More

    149 ದಿನಗಳ ಬಳಿಕ ರಾಜಧಾನಿಯಲ್ಲಿ ಮೊದಲ ಮಳೆ ಪುಳಕ

    ಬೆಂಗಳೂರು: ಐದೂವರೆ ತಿಂಗಳಿನಿಂದ ಒಂದು ಹನಿಯೂ ಮಳೆ ಕಾಣದಿದ್ದ ಬೆಂಗಳೂರು ನಗರದಲ್ಲಿ ಗುರುವಾರ ಈ ವರ್ಷದ ಮೊದಲ ಮಳೆ ಜನರಲ್ಲಿ ಹರುಷ ತಂದಿತು. ರಣಬಿಸಿಲಿನಿಂದ ಕೆಂಗೆಟ್ಟಿದ್ದ ರಾಜಧಾನಿಗರು ಬಿಸಿಲಿನ ಧಗೆಗೆ ಬೆದರಿ ಬೆವರು ಹರಿಸುತ್ತಿರುವ ಸಮಯದಲ್ಲೇ ಸಂಜೆಯ ವರ್ಷಾಧಾರೆ ನಗರದ ಬಹುತೇಕ ಕಡೆಗಳಲ್ಲಿ ಆಹ್ಲಾದಕರ ವಾತಾವರಣ ಮೂಡಿಸಿತು.

    ನಗರದ ಎಲ್ಲೆಡೆಯೂ ಮಳೆಯಾಗದಿದ್ದರೂ, ಹೆಚ್ಚಿನ ಬಡಾವಣೆಗಳಲ್ಲಿ ಸಾಧಾರಣ ಪ್ರಮಾಣದ ಮಳೆಯಾಗಿದೆ. ಸಂಜೆ 6.45ರ ಸುಮಾರಿಗೆ ನಗರದ ಕೇಂದ್ರ, ದಕ್ಷಿಣ ಹಾಗೂ ಪೂರ್ವ ಭಾಗದಲ್ಲಿ ಮಳೆ ಸುರಿದಿದೆ. ಅರ್ಧಗಂಟೆ ಅಂತರದಲ್ಲಿ 2-3 ಬಾರಿ ವರ್ಷಾಧಾರೆಯಿಂದಾಗಿ ತಂಪನೆಯ ವಾತಾವರಣ ಕಂಡಿತು. ಇದರಿಂದ ರಾತ್ರಿಯ ಉಷ್ಣಾಂಶದಲ್ಲಿ ಹೊಂದಿಷ್ಟು ಇಳಿಕೆಯಾಗಿ ಧಗೆ ಕಡಿಮೆಯಾದ ಅನುಭವ ಉಂಟಾಯಿತು.

    ಮಳೆಯ ಜತೆಗೆ ಗುಡುಗು-ಮಿಂಚಿನ ಆರ್ಭಟವೂ ಇತ್ತು. ಹಲವೆಡೆ ಗಾಳಿಯ ವೇಗ ಹೆಚ್ಚಿದ್ದರಿಂದ ವರ್ಷಾಧಾರೆ ಕಡಿಮೆಯಾಯಿತು. ಎಚ್‌ಎಸ್‌ಆರ್ ಲೇಔಟ್ ಸಹಿತ ಕೆಲ ಬಡಾವಣೆಗಳಲ್ಲಿ ಮರಗಳ ಟೊಂಗೆಗಳು ಧರೆಗುರುಳಿದವು. ವಿಜಯನಗರದ ಟಿಟಿಎಂಸಿ ಬಳಿ ವಿದ್ಯುತ್ ಕಂಬವೊಂದು ಸ್ಕೂಟರ್ ಮೇಲೆ ಬಿದ್ದ ಘಟನೆ ನಡೆದಿದೆ. ಮೈಸೂರು ರಸ್ತೆಯ ಬ್ಯಾಟರಾಯನಪುರ ಬಳಿ ಪೆಟ್ಟಿ ಅಂಗಡಿಯ ಮೇಲಿದ್ದ ಶೀಟ್ ಹಾರಿ ವಾಹನಗಳ ಮೇಲೆ ಬಿದ್ದಿತಾದರೂ ಯಾವುದೇ ಅವಘಡ ಸಂಭವಿಸಲಿಲ್ಲ. ಇದರ ಹೊರತಾಗಿಯೂ ಕೆ.ಆರ್.ಮಾರುಕಟ್ಟೆ, ಚಾಮರಾಜಪೇಟೆ, ಸಂಪಂಗಿರಾಮನಗರ, ವಿದ್ಯಾಪೀಠ, ಮಾರುತಿಮಂದಿರ, ರಾಜಾಜಿನಗರ, ಹಂಪಿನಗರ, ಆರ್.ಆರ್.ನಗರ, ಮಾರತ್‌ಹಳ್ಳಿ, ಎಚ್‌ಎಎಲ್ ವಿಮಾನನಿಲ್ದಾಣ, ಹೂಡಿ, ಹೆಬ್ಬಾಳ, ಯಲಹಂಕದಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ.

