ಬಾಹ್ಯಾಕಾಶದಲ್ಲಿ ಆರ್ಥಿಕ ಫಸಲು: ಉದ್ಯೋಗ ಸೃಷ್ಟಿಗೆ ಹೊಸ ಕ್ಷೇತ್ರದತ್ತ ಸರ್ಕಾರದ ದೃಷ್ಟಿ, ಬಾಹ್ಯಾಕಾಶ ನೀತಿ ರಚನೆ

Rocket
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು 
ರಾಜ್ಯದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ, ಬಂಡವಾಳ ಆಕರ್ಷಣೆ, ಉದ್ಯೋಗ ಸೃಷ್ಟಿ, ಆವಿಷ್ಕಾರ ಮತ್ತು ಸಂಶೋಧನಾ ಕ್ಷೇತ್ರದ ಕಡೆ ಗಮನ ಹರಿಸಿರುವ ಸರ್ಕಾರ, ಬಾಹ್ಯಾಕಾಶ ಮತ್ತು ಆರ್ಥಿಕ ತಾಂತ್ರಿಕತೆ ವಲಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಚಂದ್ರಯಾನ ಯಶಸ್ಸಿನ ನಂತರ ಬಾಹ್ಯಾಕಾಶ ಕ್ಷೇತ್ರದ ಆರ್ಥಿಕತೆ ಬಹು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ಅದರ ಲಾಭವನ್ನು ರಾಜ್ಯದ ಕಡೆ ತಿರುಗಿಸಿಕೊಳ್ಳುವ ಮೂಲಕ ಹೊಸ ಕ್ಷೇತ್ರವೊಂದನ್ನು ಹುಡುಕಿಕೊಳ್ಳುವುದು ಸರ್ಕಾರದ ಆಶಯವಾಗಿದೆ. ಅದಕ್ಕೆ ತಕ್ಕಂತೆ ಬಾಹ್ಯಕಾಶ ನೀತಿಯೊಂದನ್ನು ಹೊರತರಲು ನಿರ್ಧರಿಸಿದೆ.

ಎಷ್ಟಿದೆ ಆರ್ಥಿಕತೆ?: ಇಡೀ ದೇಶದಲ್ಲಿ ಬಾಹ್ಯಾಕಾಶ ಆರ್ಥಿಕತೆ ಈಗ 8.4 ಶತಕೋಟಿ ಡಾಲರ್​ಗಳಷ್ಟಿದೆ. ಅದು 2033ಕ್ಕೆ 44 ಶತಕೋಟಿ ಡಾಲರ್​ಗಳಿಗೆ ತಲುಪುವ ಆಂದಾಜಿದೆ. ಈ ಮೊತ್ತದಲ್ಲಿ ಶೇ. 40ರಷ್ಟನ್ನು ರಾಜ್ಯಕ್ಕೆ ಸೆಳೆಯುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿ ರಾಜ್ಯವನ್ನು ಬಾಹ್ಯಾಕಾಶ ತಂತ್ರಜ್ಞಾನ ತಾಣವನ್ನಾಗಿ ರೂಪಿಸುವತ್ತ ಸರ್ಕಾರ ಮುಂದಡಿಯಿಟ್ಟಿದೆ.

