ಹಿರಿಯರ ನಿರ್ಲಕ್ಷ್ಯ ಸಲ್ಲದು: ಮಾಸಾಶನ ಹೆಚ್ಚಳವೇ ಸಮಸ್ಯೆಗೆ ಪರಿಹಾರವಾಗದು

Senior Citizen
Published on

ಅಪರೂಪದ ವಿಶೇಷತೆಗಳುಳ್ಳ ಸಾಮಾಜಿಕ ವ್ಯವಸ್ಥೆಯನ್ನು ಭಾರತದ ಅವಿಭಕ್ತ ಕುಟುಂಬಗಳಲ್ಲಿ ಮಾತ್ರ ಕಾಣಲು ಸಾಧ್ಯವಿತ್ತು. ಮನೆಯೊಡೆಯ ಕೌಟುಂಬಿಕ ಜವಾಬ್ದಾರಿ ನಿರ್ವಹಿಸಿದರೆ, ಮನೆಯೊಡತಿ ಮನೆ ನಿರ್ವಹಣೆ ಮಾಡುತ್ತಿದ್ದರು. ಹಿರಿಯರು ಮೊಮ್ಮಕ್ಕಳೊಂದಿಗೆ ದಿನ ಕಳೆಯುತ್ತಿದ್ದರು. ಕಾಲಚಕ್ರ ಉರುಳಿದಂತೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಪತಿ-ಪತ್ನಿ, ಮಕ್ಕಳು ಮಾತ್ರ ಕುಟುಂಬ ಎಂದು ಭಾವಿಸುವ ಮನಸ್ಥಿತಿ ಸಾಮಾನ್ಯವಾಗಿದೆ. ಪತಿ-ಪತ್ನಿ ಇಬ್ಬರೂ ಉದ್ಯೋಗಸ್ಥರಾಗುತ್ತಿದ್ದಾರೆ. ಒಂದೇ ಮಗು ಸಾಕು ಎನ್ನುವ ಮನೋಭಾವ ಆಳವಾಗುತ್ತಿದೆ. ಹೀಗಾಗಿ ಹಿರಿಯರಲ್ಲಿ ಒಂಟಿತನ ಹೆಚ್ಚತೊಡಗಿದೆ. ಬದಲಾದ ಕೌಟುಂಬಿಕ ಚಿತ್ರಣದಿಂದ ಮನೋರೋಗ ಸೇರಿದಂತೆ ಸಾಮಾಜಿಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಮೇಲ್ನೋಟಕ್ಕೆ ಇದು ಖಾಸಗಿ ವಿಷಯ ಎನ್ನುವಂತೆ ಕಂಡರೂ ನಿರ್ಲಕ್ಷಿಸಬಹುದಾದ ಸಮಸ್ಯೆಯಲ್ಲ.

ಹಾಗಂತ ಇಂದಿನ ಕೌಟುಂಬಿಕ ವ್ಯವಸ್ಥೆಯನ್ನೂ ದೂಷಣೆ ಮಾಡುವಂತಿಲ್ಲ. ಆದರೆ ಬದಲಾದ ವ್ಯವಸ್ಥೆಯಲ್ಲಿ ಹಿರಿಯರನ್ನು ಹೇಗೆ ನೋಡಿಕೊಳ್ಳಬೇಕು. ಅವರ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು? ಎನ್ನುವುದನ್ನು ಮನಗಾಣಬೇಕು.

ಮಾನಸಿಕ ಆರೋಗ್ಯ ಸಮಸ್ಯೆ, ಮರೆವು, ಖಿನ್ನತೆ, ಹಠಮಾರಿತನ, ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಬಗ್ಗೆ ಸಲಹೆ ನೀಡಲು ವಯೋ ಮಾನಸ ಸಂಜೀವಿನಿ ಆನ್​ಲೈನ್ ಕಾರ್ಯಕ್ರಮವೇನೋ ಸಹಕಾರಿಯಾಗಿದೆ. ಆದರೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಹಿರಿಯ ನಾಗರಿಕರ ರಕ್ಷಣೆಗಿರುವ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹಿರಿಯ ನಾಗರಿಕರ ಸಮಸ್ಯೆಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಪರಾಧ ಪ್ರಕರಣ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆ ಮಾತ್ರ ಪೊಲೀಸ್ ಇಲಾಖೆ ಕರ್ತವ್ಯ ಎನ್ನುವಂತಾಗಿದೆ.

ಸರ್ಕಾರಿ ನೌಕರರು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳು ನಿವೃತ್ತಿಯಾಗುತ್ತಿದ್ದಂತೆ ಬದಲಾದ ಬದುಕಿಗೆ ಒಗ್ಗಿಕೊಳ್ಳಲು ಕಷ್ಟಪಡುತ್ತಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ನಿವೃತ್ತಿ ಬದುಕನ್ನು ಸುಖಮಯವಾಗಿ ಕಳೆಯಲು ನಿವೃತ್ತಿ ಅಂಚಿನಲ್ಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮನೋರೋಗ ತಜ್ಞರು ಸಲಹೆ ನೀಡಿದ್ದಾರೆ. ನಿವೃತ್ತಿ ನಂತರ ಎದುರಾಗಬಹುದಾದ ಸಮಸ್ಯೆಗಳ ಹಿನ್ನೆಲೆಯಲ್ಲಿ ಇತ್ತೀಚಿಗೆ ಕೆಲ ಕಂಪನಿಗಳು ನಿವೃತ್ತಿ ಪೂರ್ವ ತರಬೇತಿ ನೀಡಲಾರಂಭಿಸಿವೆ. ಈ ವ್ಯವಸ್ಥೆ ಒಂದಷ್ಟು ಹಿರಿಯ ನಾಗರಿಕರ ಸಮಸ್ಯೆಗೆ ಪರಿಹಾರ ಒದಗಿಸಬಹುದು. ಹಿರಿಯ ನಾಗರಿಕರಿಗೆ ಈಗ ನೀಡುತ್ತಿರುವ 1,200 ರೂ. ಮಾಸಾಶನವನ್ನು ಮುಂದಿನ ಬಜೆಟ್​ನಲ್ಲಿ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದಾರೆ. ಇದು ಹಿರಿಯ ಜೀವಗಳ ಆರ್ಥಿಕ ಸಮಸ್ಯೆಗೆ ಸ್ವಲ್ಪವಾದರೂ ಪರಿಹಾರವಾಗಬಹುದು. ಆದರೆ ಹಣವೊಂದೇ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗದು.

ಹಿರಿಯರು ಎದುರಿಸುತ್ತಿರುವ ಸಮಸ್ಯೆಗಳೇನು? ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬ ಬಗ್ಗೆ ಸಮಾಲೋಚಿಸಿ ಅವರ ನೆರವಿಗೆ ಬರಬೇಕು. ಸರ್ಕಾರದ ಪರಿಹಾರ ಕ್ರಮಗಳು ಕೌಟುಂಬಿಕ ವ್ಯವಸ್ಥೆಯಲ್ಲಿ ಮತ್ತೊಂದು ಸಮಸ್ಯೆ ಸೃಷ್ಟಿಗೆ ಕಾರಣವಾಗದಂತೆಯೂ ನೋಡಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net