More

    ಮದುವೆ ವಾರ್ಷಿಕೋತ್ಸವಕ್ಕಾಗಿ ಪತ್ನಿಯನ್ನು ಊರಿನಿಂದ ಕರೆಸಿಕೊಂಡ; ಹೆಂಡತಿ ಬರುವಷ್ಟರಲ್ಲಿ ಹೆಣವಾದ ಗಂಡ!

    ಬೆಂಗಳೂರು: ಮದುವೆ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಪತ್ನಿಯನ್ನು ಮನೆಗೆ ಕರೆಸಿಕೊಂಡ ಗಂಡ, ಆಕೆ ಬರುವಷ್ಟರಲ್ಲಿ ಹೆಣವಾಗಿ ಹೋದ ಪ್ರಕರಣವೊಂದು ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ಪೀಣ್ಯದ ಚನ್ನನಾಯಕನಪಾಳ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸಿರುವ ಪೀಣ್ಯ ಠಾಣೆ ಪೊಲೀಸರು ಸತೀಶ್, ಪುಟ್ಟ ಹಾಗೂ ದಯಾನಂದ್ ಎಂಬವರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಜುಲೈ 2ರಂದು ತಮಿಳುನಾಡು ಮೂಲದ ಆನಂದ್ ಎಂಬಾತನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು.

    ಚನ್ನನಾಯಕನಪಾಳ್ಯದ ನಿರ್ಜನ ಪ್ರದೇಶದಲ್ಲಿ ಜು.2ರಂದು ಅಪರಿಚಿತ ವ್ಯಕ್ತಿಯ ಶವ ಕಂಡುಬಂದಿತ್ತು. ಆರೋಪಿಗಳು ಬೇರೆಡೆ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿತ್ತು. ಕೃತ್ಯಕ್ಕೂ ಮುನ್ನ ಸ್ಥಳದಲ್ಲಿ ಮದ್ಯಪಾನ ಮಾಡಿರುವುದು, ನಂತರ ಕಸದ ರಾಶಿಯ ಮೇಲೆ ಶವ ಇರಿಸಿ ಬೆಂಕಿ ಹಚ್ಚಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಒಂದು ವಾರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

    ಇದನ್ನೂ ಓದಿ: ಇಂಜಿನಿಯರ್ ಮನೆಯಲ್ಲಿ ಇವಿಎಂ ಕಂಟ್ರೋಲ್ ಯುನಿಟ್​ಗಳು ಪತ್ತೆ!

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಒಂದು ವಿಶೇಷ ತಂಡ ರಚಿಸಿದ್ದರು. ಈ ತಂಡವು ಪೊಲೀಸ್ ಪ್ರಕಟಣೆ ನೀಡಿ ಮೃತನ ಗುರುತು ಪತ್ತೆ ಮಾಡಿ ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿಗಳನ್ನು ವಿಚಾರಣೆ ನಡೆಸಿದ್ದಾಗ ಕಾರ್ಯಕ್ರಮಗಳಲ್ಲಿ ಅಡುಗೆ ಮಾಡುವ ಕೆಲಸದ ಗುತ್ತಿಗೆ ಪಡೆಯುವ ವಿಚಾರದಲ್ಲಿ ಮೃತ ಆನಂದ್‌ಗೂ ಆರೋಪಿಗಳ ನಡುವೆ ಜಗಳವಾಗಿದ್ದು, ಈತನಿಂದ ತಮ್ಮ ವ್ಯವಹಾರಕ್ಕೆ ಧಕ್ಕೆಯಾಗುತ್ತದೆ ಎಂದು ಸಂಚು ರೂಪಿಸಿ ಕೊಲೆ ಮಾಡಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವೃತ್ತಿ ವೈಷಮ್ಯವೇ ಹತ್ಯೆಗೆ ಕಾರಣ: ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದ ಆನಂದ್, ಆರೋಪಿ ಸತೀಶ್ ಬಳಿ ಕಳೆದ ಎಂಟು ವರ್ಷಗಳಿಂದ ಅಡುಗೆ ಕೆಲಸ ಮಾಡಿಕೊಂಡಿದ್ದ. ಕಳೆದ ಐದಾರು ತಿಂಗಳಿಂದ ಆನಂದ್ ಸ್ವಂತವಾಗಿ ಅಡುಗೆ ಕೇಟರಿಂಗ್ ವ್ಯವಹಾರ ಆರಂಭಿಸಿದ್ದ. ಇದರಿಂದ ಆರೋಪಿ ಸತೀಶ್ ನಡೆಸುತ್ತಿದ್ದ ಕೇಟರಿಂಗ್ ವ್ಯವಹಾರ ನಷ್ಟವಾಗಿತ್ತು. ಆನಂದ್ ಬೆಳವಣಿಗೆ ಸಹಿಸದೆ ಕತ್ತಿ ಮಸೆಯುತ್ತಿದ್ದ ಸತೀಶ್ ಕಳೆದ ಮೂರು ತಿಂಗಳಿಂದ ಕೊಲೆಗೆ ಸಂಚು ರೂಪಿಸಿದ್ದ. ಇದಕ್ಕಾಗಿ ಜತೆಯಲ್ಲೇ ಕೆಲಸ ಮಾಡುತ್ತಿದ್ದ ಕೆಲಸಗಾರರನ್ನು ಸೇರಿಸಿಕೊಂಡು ಕೊಲೆ ಮಾಡಲಾಗಿತ್ತು.