    ಗಾಳಿ ಬೀಸುವಿಕೆ ಹೆಚ್ಚಿದ್ದ ಕಾರಣ ಮಳೆ ಬಿದ್ದರೂ, ನೀರು ಹರಿದುಹೋಗುವಷ್ಟು ಪ್ರಮಾಣದಲ್ಲಿ ಇರಲಿಲ್ಲ ಎಂದು ಯಲಹಂಕದಲ್ಲಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂ) ಪ್ರತಿನಿಧಿಗಳು ‘ವಿಜಯವಾಣಿ’ಗೆ ತಿಳಿಸಿದರು.

    ವಾರಾಂತ್ಯದವರೆಗೂ ಮಳೆ:

    ನಗರದಲ್ಲಿ ಈ ವಾರಾಂತ್ಯದವರೆಗೂ ಗುಡುಗು-ಮಿಂಚು ಸಮೇತ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಹಾನಗರದೆಲ್ಲೆಡೆಯೂ ವರ್ಷಾಧಾರೆ ಆಗದಿದ್ದರೂ, ಅಲ್ಲಲ್ಲಿ ಮಳೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನ.21ರಂದು ಕಡೆಯ ಮಳೆ ಆಗಿತ್ತು:
    ನಗರದಲ್ಲಿ ಕಳೆದ ವರ್ಷ ನ.21ರಂದು ಬಿದ್ದ ಮಳೆಯೇ ಕೊನೆಯದು. ಆ ಬಳಿಕ ಐದೂವರೆ ತಿಂಗಳು (149 ದಿನ) ಮಳೆಯೇ ಆಗಿರಲಿಲ್ಲ. ಕಳೆದ ವಾರಾಂತ್ಯದ ಕೆಂಗೇರಿ ಬಳಿ ತುಂತುರು ಮಳೆಯಾಗಿದ್ದರೂ, ಮಳೆ ಮಾಪನದಲ್ಲಿ ದಾಖಲಾಗಿರಲಿಲ್ಲ. ಹೀಗಾಗಿ ಗುರುವಾರ ಬಿದ್ದ ಮಳೆಯೇ ಈ ವರ್ಷದ ಮೊದಲ ವರ್ಷಾಧಾರೆಯಾಗಿದೆ.

    ಎಲ್ಲೆಲ್ಲಿ ಎಷ್ಟು ಮಳೆ (ಮಿ.ಮೀ.ಗಳಲ್ಲಿ):

    ವಿದ್ಯಾಪೀಠ – 20
    ಮಾರುತಿಮಂದಿರ – 12
    ಹಂಪಿನಗರ – 11
    ಬಿದರಹಳ್ಳಿ – 15
    ಆವಲಹಳ್ಳಿ – 12
    ರಾಜಾಜಿನಗರ – 7
    ನಾಯಂಡಹಳ್ಳಿ – 7
    ಎಚ್‌ಎಸ್‌ಆರ್ ಲೇಔಟ್ – 5

    10 ಕಡೆ ಮರ, ಕೊಂಬೆ ಧರೆಗೆ:

    ಮಳೆಯಿಂದಾಗಿ ಪಾಲಿಕೆ ವ್ಯಾಪ್ತಿಯಲ್ಲಿ 10 ಕಡೆಗಳಲ್ಲಿ ಮರ, ಕೊಂಬೆಗಳು ಧರೆಗುರುಳಿವೆ. ಶ್ರೀನಗರದಲ್ಲಿ ತೆಂಗಿನ ಮರವೊಂದು ಮನೆ ಮೇಲೆ ಬಿದ್ದಿದೆ. ಇದರ ಹೊರತಾಗಿ ಪದ್ಮನಾಭನಗರ, ಬನಶಂಕರಿ, ವಿಜಯನಗರ, ಶಂಕರಪುರ ಬಳಿ ಮರದ ಕೊಂಬೆಗಳು ನೆಲಕ್ಕರುಳಿವೆ. ಸಣ್ಣ ಕೊಂಬೆಗಳು ಕೂಡ ಕೆಲ ಮನೆಗಳ ಮೇಲೆ ಬಿದ್ದಿವೆಯಾದರೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts