

ಪ್ಯೂಬ್ಲೋ: ಮೆಕ್ಸಿಕೋದ ಅಲ್ವಾರೋ ಎಂಬ ವ್ಯಕ್ತಿ ಪತ್ನಿಯ ತಲೆ ಒಡೆದು ಆಕೆಯ ಮಿದುಳನ್ನೇ ತಿಂದು ಹಾಕಿದ್ದಲ್ಲದೆ ತಲೆ ಬುರುಡೆಯನ್ನು ಆಶ್ಟ್ರೇ ಆಗಿ ಬಳಸಿದ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. 32 ವರ್ಷದ ಆಲ್ವಾರೋನನ್ನು ಪ್ಯೂಬ್ಲೋದಲ್ಲಿರುವ ಆತನ ಮನೆಯಿಂದ ಜುಲೈ 2ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಲ್ಡರ್ ಆಗಿರುವ ಆಲ್ವಾರೋ, ಜೂನ್ 29ರಂದು ನಿಷೇಧಿತ ಮಾದಕದ್ರವ್ಯ ಸೇವನೆಯ ಮತ್ತಿನಲ್ಲಿ ಹೆಂಡತಿಯನ್ನು ಕೊಂದು ಈ ಹೀನ ಕೃತ್ಯವೆಸಗಿದ್ದ. ಸಾಂತ ಮೂರ್ಟೆ (ಸಾವಿನ ಪವಿತ್ರ ಮಾತೆ) ಮತ್ತು ಭೂತ ಈ ಅಪರಾಧವೆಸಗಲು ತನಗೆ ಆದೇಶಿಸಿದ್ದವು ಎಂದು ಆರೋಪಿ ಪೊಲೀಸರಿಗೆ ಹೇಳಿದ್ದಾನೆ. ಆಲ್ವಾರೋ, 38 ವರ್ಷದ ಮಾರಿಯಾ ಮಾಂಟ್ಸರಾಟ್ ಎಂಬಾಕೆಯನ್ನು ವಿವಾಹವಾಗಿ ಒಂದು ವರ್ಷ ಕೂಡ ತುಂಬಿಲ್ಲ. ಮಾರಿಯಾಗೆ 12ರಿಂದ 23 ವರ್ಷ ವರೆಗಿನ ಐದು ಹೆಣ್ಣು ಮಕ್ಕಳಿದ್ದಾರೆ. ಆರೋಪಿ ಆಲ್ವಾರೋ, ಇತ್ತೀಚೆಗೆ ಭಾರತದಲ್ಲಿ ವರದಿಯಾದ ಹಲವು ಅಮಾನುಷ ಪ್ರಕರಣಗಳ ರೀತಿಯಲ್ಲಿ, ಕೊಲೆ ಮಾಡಿದ ಪತ್ನಿಯ ದೇಹದ ಭಾಗಗಳನ್ನು ಕತ್ತರಿಸಿ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಇರಿಸಿದ್ದ.
ಮಲಮಕ್ಕಳಿಗೆ ಮಾಹಿತಿ: ಹೆಂಡತಿಯನ್ನು ಕೊಲೆ ಮಾಡಿದ 2 ದಿನಗಳ ನಂತರ ಮಲ ಮಕ್ಕಳಿಗೆ ಫೋನ್ ಮಾಡಿ, ದುಷ್ಕೃತ್ಯದ ಮಾಹಿತಿ ನೀಡಿದ. ‘ನಾನು ಈಗಾಗಲೇ ನಿಮ್ಮ ತಾಯಿಯನ್ನು ಕೊಲೆ ಮಾಡಿದ್ದೇನೆ. ಅವಳನ್ನು ತುಂಡು ಮಾಡಿ ಬ್ಯಾಗ್ನಲ್ಲಿ ಇರಿಸಿದ್ದು ಬಂದು ತೆಗೆದುಕೊಂಡು ಹೋಗಿ’ ಎಂದು ಹೇಳಿದ್ದ ಎಂದು ಮೃತಳ ತಾಯಿ ಮಾರಿಯಾ ಆಲೈಸಿಯಾ ಮಾಂಟಿಯೆಲ್ ಸೆರ›ನ್ ತಿಳಿಸಿದ್ದಾರೆ. ಮಚ್ಚು, ಉಳಿ ಮತ್ತು ಸುತ್ತಿಗೆಯಿಂದ ತನ್ನ ಮಗಳ ದೇಹವನ್ನು ಕತ್ತರಿಸಿದ್ದಾನೆ ಎಂದು ಹೇಳಿದ್ದಾರೆ.