

ಬೆಂಗಳೂರು: ನಾಳೆ ಅಲ್ಲ ನಾಡಿದ್ದು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನ. ಎಡಗೈ ಬಳಸುವವರನ್ನೇ ಕಥಾಹಂದರವಾಗಿ ಹೊಂದಿರುವ ಸಿನಿಮಾ ಕೂಡ ಸ್ಯಾಂಡಲ್ವುಡ್ನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಇದೀಗ ಇದೇ ಚಿತ್ರದ ಪ್ರೇರಣೆಯಿಂದ ಹೊಸದೊಂದು ಹೆಲ್ಮೆಟ್ ಕೂಡ ಮಾರುಕಟ್ಟೆಗೆ ಬರಲಿದೆ. ಈ ಮೂಲಕ 'ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರದ ಪ್ರಚಾರಕ್ಕೂ 'ವೇಗ' ಸಿಕ್ಕಂತಾಗಿದೆ.
ಅರ್ಥಾತ್, ಕಥೆಯಲ್ಲಿ ಲೆಫ್ಟ್ ಹ್ಯಾಂಡೆಡ್ ವ್ಯಕ್ತಿಯನ್ನೇ ನಾಯಕನಾಗಿ ಹೊಂದಿರುವ 'ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರದಿಂದ ಪ್ರೇರಣೆಗೊಂಡು 'ವೇಗ' ಕಂಪನಿಯು ಎಡಗೈ ಬಳಕೆದಾರರಿಗೆಂದೇ ವಿಶೇಷವಾದ ಹೆಲ್ಮೆಟ್ ವಿನ್ಯಾಸಗೊಳಿಸಿದ್ದು, ಅದನ್ನು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನವಾದ ಆ. 13ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ದೂದ್ ಪೇಡಾ ದಿಗಂತ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಕಾನ್ಸೆಪ್ಸ್ 'ವೇಗ' ಹೆಲ್ಮೆಟ್ ಕಂಪನಿಯವರಿಗೆ ಇಷ್ಟವಾಗಿದ್ದು, ಅವರು ಈ ವಿಶೇಷ ಹೆಲ್ಮೆಟ್ ಮೂಲಕ ಚಿತ್ರತಂಡದ ಜತೆ ಕೈಜೋಡಿಸಿದ್ದಾರೆ. ಅಂದಹಾಗೆ ಇಂಥದ್ದೊಂದು ಹೆಲ್ಮೆಟ್ ರೂಪಿಸಿ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಸಮರ್ಥ್ ಬಿ. ಕಡಕೊಳ್ 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಬ್ಜೆಕ್ಟ್ ಒಳಗೊಂಡ ಕಥಾಹಂದರ ಈ ಚಿತ್ರದಲ್ಲಿದೆ. ಹೆಸರೇ ಹೇಳುವಂತೆ ಇದು ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರ. ಚಿತ್ರದಲ್ಲಿ ದಿಗಂತ್ ಜೋಡಿಯಾಗಿ ನವನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ಹೈಫನ್ ಪಿಕ್ಚರ್ಸ್ ಬ್ಯಾನರ್ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ ಕಡಕೊಳ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಕ್ಯಾಮೆರಾ ವರ್ಕ್, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಈ ಸಿನಿಮಾಗಿದೆ.