

ಬೆಂಗಳೂರು: ಶುಲ್ಕ ಪಾವತಿಸಲು ಸಾಧ್ಯವಾಗದೆ ಕಷ್ಟಪಟ್ಟು ಪಾರ್ಟ್ ಟೈಂ ಕೆಲಸ ಮಾಡಿಕೊಂಡು ಓದಿದ ವಿದ್ಯಾರ್ಥಿನಿಯೊಬ್ಬರು ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 2 ಚಿನ್ನದ ಪದಕ ಮುಡಿಗೇರಿಸಿಕೊಳ್ಳಲಿದ್ದಾರೆ.
ಬನಶಂಕರಿ 2ನೇ ಹಂತದಲ್ಲಿರುವ ಶ್ರೀಕೃಷ್ಣ ಕಾಲೇಜಿನ ಎಂಬಿಎ ಪದವೀಧರೆ ಪವಿತ್ರ ಎ. ಚಿನ್ನದ ಪದಕ ಸ್ವೀಕರಿಸಲಿರುವ ವಿದ್ಯಾರ್ಥಿನಿ. ಜು.10ರ ಬೆಳಗ್ಗೆ 11 ಗಂಟೆಗೆ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯದ 2ನೇ ವಾರ್ಷಿಕ ಘಟಿಕೋತ್ಸವ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿ ಕುಲಪತಿ ಪ್ರೊ. ಲಿಂಗರಾಜು ಗಾಂಧಿ ಈ ಮಾಹಿತಿ ನೀಡಿದರು.
ಪವಿತ್ರ ತಂದೆ-ತಾಯಿ ಇಬ್ಬರೂ ಟೈಲರಿಂಗ್ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಬಡತನದಲ್ಲಿರುವ ಪವಿತ್ರಗೆ ಎಂಬಿಎ ಕೊನೆಯ ಸೆಮಿಸ್ಟರ್‌ನಲ್ಲಿ ಶುಲ್ಕ ಪಾವತಿಸಲು ಸಾಧ್ಯವಾಗದ್ದರಿಂದ ಖಾಸಗಿ ಸಂಸ್ಥೆಯೊಂದರಲ್ಲಿ ಪಾರ್ಟ್ ಟೈಂ ಕೆಲಸಕ್ಕೆ ಸೇರಿಕೊಂಡು ಪದವಿ ಪೂರ್ಣಗೊಳಿಸಿದ್ದಾರೆ.
ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಪವಿತ್ರ, ಚಿನ್ನದ ಪದಕ ನಿರೀಕ್ಷೆ ಮಾಡಿರಲಿಲ್ಲ. ಪಾಲಕರು ಮತ್ತು ಪ್ರಾಧ್ಯಾಪಕರ ಪ್ರೋತ್ಸಾಹದಿಂದ ಪರೀಕ್ಷೆ ಚೆನ್ನಾಗಿ ಮಾಡಿದ್ದೆ. ಚಿನ್ನದ ಪದಕ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ, ಐಎಎಸ್ ಅಧಿಕಾರಿ ಆಗಬೇಕೆಂಬ ಗುರಿ ಇದೆ ಎಂದರು.