ಸಂಪಾದಕೀಯ | ಎಲ್ಲರ ವರಮಾನ ಹೆಚ್ಚಲಿ; 8 ವರ್ಷಗಳಲ್ಲಿ ಭಾರತೀಯರ ತಲಾದಾಯ ದುಪ್ಪಟ್ಟು

GDP
Published on

2014-15ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರವು ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಇದುವರೆಗೆ ಭಾರತೀಯರ ವಾರ್ಷಿಕ ತಲಾದಾಯವು ದುಪ್ಪಟ್ಟಾಗಿದೆ. 2014-15 ರಲ್ಲಿ 86,647 ರೂಪಾಯಿ ಇದ್ದ ವಾರ್ಷಿಕ ತಲಾದಾಯವು 2022-23ರಲ್ಲಿ 1,72,000 ರೂಪಾಯಿಗೆ ಏರಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಅಂದಾಜಿಸಿದೆ. ಒಂದು ರಾಷ್ಟ್ರದ ಆರ್ಥಿಕತೆಯಲ್ಲಿ ತಲಾದಾಯವು ಬಹುಮುಖ್ಯ ಸಂಗತಿಯಾಗಿದ್ದು, ಒಬ್ಬ ವ್ಯಕ್ತಿಯು ಒಂದು ವರ್ಷದಲ್ಲಿ ಗಳಿಸುವ ಆದಾಯವನ್ನು ಸೂಚಿಸುತ್ತದೆ. ಕಳೆದ ಎಂಟು ವರ್ಷಗಳಲ್ಲಿ ಪ್ರತಿ ಭಾರತೀಯನ ಸರಾಸರಿ ಆದಾಯ ದುಪ್ಪಟ್ಟು ಆಗಿರುವುದು ಸ್ವಾಗತಾರ್ಹ ಸಂಗತಿಯೇ ಆಗಿದ್ದರೂ ನೈಜ ಮೌಲ್ಯದಲ್ಲಿ ಶೇ. 35ರಷ್ಟು ಮಾತ್ರ ಏರಿಕೆಯಾಗಿದೆ. ಆದರೆ, ಕೆಲ ವರ್ಷಗಳ ಆರ್ಥಿಕ ಹಿನ್ನಡೆಯನ್ನು ಪರಿಗಣಿಸಿದರೆ ಇದು ಕೂಡ ಸಮಾಧಾನಕರ ಅಂಶವಾಗಿಯೇ ಕಂಡುಬರುತ್ತದೆ.

ಆರ್ಥಿಕ ಬೆಳವಣಿಗೆ ದರಗಳನ್ನು ಸಾಮಾನ್ಯವಾಗಿ ಎರಡು ರೀತಿಯಲ್ಲಿ ಅಳೆಯಲಾಗುತ್ತದೆ. ಮೊದಲನೆಯದ್ದು ನಾಮಮಾತ್ರದ ಪರಿಭಾಷೆಯಲ್ಲಿ, ಅಂದರೆ ಹಿಂದಿನ ಹಾಗೂ ಪ್ರಸ್ತುತ ದರದ ನೇರ ವ್ಯತ್ಯಾಸವಾಗಿರುತ್ತದೆ. ಎರಡನೆಯದ್ದು ನೈಜ ಮೌಲ್ಯದ್ದಾಗಿರುತ್ತದೆ. ಅಂದರೆ, ಬೆಲೆಯೇರಿಕೆಯ ಅಂಶವನ್ನು ಪರಿಗಣನೆಗೆ ತೆಗೆದುಕೊಂಡು ಬೆಳವಣಿಗೆ ದರವನ್ನು ನೈಜ ಪರಿಭಾಷೆಯಲ್ಲಿ ಲೆಕ್ಕಹಾಕಲಾಗುತ್ತದೆ. ಈ ರೀತಿ ನೈಜ ಮೌಲ್ಯದಲ್ಲಿ ತಲಾದಾಯವು ಕಳೆದ ಎಂಟು ವರ್ಷಗಳಲ್ಲಿ ಶೇ. 35ರಷ್ಟು ಹೆಚ್ಚಳ ಕಂಡಿದೆ. ಇನ್ನು ಭಾರತಕ್ಕೆ ಹೋಲಿಸಿದರೆ ಕರ್ನಾಟಕ ಜನರ ತಲಾದಾಯ ಸಾಕಷ್ಟು ಹೆಚ್ಚು ಇದೆ. 2021-21ನೇ ಸಾಲಿನಲ್ಲಿ 2,65,623 ರೂಪಾಯಿ ಇದ್ದರೆ, 2023-24ನೇ ಸಾಲಿನಲ್ಲಿ 3,01,673ಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಕೋವಿಡ್ ಸಾಂಕ್ರಾಮಿಕ ಕಾಡಿದ ಎರಡು ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆಗೆ ವ್ಯಾಪಕ ಅಡಚಣೆ ಉಂಟಾದ ಪರಿಣಾಮ ತಲಾದಾಯವು ಸಾಕಷ್ಟು ಕುಸಿತ ಕಂಡಿತು. ನಂತರ 2021-22 ಮತ್ತು 2022-23ರಲ್ಲಿ ಆರ್ಥಿಕ ಬೆಳವಣಿಗೆಯು ಚೇತರಿಕೆಯತ್ತ ಸಾಗಿತು. ಈ ಎಲ್ಲ ಸಂಗತಿಗಳನ್ನು ಪರಿಗಣನೆಗೆ ತೆಗೆದುಕೊಂಡರೆ ವಾಸ್ತವ ತಲಾದಾಯದ ಶೇ. 35ರಷ್ಟ ಏರಿಕೆಯು ಸಾಕಷ್ಟು ಸಮಾಧಾನ ಮೂಡಿಸುವಂತಿದೆ.

ಇದೇ ವೇಳೆ ಆದಾಯದ ಅಸಮಾನ ಹಂಚಿಕೆಯು ಭಾರತೀಯರಲ್ಲಿ ಅಪಾರವಾಗಿರುವುದು ಚಿಂತಾಜನಕ ವಿಷಯವಾಗಿದೆ. ಇತ್ತೀಚಿನ ದಶಕದಲ್ಲಿ ಭಾರತದ ಒಟ್ಟು ಸಂಪತ್ತಿನ ಶೇ. 57ರಷ್ಟು ಪ್ರಮಾಣ ಶೇ. 10ರಷ್ಟು ಭಾರತೀಯರ ಬಳಿ ಶೇಖರಣೆಗೊಂಡಿದೆ. ಆರ್ಥಿಕವಾಗಿ ಕೆಳಸ್ತರದಲ್ಲಿರುವ ಶೇ. 50ರಷ್ಟು ಜನರ ಬಳಿ ಇರುವ ಸಂಪತ್ತಿನ ಒಟ್ಟು ಪ್ರಮಾಣದ ಶೇ. 13ರಷ್ಟು ಮಾತ್ರ. ಭಾರತದ ಜನಸಂಖ್ಯೆ ಈಗ 141 ಕೋಟಿ ಮೀರಿ ಚೀನಾ ದೇಶವನ್ನು ಹಿಂದಿಕ್ಕುವ ಹಂತದಲ್ಲಿದೆ. ನಮ್ಮ ಜನಸಂಖ್ಯೆಯಲ್ಲಿ 80 ಕೋಟಿಗಿಂತಲೂ ಹೆಚ್ಚಿನ ಜನರು ಸಾರ್ವಜನಿಕ ಪಡಿತರದ ಮೂಲಕ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ, ಭಾರತದಲ್ಲಿ ಶೇ. 55ಕ್ಕಿಂತಲೂ ಅಧಿಕ ಜನರು ಬಡವರಾಗಿಯೇ ಇದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ. ವರಮಾನ ಏರಿಕೆಯು ಕೆಲವರಿಗಷ್ಟೇ ಸೀಮಿತವಾಗದೆ ಸಂಪೂರ್ಣ ಜನಸಂಖ್ಯೆಗೆ ಅನ್ವಯವಾಗುವ ರೀತಿಯಲ್ಲಿ ನೀತಿ-ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಬೇಕಿದೆ. ಸರ್ವರ ವರಮಾನ ಏರಿಕೆಯಾದರೆ ಮಾತ್ರ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net