

ಕಳೆದ ಆಗಸ್ಟ್ 29ರಂದು ಹಾವೇರಿ ತಾಲೂಕಿನ ಆಲದಕಟ್ಟೆ ಗ್ರಾಮದಲ್ಲಿ ಪಟಾಕಿ ಸಿಡಿಮದ್ದು ಗೋದಾಮಿನಲ್ಲಿ ನಾಲ್ವರು ಕಾರ್ವಿುಕರು ಸಜೀವ ದಹನವಾದ ದುರ್ಘಟನೆಯ ನೆನಪು ಮಾಸುವ ಮುನ್ನವೇ ಇದಕ್ಕಿಂತಲೂ ದೊಡ್ಡ ಪ್ರಮಾಣದ ಪಟಾಕಿ ದುರಂತ ಸಂಭವಿಸಿದೆ. ಆನೇಕಲ್ ತಾಲೂಕಿನ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 14 ಮಂದಿ ಸಜೀವ ದಹನವಾಗಿ, ನಾಲ್ವರಿಗೆ ಗಂಭೀರ ಗಾಯಗಳಾಗಿರುವುದು ಖೇದಕರ ಘಟನೆಯಾಗಿದೆ. ಈ ದುರಂತದ ತನಿಖೆಯನ್ನು ಸರ್ಕಾರ ಸಿಐಡಿಗೆ ವಹಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ದಾಸ್ತಾನು ಮಾಡಿದ್ದಕ್ಕಾಗಿ ಗೋದಾಮಿನ ಮಾಲಿಕನನ್ನು ಪೊಲೀಸರು ಬಂಧಿಸಿದ್ದಾರೆ.
ದೊಡ್ಡ ದುರಂತ ಸಂಭವಿಸಿದ ತಕ್ಷಣ ಇಂತಹ ಕ್ರಮಗಳನ್ನು ಕೈಗೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ವತಃ ಅತ್ತಿಬೆಲೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಕರ್ನಾಟಕ ಸರ್ಕಾರ 5 ಲಕ್ಷ ರೂ. ಹಾಗೂ ತಮಿಳುನಾಡು ಸರ್ಕಾರ 3 ಲಕ್ಷ ರೂ. ಪರಿಹಾರವನ್ನು ಮೃತರ ಕುಟುಂಬಗಳಿಗೆ ಘೋಷಿಸಿವೆ. ಆದರೆ, ಜೀವಹಾನಿಗೆ ಯಾವುದೇ ಬೆಲೆ ಕಟ್ಟಲಾಗದು. ಸತತ ಎರಡು ದುರ್ಘಟನೆಗಳ ಹಿನ್ನೆಲೆಯಲ್ಲಾದರೂ ಸರ್ಕಾರವು ಎಚ್ಚೆತ್ತುಕೊಳ್ಳಬೇಕಿದೆ. ಪಟಾಕಿ ವಹಿವಾಟಿನ ಸುಗ್ಗಿಯಾದ ದಸರಾ ಮತ್ತು ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಪಟಾಕಿ ಮಾರಾಟಗಾರರು ನಿಯಮಾವಳಿಗಳನ್ನು ಪಾಲನೆ ಮಾಡುತ್ತಿದ್ದಾರೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವ ಮೂಲಕ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯತೆಯನ್ನು ಈ ದುರಂತ ಎತ್ತಿತೋರಿಸುತ್ತದೆ.
