

ಕರೊನಾ ಸೋಂಕಿನ ರೂಪಾಂತರ ತಳಿ ಒಮಿಕ್ರಾನ್ ವ್ಯಾಪಕವಾಗಿ ಹಬ್ಬದಂತೆ ತಡೆಯಲು ಕೇಂದ್ರ, ರಾಜ್ಯ ಸರ್ಕಾರ ಸರಣಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ, ದೆಹಲಿಯಲ್ಲಿ 12 ಒಮಿಕ್ರಾನ್ ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರ್ನಾಟಕದಲ್ಲಿ ಶುಕ್ರವಾರ ಹೊಸ ಮಾರ್ಗಸೂಚಿಗಳನ್ನು ಘೋಷಿಸಲಾಗಿದೆ. ರಾಜ್ಯಾದ್ಯಂತ ಕರೊನಾ ನಿಯಂತ್ರಣ ಕೊಠಡಿಗಳು ಪುನರಾರಂಭವಾಗಲಿವೆ. ಪರೀಕ್ಷಾ ಸಾಮರ್ಥ್ಯ ಹಾಗೂ ದೈನಂದಿನ ಪರೀಕ್ಷಾ ಪ್ರಮಾಣವನ್ನು 60 ಸಾವಿರದಿಂದ ಒಂದು ಲಕ್ಷಕ್ಕೆ ಹೆಚ್ಚಳದ ಗುರಿ ಹಾಕಿಕೊಳ್ಳಲಾಗಿದೆ. ಉದ್ಯಮ ವಹಿವಾಟುಗಳು, ಶಾಲೆ, ಕಾಲೇಜುಗಳು ಯಾವುದೇ ನಿರ್ಬಂಧ ಇಲ್ಲದೆ ಯಥಾಸ್ಥಿತಿಯಲ್ಲಿ ಸಾಗಲಿವೆ. ತೀವ್ರ ಕಟ್ಟೆಚ್ಚರ ಮತ್ತು ಕಠಿಣ ಕ್ರಮಗಳು ಈ ಹೊತ್ತಲ್ಲಿ ಅನಿವಾರ್ಯ. ಆರಂಭದಲ್ಲೇ ಸೋಂಕು ಪ್ರಸರಣವಾಗದಂತೆ ತಡೆದರೆ, ಮೂರನೇ ಅಲೆಯ ಪ್ರವೇಶವನ್ನು ತಪ್ಪಿಸಬಹುದು.ಕಳವಳದ ವಿಚಾರವೆಂದರೆ ಲಸಿಕೆಯ 2ನೇ ಡೋಸ್ನ್ನು ಶೇಕಡ 49 ಮಂದಿಯಷ್ಟೇ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವೇ ಹೇಳಿದೆ. ಸೋಂಕಿನ ಪ್ರಕರಣಗಳು ಹೆಚ್ಚಿದ್ದಾಗ, ಸರದಿಸಾಲಿನಲ್ಲಿ ಗಂಟೆಗಟ್ಟಲೇ ನಿಂತು ಲಸಿಕೆ ಹಾಕಿಸಿಕೊಂಡಿದ್ದ ಜನರು, ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬರುತ್ತಿದ್ದಂತೆ ಎರಡನೇ ಡೋಸ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮತ್ತೆ ಕೆಲವೆಡೆ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರಾದರೂ, ಈ ಅಭಿಯಾನ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಬೇಕಿದೆ.
ಕರೊನಾ ಸೋಂಕಿನ ಯಾವುದೇ ತಳಿ ವಿರುದ್ಧ ಹೋರಾಡಲು ಲಸಿಕೆಯೇ ಪ್ರಬಲ ಅಸ್ತ್ರ ಎಂಬುದು ವೈದ್ಯ ವಿಜ್ಞಾನಿಗಳ ಖಚಿತ ಅಭಿಪ್ರಾಯ. ಲಸಿಕೆ ಪಡೆದವರಿಗೆ ಸೋಂಕು ತಗುಲಬಹುದಾದರೂ, ಪರಿಸ್ಥಿತಿ ಕೈಮೀರುವುದಿಲ್ಲ ಎಂಬ ವಾಸ್ತವವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕಿದೆ. ಒಮಿಕ್ರಾನ್ ಹಿನ್ನೆಲೆಯಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವಂತೆ ಜೀನೋಮಿಕ್ ಕಾನ್ಸ್ಟೋರಿಯಂನ ವಿಜ್ಞಾನಿಗಳ ತಂಡ ಸಲಹೆ ನೀಡಿದೆ. ಕರೊನಾ ಲಸಿಕೆಯ ಎರಡನೇ ಡೋಸ್ ಪಡೆದು ಆರರಿಂದ ಒಂಬತ್ತು ತಿಂಗಳಾದವರಲ್ಲಿ ಈಗ ರೋಗಪ್ರತಿರೋಧಕ ಶಕ್ತಿ ಕುಂದಿರುತ್ತದೆ. ಇಂಥವರಿಗೆ ಬೂಸ್ಟರ್ ಡೋಸ್ನ ಅಗತ್ಯವಿದೆ ಎಂದೂ ವಿವರಿಸಿದೆ. ಗಂಭೀರ ಸಮಸ್ಯೆ ಎದುರಿಸುತ್ತಿರುವ ರೋಗಿಗಳು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಬೂಸ್ಟರ್ ಡೋಸ್ ನೀಡುವ ಸಂಬಂಧ ಕೋವಿಡ್ ಟಾಸ್ಕ್ಫೋರ್ಸ್ ಎರಡು ವಾರದಲ್ಲಿ ಹೊಸನೀತಿಯನ್ನೂ ತರಲು ಮುಂದಾಗಿದೆ. ದೇಶದ 44 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಸಂಬಂಧವೂ ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನವೇ ಎಚ್ಚೆತ್ತುಕೊಂಡು ಲಸಿಕೆ ಪಡೆದುಕೊಳ್ಳಬೇಕು ಮತ್ತು ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಸರ್ಕಾರ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸುವುದು ಈಗಿನ ಅಗತ್ಯ.