More

    ರಾಜಧಾನಿ ಬೆಂಗಳೂರಿನಲ್ಲಿ ಏರದ ಮತ ಪ್ರಮಾಣ

    ವಿಶ್ಲೇಷಣೆ: ಆರ್​​.ತುಳಸಿಕುಮಾರ್​

    ಬೆಂಗಳೂರು: ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಕೈಗೊಂಡಿದ್ದ ಮತ ಜಾಗೃತಿ ಹೊರತಾಗಿಯೂ ಶುಕ್ರವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜಧಾನಿಯಲ್ಲಿ ಮತ ಪ್ರಮಾಣ ಏರಿಕೆ ಕಂಡುಬರಲಿಲ್ಲ. ಬದಲಾಗಿ ಹಿಂದಿನಷ್ಟೇ ಮತದಾನವಾಗಿದ್ದು, ನಗರ ನಿವಾಸಿಗಳು ಮತಗಟ್ಟೆಗಳಿಗೆ ಬರುವುದಿಲ್ಲ ಎಂಬ ಅಪವಾದ ಎಂದಿನಂತೆ ಮುಂದುವರಿದಿದೆ.

    ಬೆಂಗಳೂರು ಉತ್ತರ, ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ಸರಾಸರಿ ಶೇ. 53.49ರಷ್ಟಾಗಿದೆ. ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಒಳಪಟ್ಟಿರುವ ಪಾಲಿಕೆಯ ಪ್ರದೇಶಗಳ ನಾಲ್ಕು ವಿಧಾನಸಭಾ ಕ್ಷೇತ್ರದ ಮತದಾನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡರೆ, ಬಿಬಿಎಂಪಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿನ ಸರಾಸರಿ ಮತದಾನ ಶೇ.54. ಹಿಂದಿನ ಚುನಾವಣೆಯಲ್ಲೂ ಇಷ್ಟೇ ಪ್ರಮಾಣದ ಮತ ಚಲಾವಣೆಯಾಗಿತ್ತು.

    ಮತದಾನಕ್ಕೆ ಮುನ್ನ ಎರಡು ದಿನಗಳ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್, ಈ ಬಾರಿ ವ್ಯಾಪಕ ಪ್ರಮಾಣದಲ್ಲಿ ಚುನಾವಣಾ ಜನಜಾಗೃತಿ ಕೈಗೊಂಡಿರುವುದರಿಂದ ಮತ ಚಲಾವಣೆ ಹೆಚ್ಚಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಶೇ.65 ಮತ ಹೆಚ್ಚಳವಾಗುವ ಗುರಿ ಹೊಂದಲಾಗಿದೆ ಎಂದಿದ್ದರು. ಆದರೆ, ಎರಡು ತಿಂಗಳ ಹಿಂದೆ ಪಾಲಿಕೆಯು ಶೇ.75 ಗುರಿ ಇಟ್ಟುಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ಪ್ರತೀ ವಿಧಾನಸಭಾ ಕ್ಷೇತ್ರವಾರು ಕೈಗೊಂಡಿತ್ತು. ಇದಕ್ಕಾಗಿ ಐವರು ಚುನಾವಣಾ ರಾಯಭಾರಿಗಳನ್ನಾಗಿ ಬಳಸಿಕೊಳ್ಳಲಾಗಿತ್ತು. ನಗರದ ಕಾಲೇಜುಗಳು, ವಾಣಿಜ್ಯ ಸಂಘಟನೆಗಳು, ಐಟಿ-ಬಿಟಿ ಕಂಪನಿಗಳಿಗೆ ತೆರಳಿ ಅಲ್ಲಿನ ಮುಖ್ಯಸ್ಥರೊಂದಿಗೆ ಸಂವಾದ ನಡೆಸಿ ಮತ ಜಾಗೃತಿ ಮೂಡಿಸಲಾಗಿತ್ತು. ಆದರೂ, ನಿರೀಕ್ಷಿತ ಪ್ರಮಾಣದ ಮತದಾನ ಆಗಿರುವುದು ಈ ಬಾರಿಯೂ ಬೆಂಗಳೂರಿಗರ ಒಳಮನಸ್ಸು ಒಗಟಾಗಿಯೇ ಉಳಿಯುವಂತಾಗಿದೆ.