ದೊಡ್ಡ ಪಟ್ಟಣ ಮತ್ತು ನಗರಗಳಲ್ಲಿ ಪಟಾಕಿ ಮಾರಾಟವನ್ನು ಮೈದಾನ ಇಲ್ಲವೇ ಬಯಲು ಪ್ರದೇಶದಲ್ಲಿ ಮಾರಲು ವ್ಯವಸ್ಥೆ ಮಾಡಲಾಗಿರುತ್ತದೆ. ಆದರೂ ಜನನಿಬೀಡ ವಾಣಿಜ್ಯ ಹಾಗೂ ವಸತಿ ಪ್ರದೇಶಗಳಲ್ಲೂ ಕೆಲವೊಂದು ಮಳಿಗೆಗಳಲ್ಲಿ ಪಟಾಕಿ ಮಾರಾಟ ಮುಂದುವರಿದಿದೇ ಇರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಗಣೇಶೋತ್ಸವ ಹಾಗೂ ದಕ್ಷಿಣ ಕರ್ನಾಟಕದಲ್ಲಿ ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಪಟಾಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಉರಿಸಲಾಗುತ್ತದೆ.
ಪಟಾಕಿಯನ್ನು ಎಂತಹ ಪ್ರದೇಶದಲ್ಲಿ ಹಾಗೂ ಸುರಕ್ಷಿತವಾಗಿ ಹೇಗೆ ಸಂಗ್ರಹಿಸಿಡಬೇಕು ಎಂಬ ನಿಯಮಾವಳಿಗಳಿದ್ದರೂ ಇವು ಸೂಕ್ತ ರೀತಿಯಲ್ಲಿ ಜಾರಿಗೆ ಬರುತ್ತಿಲ್ಲ ಎಂಬುದು ಆಗಾಗ ಸಂಭವಿಸುವ ಅಗ್ನಿ ದುರಂತಗಳಿಂದ ವೇದ್ಯವಾಗುತ್ತದೆ. ಪಟಾಕಿ ಮಳಿಗೆಗಳು, ಗೋದಾಮುಗಳಿಗೆ ಪರವಾನಗಿ ನೀಡುವ ಅಧಿಕಾರಿಗಳು ಸುರಕ್ಷಿತ ಕ್ರಮಗಳು ಹಾಗೂ ನಿಯಮಾವಳಿಗಳ ಪಾಲನೆ ಬಗ್ಗೆ ಕಟ್ಟುನಿಟ್ಟಾಗಿ ಪರಿಶೀಲಸದೆ ನಿರ್ಲಕ್ಷ್ಯ ವಹಿಸಿರುವುದು ಕೂಡ ಇದರಿಂದ ತಿಳಿದುಬರುತ್ತದೆ. ಈಗ ಅಗ್ನಿ ಅವಘಡ ಸಂಭವಿಸಿದ ಪ್ರದೇಶದಲ್ಲಿನ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತುಕ್ರಮವನ್ನು ಕೈಗೊಂಡರೆ, ಇತರ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದಂತಾಗುತ್ತದೆ. ಈ ಮೂಲಕ ಅಮೂಲ್ಯ ಜೀವಹಾನಿ ತಪ್ಪಿಸಲೂ ಸಾಧ್ಯವಾಗುತ್ತದೆ. ಇನ್ನು ದೇಶದ ವಿವಿಧೆಡೆ ಕೂಡ ಇತ್ತೀಚಿನ ದಿನಗಳಲ್ಲಿ ಪಟಾಕಿ ಸ್ಪೋಟಗಳು ಸಂಭವಿಸಿವೆ. ವಿಶೇಷವಾಗಿ, ಪಶ್ಚಿಮ ಬಂಗಾಳದ ಅನೇಕ ಪಟಾಕಿ ತಯಾರಿಕೆ ಕಾರ್ಖಾನೆಗಳಲ್ಲಿ ಅಗ್ನಿ ಅವಘಡಗಳು ನಡೆದಿವೆ. ಇಲ್ಲಿ ಕಚ್ಚಾ ಬಾಂಬ್ ತಯಾರಿಕೆಯನ್ನು ಅಕ್ರಮವಾಗಿ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪಗಳು ಕೂಡ ಕೇಳಿಬಂದಿವೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಇಂತಹ ಗಂಭೀರ ಆಪಾದನೆಗಳು ಇಲ್ಲದಿರುವುದು ಒಂದಿಷ್ಟು ಸಮಾಧಾನ ತರುವ ಸಂಗತಿಯಾಗಿದೆ.