

ಹಾಸನ: ಅಬಕಾರಿ ಸುಂಕ ಹೆಚ್ಚಿಸುವುದಾಗಿ ಬಜೆಟ್ನಲ್ಲಿ ಘೋಷಿಸಿರುವ ಸರ್ಕಾರದ ನಿಲುವಿನ ವಿರುದ್ಧ ಕರ್ನಾಟಕ ಮದ್ಯಪಾನಪ್ರಿಯರ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ಈ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದೆ.
ಕರ್ನಾಟಕ ಮದ್ಯಪಾನಪ್ರಿಯರ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶಗೌಡ ಬೋರೇಹಳ್ಳಿ ಇಂದು ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು. ಅಬಕಾರಿ ಸುಂಕ ಶೇ. 20 ಜಾಸ್ತಿ ಮಾಡುವುದಾಗಿ ಸರ್ಕಾರ ಬಜೆಟ್ನಲ್ಲಿ ಘೋಷಿಸಿದೆ. ಅದನ್ನು ಏರಿಸಬೇಡಿ, ಬದಲಿಗೆ ಶೇ. 10 ಕಡಿಮೆ ಮಾಡಿ, ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿಯವರು ಶೇ. 30 ಏರಿಸಿ ಹೋಗಿದ್ದರು. ಒಳ್ಳೆಯ ಸರ್ಕಾರ ಬರುತ್ತದೆ ಎಂದು ನಾವೆಲ್ಲ ನಿಮಗೆ ಮತ ಹಾಕಿದೆವು. ಆದರೆ ನೀವು ಆರಂಭದಲ್ಲೇ ನಮಗೇ ಹೊಡೆತ ಕೊಡಲು ಆರಂಭಿಸಿದ್ದೀರಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಬಕಾರಿ ಸುಂಕ ಏರಿಸದೆ ಯಥಾಸ್ಥಿತಿ ಕಾಪಾಡಿ ಎಂದು ಸಿಎಂ ಮತ್ತು ಸಂಬಂಧಿತ ಸಚಿವರಿಗೆ ಮುಂದಿನ ವಾರ ಮನವಿ ನೀಡಲಾಗುವುದು. ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೇರೆ ಜನಾಂಗಕ್ಕೆ ಕೊಟ್ಟ ಹಾಗೆ ನಮಗೂ ನಿಗಮ ಕೊಡಿ ಎಂಬ ಬೇಡಿಕೆಯೂ ಇದೆ. ಎಲ್ಲ ಜಾತಿಗೂ ನಿಗಮ ಕೊಟ್ಟಿದ್ದೀರಿ, ನಮ್ಮಲ್ಲಿ ಜಾತಿ ಭೇದ ಭಾವ ಇಲ್ಲ. ನಮಗೆ ಯಾಕೆ ನಿಗಮ ಮಾಡಬಾರದು? ನಮಗೆ ನಮ್ಮದೇ ಆದ ನಿಗಮ ಕೊಡಿ ಎಂದೂ ಅವರು ಆಗ್ರಹಿಸಿದ್ದಾರೆ. ನಮ್ಮ ಮಕ್ಕಳಿಗೆ ಉಚಿತ ಶಿಕ್ಷಣ, ನಮಗೆ ಉಚಿತ ಚಿಕಿತ್ಸೆ ಕೊಡಬೇಕು ಎಂದೂ ಅವರು ಹೇಳಿದ್ದಾರೆ.
ನಾವು ಯಾರಿಗೂ ಕುಡಿಯಿರಿ ಎಂದು ಪ್ರಚೋದನೆ ಮಾಡುವುದಿಲ್ಲ. 'ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ' ಎಂಬುದು ನಮ್ಮ ಸ್ಲೋಗನ್ ಆಗಿದ್ದು, ದುಡಿದಿದ್ದರಲ್ಲಿ ಸ್ವಲ್ಪವಷ್ಟೇ ಕುಡಿದು ಮನೆಯವರೊಂದಿಗೆ ಆರಾಮಾಗಿರಿ ಎಂಬುದು ನಮ್ಮ ಕಿವಿಮಾತು ಎಂದೂ ವೆಂಕಟೇಶಗೌಡ ಹೇಳಿದ್ದಾರೆ.