    ಕಡಿಮೆ ಮತದಾನಕ್ಕೆ ನಾನಾ ಕಾರಣ?:

    ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಲು ಹಲವು ಕಾರಣಗಳಿವೆ. ಇವುಗಳು ಪ್ರತೀ ಚುನಾವಣೆ ನಡೆದಾಗಲೂ ಚರ್ಚೆಗೆ ಬರುತ್ತದೆಯಾದರೂ, ನಂತರದಲ್ಲಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಗಂಭೀರ ಯತ್ನ ಮಾಡದಿರುವುದು ಮತ ಹೆಚ್ಚಳವಾಗದಿರಲು ಮುಖ್ಯ ಕಾರಣ ಎಂಬುದು ಹಲವು ವಾದವಾಗಿದೆ. ಮುಖ್ಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡಲಾಗಿದೆ ಎಂಬ ಆಕ್ಷೇಪ ಈ ಬಾರಿ ಎಲ್ಲೂ ವರದಿಯಾಗಿಲ್ಲ. ಒಂದೆರಡು ಕಡೆ ಆಕ್ಷೇಪ ಕೇಳಿಬಂದರೂ, ಮತದಾರರ ಯಾದಿ ಸಮರ್ಪಕವಾಗಿತ್ತು. ಮತದಾನದ ದಿನದಂದು ತಪ್ಪದೇ ಮತ ಚಲಾಯಿಸುವಂತೆ ಹೆಚ್ಚಿನ ಸಂಖ್ಯೆ ಮತದಾರರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನಿಸಲಾಗಿತ್ತು. ಜತೆಗೆ 15 ಲಕ್ಷ ಮನೆಗಳಿಗೆ ಸ್ಟಿಕ್ಕರ್‌ಗಳನ್ನು ಅಂಟಿಸಿ ಮತ ಹಾಕುವಂತೆ ವಿನಂತಿಸಿದ್ದ ಕೆಲಸವನ್ನೂ ಪಾಲಿಕೆ ಮಾಡಿತ್ತು. ದೇಶದಲ್ಲೇ ಅತೀ ಕಡಿಮೆ ಮತದಾನ ಆಗುವ ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರಿನ ಮೂರೂ ಕ್ಷೇತ್ರಗಳು ಇತ್ತು. ಇದರಿಂದಾಗಿಯೇ ಆಯೋಗ ಈ ಬಾರಿ ರಾಜಧಾನಿಯಲ್ಲಿ ಮತ ಪ್ರಮಾಣವನ್ನು ಶೇ.60 ದಾಟಿಸುವ ಗುರಿಗೆ ಮತದಾರರು ಸ್ಪಂದಿಸಿದಂತಿಲ್ಲ.

