ರೆಡ್​, ಆರೆಂಜ್, ಯೆಲ್ಲೋ... IMD ಕೊಡುವ ಈ ಬಣ್ಣದ ಅಲರ್ಟ್​ಗಳು ಸೂಚಿಸುವುದೇನು? ಇಲ್ಲಿದೆ ಉಪಯುಕ್ತ ಮಾಹಿತಿ

IMD
Published on

ನವದೆಹಲಿ: ದೇಶದ ಯಾವುದೇ ಮೂಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಕಂಡುಬಂದರೆ ಅಥವಾ ವಾಯುಭಾರ ಕುಸಿತದಿಂದ ಉಂಟಾಗುವ ಬಿರುಗಾಳಿ ಸಹಿತ ಮಳೆ, ಕಡಲ ತೀರಗಳಲ್ಲಿ ಬಿರುಸಿನ ವರುಣ ಆರ್ಭಟ ಹೀಗೆ ಪ್ರಕೃತಿ ವಿಕೋಪಗಳ ಮುನ್ಸೂಚನೆಯನ್ನು ಅದರ ಪರಿಣಾಮಕ್ಕೆ ತಕ್ಕಂತೆ ಸೂಚಿಸುವುದು ಭಾರತೀಯ ಹವಾಮಾನ ಇಲಾಖೆ ನೀಡುವ ಬಣ್ಣದ ಎಚ್ಚರಿಕೆ ಸೂಚನೆಗಳು. ಈ ಬಣ್ಣಗಳ ಅಲರ್ಟ್​ ಕಾಲ ಕಾಲಕ್ಕೆ ವಾತಾವರಣ ಹೇಗೆ ಬದಲಾಗಲಿದೆ ಎಂಬುದನ್ನು ನಿಖರವಾಗಿ ತಿಳಿಸುತ್ತದೆ. ಇದರ ಸಹಾಯದಿಂದ ಯಾವ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗಬಹುದು ಎಂಬ ಮುನ್ನೆಚ್ಚರಿಕೆಯನ್ನು ಐಎಂಡಿ (IMD) ಆಯಾ ಜಿಲ್ಲಾಡಳಿತಕ್ಕೆ ರವಾನಿಸುತ್ತದೆ.

ಭಾರತೀಯ ಹವಾಮಾನ ಇಲಾಖೆಯು ಪ್ರತ್ಯೇಕವಾಗಿ ಮಳೆಗಾಲದಲ್ಲಿ ಈ ಬಣ್ಣಗಳನ್ನು ಆಗಾಗ್ಗೆ ಸೂಚಿಸುತ್ತಿರುತ್ತದೆ. ಈ ಕೋಡ್​ಗಳು ಮಳೆ ಬೀಳುವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯ ಗಂಟೆಯಾಗಿ ಕೆಲಸ ಮಾಡುವುದರ ಜತೆಗೆ ಮನೆಯಿಂದ ಹೊರಬರುವ ಮುನ್ನ ತಮ್ಮ ಜೀವದ ಬಗ್ಗೆ ಹೆಚ್ಚು ಜಾಗರೂಕತೆ ವಹಿಸುವುದು ಅಗತ್ಯ ಎಂಬ ಮುನ್ಸೂಚನೆಯನ್ನು ನೀಡುತ್ತದೆ. ಸಾಮಾನ್ಯವಾಗಿ ಹವಾಮಾನ ವರದಿ ನೋಡುವ ಜನರು, ರೆಡ್​ ಅಲರ್ಟ್​, ಯೆಲ್ಲೋ ಅಲರ್ಟ್​ ಎಂಬುದನ್ನು ತಿಳಿಯುತ್ತಾರೆಯೇ ಹೊರತು, ಆ ಬಣ್ಣದ ಹಿಂದಿರುವ ಮೂಲ ಸೂಚನೆ ಏನು ಎಂಬ ಸಂಗತಿ ತಿಳಿಯುವಲ್ಲಿ ವಿಫಲರಾಗುತ್ತಾರೆ. ಅಸಲಿಗೆ ಈ ಕಲರ್​ಗಳು ತಿಳಿಸುವ ಸೂಚನೆ ಏನು? ಎಂಬುದರ ವಿವರ ಹೀಗಿದೆ ನೋಡಿ.

ಬಣ್ಣದ ಕೋಡ್​ ಬಳಕೆ ಏಕೆ?