    ಇದನ್ನೂ ಓದಿ: ‘ಮೆದುಳು ತಿನ್ನುವ ಅಮೀಬಾ’ ಹತ್ತನೇ ತರಗತಿ ವಿದ್ಯಾರ್ಥಿಯ ಜೀವ ತೆಗೆಯಿತು!

    ಕಳೆದ ಶನಿವಾರ ಪಾರ್ಟಿ ಮಾಡೋಣ ಬಾ ಎಂದು ಚನ್ನರಾಯನಪಾಳ್ಯ ಬಳಿ ಆನಂದ್​ನನ್ನು ಕರೆಸಿಕೊಂಡಿದ್ದಾರೆ. ಒಟ್ಟಿಗೆ ಪಾರ್ಟಿ ಮಾಡಿದ ಬಳಿಕ ಪೂರ್ವ ಸಂಚಿನಂತೆ ಆನಂದ್‌ನನ್ನು ಕೊಲೆ ಮಾಡಿದ್ದಾರೆ. ಬಳಿಕ ಗುರುತು ಸಿಗದಿರಲು ಶವದ ಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿ ಪರಾರಿಯಾಗಿದ್ದರು.

    ಮದುವೆ ವಾರ್ಷಿಕೋತ್ಸವದಂದೇ ಕೊಲೆ: ಜುಲೈ 2ರಂದು ಮದುವೆ ವಾರ್ಷಿಕೋತ್ಸವ ಇರುವುದರಿಂದ ತಮಿಳುನಾಡಿನಲ್ಲಿ ನೆಲೆಸಿದ್ದ ಹೆಂಡತಿಗೆ ಬೆಂಗಳೂರಿಗೆ ಬರುವಂತೆ ಆನಂದ್ ಹೇಳಿದ್ದ. ಆನಂದ್‌ನ ವಿವಾಹ ವಾರ್ಷಿಕೋತ್ಸವ ಇರುವುದನ್ನು ಅರಿತ ಆರೋಪಿಗಳು ಶನಿವಾರ ರಾತ್ರಿ ಪಾರ್ಟಿ ಮಾಡಲು ಆಹ್ವಾನಿಸಿ ಆತನನ್ನು ಹತ್ಯೆ ಮಾಡಿದ್ದರು.

    ಗಂಡನೊಂದಿಗೆ ವಾರ್ಷಿಕೋತ್ಸವ ಆಚರಿಸಲು ಮಾರನೇ ದಿನ ಬೆಂಗಳೂರಿಗೆ ಬಂದ ಪತ್ನಿಗೆ ಶವದ ರೂಪದಲ್ಲಿ ಆತ ಪತ್ತೆಯಾಗಿದ್ದ. ಕೊಲೆ ಪ್ರಕರಣ ಆರೋಪದಡಿ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಾಮಕುಮಾರ ಸ್ವಾಮೀಜಿಯ ಭೀಕರ ಕೊಲೆ; ತಲೆ ಇಬ್ಭಾಗ, ಕೈ-ಕಾಲುಗಳೂ ಕಟ್, ಶವ 9 ತುಂಡು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts