

ಕೊಡಗು/ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೆ ಮತ್ತೆ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಕಾಡುಗಳು ಹೊತ್ತಿ ಉರಿಯಲಾರಂಭಿಸಿವೆ. ಮಾತ್ರವಲ್ಲ, ಧಗಿಧಗಿಸುವ ಬೆಂಕಿಯನ್ನು ಆರಿಸಲು ಹರಸಾಹಸ ಪಡುವಂತಾಗಿದೆ. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಈ ಕಾಡ್ಗಿಚ್ಚು ಕಾಣಿಸಿಕೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡ್ಗಿಚ್ಚು ಮುಂದುವರಿದ್ದು, ಅರಣ್ಯ ಹಾಗೂ ತೋಟಕ್ಕೂ ಬೆಂಕಿ ಬಿದ್ದಿದೆ. ಚಿಕ್ಕಮಗಳೂರಿನ ಬಸರವಳ್ಳಿ ಗ್ರಾಮದಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದ್ದು, ಅರಣ್ಯ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯತ್ತಿದೆ.
ಚಾರ್ಮಾಡಿ ಘಾಟಿಯಲ್ಲೂ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಗುಡ್ಡ ತುದಿಯಲ್ಲೆಲ್ಲ ಬೆಂಕಿ ಆವರಿಸಿಕೊಂಡಿದೆ. ಬೆಂಕಿನಿಂದ ಸಸ್ಯ ಸಂಕುಲ, ಸೋಲಾರಣ್ಯಕ್ಕೆ ಹಾನಿಯಾಗಿದೆ. ಗುಡ್ಡದ ತುದಿಯಲ್ಲಿ ಕಾಡ್ಗಿಚ್ಚು ಇರುವುದರಿಂದ ಸ್ಥಳಕ್ಕೆ ತೆರಳಲು ಪರದಾಟ ನಡೆಸುವಂತಾಗಿದೆ.
ಮತ್ತೊಂದೆಡೆ ಕೊಡಗಿನ ಭಾಗಮಂಡಲ ವ್ಯಾಪ್ತಿಯ ತಾವೂರು, ತಣ್ಣಿಮಾನಿ ಬೆಟ್ಟದಲ್ಲೂ ಕಾಡ್ಗಿಚ್ಚು ಹೊತ್ತಿಕೊಂಡಿದೆ. ಸಂಜೆ ಐದು ಗಂಟೆಯಿಂದ ಕಾಣಿಸಿಕೊಂಡಿರುವ ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆಯವರು ಹರಸಾಹಸ ನಡೆಸುತ್ತಿದ್ದಾರೆ. ಸುತ್ತಮುತ್ತಲಿನ ತೋಟಗಳಿಗೂ ಬೆಂಕಿ ಹರಡುವ ಸಾಧ್ಯತೆ ಆತಂಕ ಸೃಷ್ಟಿಸಿದೆ.