ಮಳೆಗಾಲದ ಸಮಯದಲ್ಲಿ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರಿಗೆ ಸಹಾಯವಾಗಲಿ ಎಂಬ ಕಾರಣದಿಂದ ಐಎಂಡಿ ಈ ಬಣ್ಣಗಳ ಕೋಡ್ ಅನ್ನು ಬಳಸುತ್ತದೆ.​ ಆಯಾ ಬಣ್ಣದ ಸಂಕೇತಗಳು ಮತ್ತು ಅವು ಸೂಚಿಸುವ ಅಪಾಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಜನರು ಸುರಕ್ಷತೆ ಕಡೆ ನಡೆಯಲಿ ಎಂಬುದು ಇದರ ಮೂಲ ಉದ್ದೇಶ. ಕಲರ್​ ಕೋಡ್​ನಲ್ಲಿ ಕೆಂಪು, ಹಳದಿ, ಕೇಸರಿ ಮತ್ತು ಹಸಿರು ಬಣ್ಣಗಳಿದ್ದು, ಇವು ಅಪಾಯದ ಪ್ರಮಾಣವನ್ನು ನಿಖರವಾಗಿ ವಿವರಿಸುತ್ತದೆ.

ಗ್ರೀನ್​ ಅಲರ್ಟ್​ (ಎಚ್ಚರಿಕೆ ಅಗತ್ಯವಿಲ್ಲ)

ಚದುರಿದ ಮಳೆ ಅಥವಾ ಶುಷ್ಕ ಹವಾಮಾನವನ್ನು ಸೂಚಿಸುವ ಈ ಬಣ್ಣ, ತುಂತುರು ಹನಿ ಬೀಳುವ ಸಾಧ್ಯತೆಯನ್ನು ಒತ್ತಿ ಹೇಳುತ್ತದೆ.

ಯೆಲ್ಲೋ ಅಲರ್ಟ್​ (ಎಚ್ಚರಿಕೆ ವಹಿಸಿ)

ಹಳದಿ ಎಚ್ಚರಿಕೆ ಮಧ್ಯಮ ಮಳೆಯ ಸಾಧ್ಯತೆಯನ್ನು ಸೂಚಿಸುತ್ತದೆ. ಭಾರೀ ಮಳೆಯಲ್ಲದಿದ್ದರೂ ತಗ್ಗು ಪ್ರದೇಶಗಳಲ್ಲಿ ಸ್ಥಳೀಯ ಪ್ರವಾಹವನ್ನು ಉಂಟುಮಾಡಬಹುದು ಅಥವಾ ಸಂಚಾರಕ್ಕೆ ಅಡ್ಡಿಯಾಗಬಹುದು ಎಂಬ ಮುನ್ಸೂಚನೆಯನ್ನು ತಿಳಿಸುತ್ತದೆ.

ಆರೆಂಜ್ ಅಲರ್ಟ್ (ಸಿದ್ಧರಾಗಿರಿ)

ಐಎಂಡಿ 24 ಗಂಟೆಗಳ ಒಳಗೆ 115.6 ಮತ್ತು 204.4 ಮಿಮಿವರೆಗೆ ಭಾರೀ ಮಳೆಯನ್ನು ಮುನ್ಸೂಚನೆ ಇದ್ದಾಗ, ಕಿತ್ತಳೆ ಬಣ್ಣದ ಎಚ್ಚರಿಕೆಯನ್ನು ನೀಡುತ್ತದೆ. ಇದು ರಸ್ತೆಗಳು, ಹೊಳೆ ಮತ್ತು ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಭೀತಿಯನ್ನು ಸೂಚಿಸುತ್ತದೆ. ವಿದ್ಯುತ್ ಕಡಿತ ಮತ್ತು ಭೂಕುಸಿತದ ಸಾಧ್ಯತೆಗಳನ್ನು ಈ ಬಣ್ಣ ಎಚ್ಚರಿಸುತ್ತದೆ.

ರೆಡ್ ಅಲರ್ಟ್ (ಕ್ರಮ ತೆಗೆದುಕೊಳ್ಳಿ)

ಅತ್ಯಂತ ತೀವ್ರವಾದ ವರ್ಗ ಎಂದರೆ ಅದು ರೆಡ್ ಅಲರ್ಟ್. 24 ಗಂಟೆಗಳಲ್ಲಿ 204.5 ಮಿಮೀ ಮೀರುವ ಅತಿ ಹೆಚ್ಚು ಮಳೆಯನ್ನು ಈ ಬಣ್ಣ ಸೂಚಿಸುತ್ತದೆ. ಇದು ಜನಜೀವನ, ಆಸ್ತಿ-ಪಾಸ್ತಿಗೆ ಭಾರೀ ಹಾನಿಯನ್ನು ಉಂಟು ಮಾಡುವ ಸೂಚನೆಯಾಗಿದ್ದು, ಭಾರೀ ಮಳೆಯಿಂದ ಪ್ರವಾಹ ಸೃಷ್ಟಿಯಾಗುವ ಮುನ್ಸೂಚನೆ ನೀಡುತ್ತದೆ. ಅಗತ್ಯಬಿದ್ದರೆ ಜನರನ್ನು ಆ ಪ್ರದೇಶದಿಂದ ಸ್ಥಳಾಂತರಿಸುವ ಆದೇಶಗಳನ್ನು ಇದು ಒತ್ತಿ ಹೇಳುತ್ತದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net