ನೆರವು ಏನು?: ದೇಶದಲ್ಲಿ ಬರುವ ಹೂಡಿಕೆಯಲ್ಲಿ ಬಹುಪಾಲನ್ನು ರಾಜ್ಯಕ್ಕೆ ಆಹ್ವಾನಿಸಿದರೆ ಅದರಿಂದ ಉದ್ಯೋಗಗಳ ಸೃಷ್ಟಿ ತಾನಾಗಿಯೇ ಆಗುತ್ತದೆ. ಅದಕ್ಕೆ ತಕ್ಕಂತೆ ರಾಜ್ಯಕ್ಕೆ ಬರುವ ಉದ್ದಿಮೆಗಳಿಗೆ ಹೆಚ್ಚಿನ ವಿನಾಯ್ತಿಗಳನ್ನು ನೀಡುವ ಬಗ್ಗೆಯೂ ಚರ್ಚೆಯಾಗಿದೆ. ಆಡಿಯೋ ವಿಷ್ಯುವಲ್, ಬಯೋಟೆಕ್ನಾಲಜಿ ಹೀಗೆ... ವಿವಿಧ ವಲಯದಲ್ಲಿ ನೀಡಿರುವ ರಿಯಾಯ್ತಿಗಳನ್ನು ಬಾಹ್ಯಾಕಾಶ ಉದ್ದಿಮೆಗಳಿಗೂ ವಿಸ್ತರಿಸಲಾಗುತ್ತದೆ. ಅದರ ಜತೆಜತೆಗೆ ಮಾರುಕಟ್ಟೆ ಸೌಲಭ್ಯಕ್ಕೆ ಬೇಕಾದ ತಂತ್ರವನ್ನು ರೂಪಿಸಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.

ಯಾವಾಗ ಹೊಸ ನೀತಿ?: ಈಗ ನೀತಿ ರೂಪಿಸಲು ಚರ್ಚೆಗಳು ನಡೆಯುತ್ತಿವೆ. ಈ ತಿಂಗಳ ಕೊನೆಯ ವಾರದಲ್ಲಿ ಪ್ರಮುಖ ಸಭೆ ನಡೆಯಲಿದೆ. ಆ ನಂತರ ನೀತಿ ರೂಪಿಸುವ ಕಾರ್ಯ ಆರಂಭವಾಗಲಿದೆ. ಬಹುತೇಕ ಮುಂದಿನ ಬಜೆಟ್​ಗೆ ಹೊಸ ನೀತಿಯನ್ನು ಘೋಷಿಸುವ ನಿರೀಕ್ಷೆಯಿದೆ.

ಯಾವ ರಾಜ್ಯದಲ್ಲಿದೆ ನೀತಿ?: ಸದ್ಯಕ್ಕೆ ಬಾಹ್ಯಾಕಾಶ ನೀತಿ ಯಾವುದೇ ರಾಜ್ಯದಲ್ಲಿಲ್ಲ. ಆದರೆ, ತೆಲಂಗಾಣದಲ್ಲಿ ಈ ನಿಟ್ಟಿನಲ್ಲಿ ಕರಡು ಸಿದ್ಧವಾಗಿದೆ. ಬಹುತೇಕ ಅಲ್ಲಿ ಹೊಸ ಸರ್ಕಾರ ಬಂದ ನಂತರ ಅದಕ್ಕೆ ಸ್ಪಷ್ಟ ರೂಪ ಸಿಗುವ ಸಾಧ್ಯತೆ ಇದೆ. ಅದೇ ಸಮಯಕ್ಕೆ ರಾಜ್ಯದಲ್ಲಿಯೂ ನೀತಿ ಹೊರಬರಲಿದೆ.

ಬಿಯಾಂಡ್ ಸಾಫ್ಟ್​ವೇರ್: ಬಾಹ್ಯಾಕಾಶ ಆರ್ಥಿಕತೆಯ ಅವಕಾಶಗಳನ್ನು ಬಳಸಿಕೊಳ್ಳಲು ಪ್ರತ್ಯೇಕ ನೀತಿಯನ್ನು ರೂಪಿಸುತ್ತಿರುವುದು ಬಿಯಾಂಡ್ ಸಾಫ್ಟ್​ವೇರ್ (ತಂತ್ರಾಂಶದಾಚೆಯೂ) ಎಂಬ ಅನುಸಂಧಾನವನ್ನು ಹೊಂದಿದೆ ಎಂದು ಮೂಲಗಳು ಹೇಳುತ್ತವೆ.

ಬಾಹ್ಯಾಕಾಶ ಆರ್ಥಿಕತೆ ಕ್ಷೇತ್ರದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು, ಸಂಶೋಧನೆ, ಆವಿಷ್ಕಾರ, ನವೋದ್ಯಮಗಳಿಗೆ ಆದ್ಯತೆ ನೀಡಲು ಹೊಸ ನೀತಿ ಜಾರಿಗೆ ಚರ್ಚೆಗಳು ನಡೆದಿವೆ. ಈ ತಿಂಗಳ ಕೊನೆಗೆ ವಿವಿಧ ಕಂಪನಿಗಳ ಜತೆ ಸಭೆ ಇದೆ. ಬಾಹ್ಯಾಕಾಶ ಆರ್ಥಿಕ ಕ್ಷೇತ್ರದ ರಾಜಧಾನಿಯನ್ನಾಗಿ ಮಾಡುವುದು ನಮ್ಮ ಗುರಿ. | ಪ್ರಿಯಾಂಕ್ ಖರ್ಗೆ, ಐಟಿ- ಬಿಟಿ ಸಚಿವ

ಬಾಹ್ಯಾಕಾಶ ನೀತಿಯ ಅನುಕೂಲಗಳು

  • ಈ ವಲಯದ ಅವಕಾಶಗಳನ್ನು ಹೆಚ್ಚಿಸುವುದು
  • ಉತ್ಪಾದನಾ ವಲಯಕ್ಕೆ ಆದ್ಯತೆ
  • ಹೊಸ ಆವಿಷ್ಕಾರಗಳು
  • ಸಂಶೋಧನೆಗೆ ಆದ್ಯತೆ ನೀಡುವುದು
  • ಹೂಡಿಕೆಯ ಆಕರ್ಷಣೆ, ಉದ್ಯೋಗಗಳ ಸೃಷ್ಟಿ
  • ಖಾಸಗಿ ಸಹಭಾಗಿತ್ವಕ್ಕೆ ಉತ್ತೇಜನ
  • ಪೂರಕ ಪರಿಸರ ನಿರ್ಮಾಣ

ಆರ್ಥಿಕ ತಾಂತ್ರಿಕತೆಗೆ ಒತ್ತು

ಆರ್ಥಿಕ ತಾಂತ್ರಿಕತೆ (ಫಿನ್​ಟೆಕ್) ಬೆಳೆಯುತ್ತಿರುವ ಮತ್ತೊಂದು ಪ್ರಮುಖ ಕ್ಷೇತ್ರವಾಗಿದೆ. ಬಿಯಾಂಡ್ ಬೆಂಗಳೂರು ಯೋಜನೆಯಲ್ಲಿ ಮಂಗಳೂರಿನಲ್ಲಿ ಫಿನ್​ಟೆಕ್ ಕ್ಲಸ್ಟರ್ ರೂಪಿಸುವ ಉದ್ದೇಶ ಇದ್ದರೂ ಬೆಂಗಳೂರನ್ನು ಫಿನ್​ಟೆಕ್ ರಾಜಧಾನಿಯನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಮುಂಬೈ ದೇಶದ ಹಣಕಾಸು ರಾಜಧಾನಿಯಾಗಿದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದ ಆರ್ಥಿಕ ತಾಂತ್ರಿಕತೆ ರಾಜಧಾನಿಯನ್ನಾಗಿ ಮಾಡುವ ಮೂಲಕ ಈ ವಲಯದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳುವುದು ಸರ್ಕಾರದ ನಿರ್ಧಾರವಾಗಿದೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಈಗಾಗಲೇ ಈ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ. ಅದರಿಂದಾಗಿಯೇ ರಾಜ್ಯದಲ್ಲಿ 33 ಯೂನಿಕಾರ್ನ್​ಗಳು ಸ್ಥಾಪನೆಯಾಗಿವೆ. ರೇಝುರ್ ಪೇ ಕಚೇರಿ ಇಲ್ಲಿದೆ. ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಫಿನ್​ಟೆಕ್ ಸಹ ಸ್ಥಾಪಿಸಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ. ಉದ್ಯಮಶೀಲನೆಯನ್ನು ಹೆಚ್ಚಿಸುವ ರೀತಿಯಲ್ಲಿ ಜಾಗತಿಕ ತಂತ್ರಜ್ಞಾನ ಹಬ್ ಆಗಿ ರೂಪಿಸಲಾಗುತ್ತದೆ.

