

ಮುಂಬೈ: ಹದಿಮೂರು ವರ್ಷಗಳ ಹಿಂದೆ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ, ಇಬ್ಬರ ಪ್ರಾಣ ತೆಗೆದಿದ್ದ ಎನ್‌ಆರ್‌ಐ ಬ್ಯೂಟಿಷಿಯನ್ ನೂರಿಯಾ ಹವೇಲಿವಾಲಾ (40) ಖಿನ್ನತೆಯಿಂದ ಬಳಲಿ ಕೊನೆಯುಸಿರೆಳೆದಿದ್ದಾಳೆ.
ಭಾರತ ಮೂಲದ ನೂರಿಯಾ ಅಮೆರಿಕದಲ್ಲಿ ಬ್ಯೂಟಿಷಿಯನ್ ಆಗಿದ್ದಳು. 2010ರಲ್ಲಿ ನಡೆದಿದ್ದ ಡ್ರಂಕ್ ಅಂಡ್ ಡ್ರೈವ್ ಕೇಸ್ನಲ್ಲಿ ಅಪರಾಧಿಯಾಗಿ ಶಿಕ್ಷೆಗೆ ಗುರಿಯಾಗಿದ್ದಳು. ಇದರಿಂದ ಖಿನ್ನತೆಗೆ ಜಾರಿದ್ದ ನೂರಿಯಾ, ಕಳೆದ ಮಂಗಳವಾರ (ಜು.4) ದಕ್ಷಿಣ ಮುಂಬೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈಕೆಯ ಪಾನಮತ್ತ ಚಾಲನೆಯಿಂದ ಓರ್ವ ಸಬ್ ಇನ್ಸ್‌ಪೆಕ್ಟರ್ ಮತ್ತು ಓರ್ವ ಬೈಕ್ ಸವಾರ ಮೃತಪಟ್ಟಿದ್ದರು. 2010ರ ಜನವರಿ 30ರಂದು ಈ ಘಟನೆ ನಡೆದಿತ್ತು. ಕುಡಿದ ಮತ್ತಿನಲ್ಲಿ ತನ್ನ ಎಸ್ಯುವಿ ಕಾರು ಚಲಾಯಿಸಿಕೊಂಡು ಹೋಗಿದ್ದ ನೂರಿಯಾ ಒಟ್ಟು 6 ಮಂದಿಗೆ ಡಿಕ್ಕಿ ಹೊಡೆದಿದ್ದಳು. ಇದರಲ್ಲಿ ನಾಲ್ವರು ಗಾಯಗೊಂಡಿದ್ದರು.
ತಾನು ಮಾಡಿದ ತಪ್ಪಿನಿಂದಾಗಿ ಆಕೆಯ ಜೀವನವೇ ನಾಶವಾದ್ದರಿಂದ ಖಿನ್ನತೆಗೆ ಜಾರಿದ್ದಳು ಎಂದು ಆಕೆಯ ಕುಟುಂಬದ ಆಪ್ತ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಅತಿವೇಗವಾಗಿ ಚಾಲನೆ ಮಾಡಿ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಳು. ಇಬ್ಬರ ಅಮಾಯಕರ ಪ್ರಾಣ ಹೋಗಿತ್ತು. ನೀವು ಶ್ರೀಮಂತ ವ್ಯಕ್ತಿಯೇ ಆಗಿರಬಹುದು, ಒಳ್ಳೆಯ ವೃತ್ತಿಪರಳಾಗಿರಬಹುದು ಮತ್ತು ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿರಬಹುದು, ಆದರೆ ನೀವು ನಿಯಮವನ್ನು ಉಲ್ಲಂಘಿಸಿದರೆ, ಶಿಕ್ಷೆಗೆ ಗುರಿಯಾಗುತ್ತೀರಿ ಎಂಬ ಬಲವಾದ ಸಂದೇಶವನ್ನು ಈ ಪ್ರಕರಣ ರವಾನಿಸಿದೆ. ಆದ್ದರಿಂದ ಎಲ್ಲ ನಿಯಮಗಳನ್ನು ಅನುಸರಿಸಿ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ ಎಂದು ಮುಂಬೈ ಟ್ರಾಫಿಕ್ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎನ್‌ಆರ್‌ಐ ಬ್ಯೂಟಿಷಿಯನ್ ಆಗಿದ್ದ ನೂರಿಯಾ, ತನ್ನ ತಂದೆ ತಾಯಿಯೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದರು ಆದರೆ, ಆಕೆಯ ತಂದೆ ಯೂಸುಫ್ ಭಾರತಕ್ಕೆ ತೆರಳಲು ನಿರ್ಧರಿಸಿ ಮುಂಬೈಗೆ ಬಂದು