

ನವದೆಹಲಿ: ಮದ್ಯನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಆಮ್ ಆದ್ಮಿ ಪಕ್ಷದ ಮುಖಂಡ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಇದೀಗ ಜಾರಿ ನಿರ್ದೇಶನಾಲಯದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಶುಕ್ರವಾದ ದೆಹಲಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆ ಸಂದರ್ಭದಲ್ಲೇ ಅವರು ಈ ಆರೋಪ ಮಾಡಿದ್ದಾರೆ.
ಮೂರು ದಿನಗಳ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಂಜಯ್ ಸಿಂಗ್ ಅವರನ್ನು ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ಪಾಲ್ ಅವರ ಮುಂದೆ ಇಂದು ಹಾಜರುಪಡಿಸಲಾಯಿತು.
ಈ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಎನ್ಫೋರ್ಸ್ಮೆಂಟ್ ಡೈರೆಕ್ಟೋರೇಟ್-ಇಡಿ) ವಿರುದ್ಧವೇ ಆರೋಪ ಮಾಡಿದ ಸಂಜಯ್ ಸಿಂಗ್, ಅದಾನಿ ವಿರುದ್ಧ ನೀಡಿದ ದೂರಿನ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಕ್ರಮ ಕೈಗೊಂಡಿಲ್ಲ ಎಂದರು.
ಆಗ ನ್ಯಾಯಾಲಯದ ಒಳಗೆ ಸಂಬಂಧವಿಲ್ಲದ ವಿಷಯಗಳನ್ನು ಚರ್ಚಿಸದಂತೆ ಅಥವಾ ಭಾಷಣ ಮಾಡದಂತೆ ನ್ಯಾಯಾಧೀಶರು ಸೂಚಿಸಿದರು. ಆಗ ತಮ್ಮ ಪ್ರಕರಣದಲ್ಲೂ ಇಡಿ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಿಲ್ಲ. ಅದು ಎಂಟರ್ಟೇನ್ಮೆಂಟ್ ಡಿಪಾರ್ಟ್ಮೆಂಟ್ ಆಗಿದೆ ಎಂದರು. ನಂತರ ಸಂಜಯ್ ಸಿಂಗ್ಗೆ ಅ. 27ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮದ್ಯ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅ.4ರಂದು ದೆಹಲಿಯ ನಾರ್ತ್ ಅವೆನ್ಯೂ ಪ್ರದೇಶದಲ್ಲಿನ ಸಂಜಯ್ ಸಿಂಗ್ ನಿವಾಸದಲ್ಲಿ ಶೋಧ ನಡೆಸಿದ ನಂತರ ಅವರನ್ನು ಬಂಧಿಸಿತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿಯಲ್ಲಿ ಸಿಂಗ್ ಅವರನ್ನು ಬಂಧಿಸಲಾಗಿದೆ.