  • ಬಾಹ್ಯಾಕಾಶ ವಲಯದ ವಹಿವಾಟು 2033ಕ್ಕೆ 44 ಶತಕೋಟಿ ಡಾಲರ್ ನಿರೀಕ್ಷೆ
  • ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಆಕರ್ಷಣೆ ಗುರಿ
  • ಈ ಅವಕಾಶ ಬಳಕೆ ಸರ್ಕಾರದ ಉದ್ದೇಶ
  • ಈ ತಿಂಗಳ ಕೊನೆಗೆ ಪ್ರಮುಖ ಸಭೆ
  • ಫಿನ್​ಟೆಕ್ ಕ್ಷೇತ್ರದಲ್ಲಿ ಬೆಂಗಳೂರನ್ನು ರಾಷ್ಟ್ರದ ರಾಜಧಾನಿ ಮಾಡುವ ನಿಟ್ಟಿನಲ್ಲಿ ಕ್ರಮ

ಹೊಸ ನೀತಿ ಏಕೆ?

ಇಸ್ರೋದ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ. ಬಾಹ್ಯಾಕಾಶದ ಶೇ.70ರಷ್ಟು ಸಂಶೋಧನೆ ರಾಜಧಾನಿಯಲ್ಲೇ ಆಗುತ್ತದೆ. ಇಸ್ರೋ ಉಡಾವಣೆ ಮಾಡುವ ಉಪಗ್ರಹಗಳಿಗೆ ಬೇಕಾದ ಬಿಡಿಭಾಗಗಳ ಹೆಚ್ಚಿನ ಪಾಲು ಉತ್ಪಾದನೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಆಗುತ್ತದೆ. ರಾಜ್ಯದಲ್ಲಿಯೇ ಇಸ್ರೋಗೆ ಬೇಕಾದ ಎಲ್ಲ ಉತ್ಪನ್ನಗಳು ಉತ್ಪಾದನೆಯಾಗುವಂತೆ ಪ್ರೋತ್ಸಾಹ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಿಂತ ಮುಖ್ಯವಾಗಿ ಉಪಗ್ರಹಗಳು ಉಡಾವಣೆಯಾದ ನಂತರ ಅದರಿಂದ ಬರುವ (ಡೌನ್​ಲಿಂಕ್) ಮಾಹಿತಿಯನ್ನು ವಿವಿಧ ಉದ್ದಿಮೆಗಳಿಗೆ ಬಳಕೆ ಮಾಡುವುದು ಮುಖ್ಯವಾಗಿದೆ. ಈಗ ಪವನ ವಿದ್ಯುತ್ ಉತ್ಪಾದನಾ ಸಂಸ್ಥೆಗಳು ಮಾತ್ರ ಅದನ್ನು ಬಳಸುತ್ತಿವೆ. ಬೇರೆ ಉದ್ದಿಮೆಗಳಲ್ಲಿಯೂ ಬಳಕೆಯಾಗುವಂತೆ ನೋಡಿಕೊಳ್ಳುವ ರೀತಿಯಲ್ಲಿ ಪರಿಸರ ವನ್ನು ರೂಪಿಸಬೇಕಾಗಿದೆ. ಅದಕ್ಕಾಗಿಯೇ ಪ್ರತ್ಯೇಕ ಬಾಹ್ಯಾ ಕಾಶ ನೀತಿಯನ್ನು ತರಲು ತೀರ್ವನಿಸಿದೆ. ಬಾಹ್ಯಾಕಾಶ ವಲಯದ ಕೆಲ ಸ್ಟಾರ್ಟಪ್​ಗಳಿದ್ದು, ಅವುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀತಿ ರೂಪಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net