ಕೊಲಾಬಾದಲ್ಲಿ ವಾಸವಾಗಿದ್ದರು ಎಂದು ಕುಟುಂಬದ ಆಪ್ತ ಮೂಲಗಳು ತಿಳಿಸಿವೆ. ನೂರಿಯಾ ಅಮೆರಿಕದಲ್ಲಿ ಆಸ್ತಿ ಹೊಂದಿದ್ದರು. ಅಲ್ಲದೆ, ಅಮೆರಿಕಕ್ಕೆ ಮರಳುವ ವಿಶ್ವಾಸದಲ್ಲಿ ಇದ್ದಳು. ಆದರೆ, ಡ್ರಿಂಕ್ ಆಂಡ್ ಡ್ರೈವ್ ಪ್ರಕರಣದ ಬಳಿಕ ಕಾನೂನಿ ಪ್ರಕ್ರಿಯೆ ಆಕೆಯನ್ನು ಇಲ್ಲಿಯೇ ಇರುವಂತೆ ಮಾಡಿತು. ಇದರಿಂದ ಅಮೆರಿಕಕ್ಕೆ ಹೋಗಲಾಗದೇ ಖಿನ್ನತೆಗೆ ಜಾರಿದ್ದಳು. ವಿಚಾರಣೆಯ ಆರಂಭಿಕ ದಿನಗಳಲ್ಲಿ ನೂರಿಯಾ ದೇಶವನ್ನು ತೊರೆಯಲು ಅನುಮತಿಸಲಿಲ್ಲ. ಭರವಸೆಯ ಬ್ಯೂಟಿಷಿಯನ್ ಆಗಿದ್ದ ಆಕೆ ತನ್ನ ವೃತ್ತಿಜೀವನದಲ್ಲಿ ಬೆಳೆಯಲು ಬಯಸಿದ್ದಳು. ಖಿನ್ನತೆಗೆ ಜಾರಲು ಇದೂ ಕೂಡ ಒಂದು ಕಾರಣವಾಗಿತ್ತು ಎಂದು ನೂರಿಯಾಳ ಆಪ್ತರು ತಿಳಿಸಿದ್ದಾರೆ.
ಈ ಘಟನೆ 2010ರ ಜನವರಿ 30 ರಂದು ನಡೆಯಿತು. ಅಂದು ಕಲಬಾದೇವಿ ಸಂಚಾರ ವಿಭಾಗವು ಕುಡಿದು ವಾಹನ ಚಲಾಯಿಸುವವರನ್ನು ಹಿಡಿಯಲು ವಿಶೇಷ ಕಾರ್ಯಾಚರಣೆಯನ್ನು ಆಯೋಜಿಸಿತ್ತು. ಮಧ್ಯರಾತ್ರಿ 12.10ಕ್ಕೆ ನೂರಿಯಾ ತನ್ನ ಎಸ್ಯುವಿ ಕಾರನ್ನು ಪಾನಮತ್ತಿನಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಳು. ಆಕೆಯ ಕಾರು ಒಪೇರಾ ಹೌಸ್‌ನಿಂದ ಆಗಮಿಸಿ ಚರ್ಚ್‌ಗೇಟ್ ಕಡೆಗೆ ಹೋಗುತ್ತಿದ್ದಾಗ ವಾಹನವು ಅತಿ ವೇಗದಲ್ಲಿತ್ತು ಮತ್ತು ಟ್ರಾಫಿಕ್ ಸಿಗ್ನಲ್ ಬಳಿ ನಿಂತಿದ್ದ ಟ್ಯಾಕ್ಸಿ ಒಂದಕ್ಕೆ ಮೊದಲು ಡಿಕ್ಕಿ ಹೊಡೆದಳು. ನಂತರ ಆಕೆಯ ಕಾರು ನಾಕಾಬಂದಿ ನಡೆಸುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ದೀನಾನಾಥ್ ಶಿಂಧೆ ಮತ್ತು ಮೋಟಾರ್ ಸೈಕಲ್ ಸವಾರ ಅಫ್ಜಲ್ ಇಬ್ರಾಹಿಂ ಡಿಕ್ಕಿ ಹೊಡೆದಳು. ಆಕೆ ಡ್ರೈವಿಂಗ್ ಮಾಡುವಾಗ ಬಿಯರ್ ಕುಡಿಯುತ್ತಿದ್ದಳು ಎಂದು ವರದಿಯಾಗಿದ್ದು, ಈ ಪ್ರಕರಣದಲ್ಲಿ ಆಕೆಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಈ ಪ್ರಕರಣದಲ್ಲಿ ಎಲ್‌ಟಿ ಮಾರ್ಗ್ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಸ್ವಲ್ಪ ಸಮಯದ ನಂತರ ಜಾಮೀನು ಪಡೆದರೂ ನ್ಯಾಯಾಲಯ ಆಕೆಗೆ ಶಿಕ್ಷೆ ವಿಧಿಸಿದ ನಂತರ ಆಕೆಯನ್ನು ಮತ್ತೆ ಪೊಲೀಸರು ಬಂಧಿಸಿದರು ಮತ್ತು ಶಿಕ್ಷೆಯ ಅವಧಿ ಮುಗಿಯುವವರೆಗೂ ಜೈಲಿನಲ್ಲೇ ಇದ್ದರು. ಇದರಿಂದ ಖಿನ್ನತೆಗೆ ಜಾರಿದ್ದ ನೂರಿಯಾ ಇದೀಗ ಖಿನ್ನತೆಯಿಂದ ಬಳಲಿ ಕೊನೆಯುಸಿರೆಳೆದಿದ್ದಾಳೆ. (ಏಜೆನ್ಸೀಸ್)