    ನಗರ ಬಿಟ್ಟು ತವರು ಜಿಲ್ಲೆಗೆ ತೆರಳಿದರು:
    ಬೆಂಗಳೂರಿನ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹಲವು ಸಾವಿರ ಸಂಖ್ಯೆಯಲ್ಲಿ ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿದೆ. ಇದರ ಒಟ್ಟು ಸಂಖ್ಯೆ 5-7 ಲಕ್ಷ ದಷ್ಟಿದೆ ಎಂದು ಅಂದಾಜಿಸಲಾಗಿದೆ. ಈ ಬಾರಿ ಮೃತರ ಜತೆಗೆ ಎರಡೆರಡು ಕಡೆ ಹೆಸರಿರುವವರ ಯಾದಿಯನ್ನು ಕೈಬಿಡುವ ಪ್ರಕ್ರಿಯೆ ಕಳೆದ ಜನವರಿಯಲ್ಲಿ ಆರಂಭವಾಗಿತ್ತು. ಆದರೆ, ಮಾರ್ಚ್‌ನಲ್ಲಿ ಇದ್ದಕ್ಕಿದ್ದಂತೆ ಆ ಪ್ರಕ್ರಿಯೆ ಅಲ್ಲಿಗೆ ನಿಲ್ಲಿಸಲಾಯಿತು. ಶುಕ್ರವಾರ ನಡೆದ ಮತದಾನ ವೇಳೆ ಇಂತಹವರು ನಗರದಲ್ಲಿ ಮತ ಹಾಕದೆ ತಮ್ಮ ತವರು ಜಿಲ್ಲೆಗಳಿಗೆ ತೆರಳಿ ಮತ ಚಲಾಯಿಸಿದ್ದಾರೆ. ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಹೆಚ್ಚಿನ ಮಂದಿ ತೆರಳಿ ಮತ ಹಾಕಿದ್ದಾರೆ. ಜತೆಗೆ ಕಳೆದ ವಾರ ತಮಿಳನಾಡುನಲ್ಲಿ ನಡೆದ ಚುನಾವಣೆಗೆ ಬೆಂಗಳೂರಿನಿಂದ ಸುಮಾರು 50 ಸಾವಿರ ಮಂದಿ ತೆರಳಿದ್ದರೆಂಬ ಮಾಹಿತಿ ಇದೆ. ಈ ಸಂಖ್ಯೆಯನ್ನು ಹೊರತುಪಡಿಸಿದರೆ ನಗರದ ಸರಾಸರಿ ಮತದಾನ ಶೇ.53 ಬದಲು ಶೇ. 60ರ ಆಸುಪಾಸಿನಲ್ಲಿ ನಿಲ್ಲಲಿದೆ ಎಂಬ ವಾದವನ್ನು ಕೆಲವರು ಮುಂದಿಟ್ಟಿದ್ದಾರೆ.

    ಕಡಿಮೆ ಕೆಲ ಮತದಾನಕ್ಕೆ ಕಾರಣಗಳು?:
    * ಸಿಟಿ ಜನರಲ್ಲಿ ಮತದಾನ ಕುರಿತು ಸಿನಿಕತನ ಇರುವುದು.
    * ಯಾರು ಬಂದರೂ ನಮಗೆ ಒಳಿತಾಗದು ಎಂಬ ಬೇಜವಾಬ್ದಾರಿ.
    * ವಾರಾಂತ್ಯ ರಜೆಯಿಂದಾಗಿ ತವರು ಜಿಲ್ಲೆ, ರಜೆ ಕಳೆಯಲು ತೆರಳಿದ ಜನ.
    * ಬಿಸಿಲಿನ ಕಾರಣ ಕೆಲ ಹಿರಿಯರು ಸೇರಿ ಮನೆಯಲ್ಲೇ ಉಳಿದರು.
    * ತಮ್ಮ ಬಡಾವಣೆಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಸಿಲ್ಲವೆಂದು ಮತದಾನದಿಂದ ದೂರ ಉಳಿದಿದ್ದು.
    * ಹೊರ ರಾಜ್ಯ, ಜಿಲ್ಲೆಗಳಿಂದ ಬಂದು ನೆಲೆಸಿರುವವರಲ್ಲಿ ಕೆಲವರು ಮತ ಹಾಕದಿರುವುದು.
    * ಅಪಾರ್ಟ್‌ಮೆಂಟ್ ವಾಸಿಗಳಲ್ಲಿ ಕೆಲವರು ಸತತವಾಗಿ ಮತದಾನದಿಂದ ದೂರು ಉಳಿದಿರುವುದು.
    * ಮತದಾರರನ್ನು ಮನವೋಲಿಸಿ ಮತಗಟ್ಟೆಗೆ ಕರೆತರುವಲ್ಲಿ ಪಕ್ಷಗಳ ಕಾರ್ಯಕರ್ತರ ವೈಲ್ಯ.

    ನಗರದಲ್ಲಿ ಕ್ಷೇತ್ರವಾರು ಮತದಾನದ ವಿವರ:
    ಬೆಂಗಳೂರು ಉತ್ತರ: ಶೇ. 54.42
    ಬೆಂಗಳೂರು ದಕ್ಷಿಣ: ಶೇ. 53.15
    ಬೆಂಗಳೂರು ಕೇಂದ್ರ: ಶೇ. 52.81

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts