1/4 ಕೆಜಿ ಆಲೂಗಡ್ಡೆ ಕಾಣೆ... ಕುಡುಕನ ಕಥೆ-ವ್ಯಥೆ ಕೇಳಿ ಪೊಲೀಸರೇ ಕಂಗಾಲು! | Drunk

drunk
Published on

ಹರಿದೊಯಿ: ಕುಡುಕರ ಪಾಡೇ ಒಂದು ರೀತಿ ಮಜಾ ಲೋಕ. ಮದ್ಯ ಕುಡಿಯುವ ಮೊದಲು ಬಹಳ ಸಭ್ಯ, ಸಜ್ಜನ, ಸರಳ ವ್ಯಕ್ತಿ ಎಂದು ಹೇಳಿಕೊಳ್ಳುವವರು, ಕಂಠಪೂರ್ತಿ ಇಳಿಸಿದ ಮೇಲೆ ತಮ್ಮ ಸಭ್ಯತೆ ಇರಲಿ, ತಾವ್ಯಾರು? ಎಲ್ಲಿದ್ದೇವೆ ಎಂಬುದನ್ನೇ ಮರೆತು ಹೋಗಿರುತ್ತಾರೆ. ಅಂತಹ ಅನೇಕ ಘಟನೆಗಳ ನಿದರ್ಶನಗಳು ಇಂದು ನಮ್ಮ-ನಿಮ್ಮ ಮುಂದಿವೆ. ಇದಕ್ಕೆ ಸಾಮಾಜಿಕ ಜಾಲತಾಣಗಳೇ ಬಲವಾದ ಸಾಕ್ಷಿ ಎಂದೂ ಹೇಳಬಹುದು. ಕಾರಣ, ಕುಡುಕರ (Drunk) ವಿಡಿಯೋಗಳು ಹೆಚ್ಚಾಗಿ ಕಾಣಸಿಗುವುದೇ ಇಂತಹ ಜಾಲತಾಣಗಳಲ್ಲಿ.

ಕುಡುಕರ ವಿಚಿತ್ರ, ಅಚ್ಚರಿ ನಡೆಯ ಒಂದಷ್ಟು ವಿಡಿಯೋಗಳ ಪೈಕಿ ಇಲ್ಲೊಂದು ವಿಡಿಯೋ ಮಾತ್ರ ಪೊಲೀಸ್​ ಠಾಣೆ ಮೆಟ್ಟಿಲೇರಿರುವುದು ಸದ್ಯ ನೆಟ್ಟಿಗರ ಹುಬ್ಬೇರಿಸಿದೆ. ಹೆಂಡತಿಯನ್ನು ಬಡಿದ ಕಾರಣಕ್ಕೋ, ಅನ್ಯರಿಗೆ ಥಳಿಸಿದ್ದಕ್ಕೋ ಪೊಲೀಸರ ಅತಿಥಿಯಾಗುವುದು ಸಾಮಾನ್ಯ ವಿಷಯ. ಆದರೆ, ಈ ಭೂಪ, 1/4 ಕೆಜಿ ಆಲೂಗಡ್ಡೆಗಾಗಿ ಪೊಲೀಸರನ್ನೇ ತನ್ನ ಮನೆಯ ಬಳಿ ಕರೆಸಿಕೊಂಡ ವಿಚಿತ್ರ ಘಟನೆ ಹರ್ದೋಯಿಯ ಮನ್ನಾ ಪೂರ್ವಾದಲ್ಲಿ ವರದಿಯಾಗಿದೆ.

1/4 ಕೆಜಿ ಆಲೂಗಡ್ಡೆ ಕಥೆ

ಕುಡಿದ ಅಮಲಿನಲ್ಲಿ ತಾನು ಮನೆಗೆ ತಂದಿದ್ದ 1/4 ಕೆಜಿ ಆಲೂಗಡ್ಡೆಯನ್ನು ಅಡುಗೆ ಮಾಡಿ ತಿನ್ನಲೆಂದು ಕೋಣೆಯೊಂದರಲ್ಲಿ ಇರಿಸಿದ್ದ ಈತ, ಕಂಠಪೂರ್ತಿ ಮದ್ಯ ಸೇವಿಸಿ, ನಂತರ ತರಕಾರಿ ಕಡೆ ನೋಡಿದರೆ, ಅಲ್ಲಿ ಆಲೂಗಡ್ಡೆ ನಾಪತ್ತೆಯಾಗಿದೆ. ಇದನ್ನು ಕಂಡು ಗಾಬರಿಯಾದ ಕುಡುಕ, ತಕ್ಷಣವೇ ಪೊಲೀಸ್ ಠಾಣೆಯ ಸಂಖ್ಯೆ 112ಕ್ಕೆ ಕರೆ ಮಾಡಿ, ಖಾಕಿ ಪಡೆಗೆ ದೂರು ನೀಡಿದ್ದಾನೆ. ಆತನ ವಿಚಿತ್ರ ದೂರು ಆಲಿಸಿದ ಪೊಲೀಸರು, ನೇರವಾಗಿ ಕುಡುಕನ ಮನೆಗೇ ಧಾವಿಸಿದ್ದಾರೆ.

ಆಲೂಗಡ್ಡೆ ಕಾಣೆಯಾದ ವ್ಯಥೆ

"ನಾನು ಕುಡಿಯುವ ಮುನ್ನ 1/4 ಕೆಜಿ ಆಲೂಗಡ್ಡೆಯನ್ನು ಟೇಬಲ್​ ಮೇಲಿಟ್ಟಿದ್ದೆ ಸರ್. ಕುಡಿದು, ಊಟ ಮುಗಿಸಿದ ನಂತರ ಅಡುಗೆ ಮಾಡೋಣ ಎಂದು ಸಿಪ್ಪೆ ಬಿಡಿಸಿಟ್ಟಿದ್ದೆ. ಆದರೆ, ವಾಪಾಸ್​ ಬಂದು ನೋಡಿದ್ರೆ, ಅಲ್ಲಿ ಅಲೂಗಡ್ಡೆ ಕಾಣೆಯಾಗಿದೆ. ಇದನ್ನು ಕಳ್ಳತನ ಮಾಡಿದವರು ಯಾರೆಂದು ನೀವು ಪತ್ತೆಹಚ್ಚಬೇಕು ಸರ್​. ದಯವಿಟ್ಟು ತನಿಖೆ ಕೈಗೊಳ್ಳಿ" ಎಂದು ಆತ ಪೊಲೀಸರ ಮುಂದೆ ನಡೆದ ಘಟನೆ ವಿವರಿಸಿದ್ದಾನೆ. ಇದನ್ನು ಆಲಿಸಿದ ಪೊಲೀಸರು, ನಗಲಾರದೆ, ಕೋಪಗೊಳ್ಳದೆ ಕುಡುಕನಿಗೆ ಬುದ್ದಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net