

ನವದೆಹಲಿ: ಕಾರ್ವಿುಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಮತ್ತು ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐ) ಚಂದಾದಾರರು ಕ್ಲೇಮ್ ಸೆಟಲ್ವೆುಂಟ್ ಹಣವನ್ನು ಇ-ವ್ಯಾಲೆಟ್ಗಳ ಮೂಲಕ ಬಳಸಿಕೊಳ್ಳುವುದು ಇನ್ನು ಮುಂದೆ ಸಾಧ್ಯವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ‘ಸ್ವಯಂಚಾಲಿತ ಇತ್ಯರ್ಥದ ಪ್ರಕರಣಗಳಲ್ಲಿ ಹಣವು ಬ್ಯಾಂಕ್ ಖಾತೆಗೆ ಹೋಗುತ್ತದೆ. ಅದನ್ನು ಬ್ಯಾಂಕ್ ಅಥವಾ ಎಟಿಎಂನಿಂದ ತೆಗೆದುಕೊಳ್ಳಲು ಸಾಧ್ಯವಿದ್ದೇ ಇರುತ್ತದೆ. ಆದರೆ ಮೊತ್ತವು ತಾನಾಗಿಯೇ ಇ-ವ್ಯಾಲೆಟ್ಗೆ ಬರುವಂತೆ ಮಾಡುವುದು ಹೇಗೆ ಎಂಬ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಜತೆ ಸಮಾಲೋಚನೆ ನಡೆದಿದ್ದು, ಶೀಘ್ರದಲ್ಲೇ ಈ ಸಂಬಂಧ ವ್ಯವಸ್ಥೆಯೊಂದು ಜಾರಿಗೆ ಬರಲಿದೆ’ ಎಂದು ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಹೇಳಿದ್ದಾರೆ.
ಜನವರಿ 31 ಕೊನೆಯ ದಿನ: ಹೆಚ್ಚಿನ ವೇತನಕ್ಕೆ ಪಿಂಚಣಿ ನೀಡುವುದಕ್ಕೆ ಸಂಬಂಧಿಸಿದಂತೆ 3.1 ಲಕ್ಷ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದ್ದು, ವೇತನ ವಿವರಗಳನ್ನು ಅಪ್ಲೋಡ್ ಮಾಡಲು ಮುಂದಿನ ವರ್ಷದ ಜನವರಿ 31 ಕೊನೆಯ ದಿನವಾಗಿರುತ್ತದೆ. ಇದಕ್ಕಾಗಿ ಆನ್ಲೈನ್ ಸೌಲಭ್ಯವನ್ನು ಇಪಿಎಫ್ಒ ಕಲ್ಪಿಸಿದೆ. 2022ರ ನ. 4ರ ಸುಪ್ರೀಂಕೋರ್ಟ್ ಆದೇಶ ಪಾಲನೆಗಾಗಿ ಇದನ್ನು ಅರ್ಹ ಪಿಂಚಣಿದಾರರಿಗೆ ಅಥವಾ ಸದಸ್ಯರಿಗೆ ಕಲ್ಪಿಸಲಾಗಿತ್ತು. 2023ರ ಫೆ. 26ರಂದು ಅಧಿಕೃತವಾಗಿ ಚಾಲನೆ ಪಡೆದಿದ್ದ ಈ ಸೌಲಭ್ಯ ಆ ವರ್ಷದ ಮೇ 3ರವರೆಗೆ ಮಾತ್ರ ಲಭ್ಯವಿತ್ತು. ಬಳಿಕ ನೌಕರರ ಆಗ್ರಹದ ಮೇರೆಗೆ ಹಲವು ಬಾರಿ ವಿಸ್ತರಿಸಲಾಗಿತ್ತು. ಆದರೂ ಇನ್ನೂ 3.1 ಲಕ್ಷ ಅರ್ಜಿಗಳು ಉದ್ಯೋಗದಾತರ ಬಳಿಯೇ ಬಾಕಿ ಇವೆ. ಆದ್ದರಿಂದ ಈ ಬಾರಿ ಕೊನೆಯದಾಗಿ ಜ. 31ರವರೆಗೆ ಗಡುವು ವಿಸ್ತರಿಸಲು ಇಪಿಎಫ್ಒ ಮುಂದಾಗಿದೆ. ಇದಲ್ಲದೆ 4.66 ಲಕ್ಷ ಪ್ರಕರಣಗಳಲ್ಲಿ ನೌಕರರ ಹೆಚ್ಚುವರಿ ಮಾಹಿತಿ ಅಥವಾ ಸ್ಪಷ್ಟನೆಯನ್ನು ಇಪಿಎಫ್ಒ ಕೋರಿದ್ದು, ಅದನ್ನು ಸಲ್ಲಿಸಲು ಉದ್ಯೋಗದಾತರಿಗೆ ಜ. 15 ಕೊನೆಯ ದಿನವಾಗಿದೆ.
17.8 ಲಕ್ಷ ಹೊಸ ಸದಸ್ಯರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅಕ್ಟೋಬರ್ನಲ್ಲಿ ಇಎಸ್ಐ ವ್ಯಾಪ್ತಿಗೆ ಶೇಕಡ ಮೂರರಷ್ಟು, ಅಂದರೆ 17.8 ಲಕ್ಷ ಹೊಸ ಚಂದಾದಾರರು ನೋಂದಣಿಯಾಗಿದ್ದಾರೆ. 21,588 ಹೊಸ ಸಂಸ್ಥೆಗಳು ಇಎಸ್ಐನ ಸಾಮಾಜಿಕ ಭದ್ರತೆ ಯೋಜನೆಯಡಿ ಬಂದಿದ್ದಾರೆ ಎಂದು ಕಾರ್ವಿುಕ ಸಚಿವಾಲಯ ತಿಳಿಸಿದೆ. ಹೊಸದಾಗಿ ನೋಂದಣಿ ಯಾದವರ ಪೈಕಿ ಶೇ. 47.75ರಷ್ಟು ಮಂದಿ, ಅಂದರೆ 8.5 ಲಕ್ಷ ನೌಕರರು 25 ವರ್ಷದ ಒಳಗಿನವರಿದ್ದಾರೆ. 3.52 ಲಕ್ಷ ಮಹಿಳೆಯರಿದ್ದಾರೆ. 42 ಮಂದಿ ಮಂಗಳಮುಖಿಯರಿದ್ದಾರೆ ಎಂದು ಸಂಸ್ಥೆ ಹೇಳಿದೆ.