿಕ ಸಮಿತಿ, ಉಚ್ಚಾಟನೆ ಶಿಫಾರಸಿನ ಕ್ರಮಕ್ಕೆ ಮುಂದಾಗಿದೆ ಎನ್ನಬಹುದು.
ಆರೋಪ ಸಾಬೀತಾಗುವ ಮುನ್ನವೇ ಲೋಕಸಭೆಯ ನೈತಿಕ ಸಮಿತಿ ಮಹುವಾ ವಿರುದ್ಧ ಕ್ರಮ ಕೈಗೊಳ್ಳಲು ಹೇಗೆ ಸಾಧ್ಯ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಆದರೆ, ನೈತಿಕ ಸಮಿತಿ ಈಗ ಮಾಡಿರುವುದು ಶಿಫಾರಸು ಮಾತ್ರ. ಮುಂಬರುವ ಸಂಸತ್ ಅಧಿವೇಶನದಲ್ಲಿ ವರದಿ ಮಂಡಿಸಿದ ನಂತರ ಚರ್ಚೆ ನಡೆಯಬೇಕಿದೆ. ತದನಂತರವೇ ಉಚ್ಚಾಟನೆ ಕುರಿತಂತೆ ಅಂತಿಮ ನಿರ್ಧಾರ ಹೊರಬೀಳಬಹುದಾಗಿದೆ.
ಈ ಪ್ರಕರಣವು ಸಂಸತ್ತಿನ ವ್ಯಾಪ್ತಿಯನ್ನು ಮೀರಿ ಹೋಗುವುದು ನಿಶ್ಚಿತ. ಉದ್ಯಮಿ ಹಿರಾನಂದಾನಿ ಮತ್ತು ಮಹುವಾ ನಡುವಿನ ಹಣಕಾಸಿನ ವಹಿವಾಟಿನ ಕುರಿತು ಕಾಲಮಿತಿಯ ತನಿಖೆ ನಡೆಸಬೇಕು ಎಂದೂ ನೈತಿಕ ಸಮಿತಿ ಹೇಳಿದೆ. ಅಲ್ಲದೆ, ಮಹುವಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ಲೋಕಪಾಲವು ಸಿಬಿಐ ತನಿಖೆಗೆ ಆದೇಶಿಸಿದೆ ಎಂದು ದುಬೆ ಅವರು ಬುಧವಾರವಷ್ಟೇ ಹೇಳಿದ್ದಾರೆ. ಹೀಗಾಗಿ ಈ ಪ್ರಕರಣವು ನ್ಯಾಯಾಲಯದ ಅಂಗಳಕ್ಕೂ ವ್ಯಾಪಿಸಲಿದೆ.