

ನವದೆಹಲಿ: ನಿನ್ನೆ (ಅ.31) ನಡೆದ ಐಪಿಎಲ್ ರಿಟೆನ್ಶನ್ ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ (RCB) ಮುಖವಾಣಿ ಆಗಿರುವ ವಿರಾಟ್ ಕೊಹ್ಲಿಯನ್ನು 21 ಕೋಟಿ ರೂ.ಗೆ ಫ್ರಾಂಚೈಸಿ ಉಳಿಸಿಕೊಂಡಿದೆ. ಇದು ಆರ್ಸಿಬಿ ಅಭಿಮಾನಿಗಳ ಅತೀವ ಸಂತಸಕ್ಕೆ ಕಾರಣವಾಗಿದ್ದು, ಕ್ಯಾಪ್ಟನ್ ಆಗಿ ‘ರನ್ ಮಷಿನ್’ ಅವರನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಜಾಲತಾಣಗಳ ಮುಖೇನ ಫ್ಯಾನ್ಸ್ ಟೀಮ್ ಮ್ಯಾನೇಜ್ಮೆಂಟ್ಗೆ ಒತ್ತಾಯಿಸಿದ್ದಾರೆ. ಆದ್ರೆ, ಈ ವಿಷಯದಲ್ಲಿ ಮಾತ್ರ ಇಲ್ಲಿಯವರೆಗೆ ಫ್ರಾಂಚೈಸಿ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದು ಅಭಿಮಾನಿಗಳಲ್ಲಿ ದೊಡ್ಡ ಗೊಂದಲ ಸೃಷ್ಟಿಸಿತ್ತು. ಇತ್ತ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡು ಪ್ಲೆಸಿಸ್ರನ್ನು ಆಕ್ಷನ್ಗೆ ದೂಡುವ ಮೂಲಕ ತಂಡದಿಂದ ಕೈಬಿಟ್ಟಿರುವ ಆರ್ಸಿಬಿ, ಹರಾಜಿನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ರನ್ನು ಆಯ್ಕೆ ಮಾಡಿಕೊಳ್ಳಲು ಎದುರುನೋಡುತ್ತಿದೆ.
ಕಳೆದ ಸೀಸನ್ನಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಆಡಿದ ಆರ್ಸಿಬಿ ತಂಡಕ್ಕೆ ಆರಂಭಿಕ ಹಂತದಲ್ಲಿಯೇ ಹೀನಾಯ ಸೋಲು ದೊರಕಿದ್ದು, ಆವೃತ್ತಿಯ ದ್ವಿತೀಯಾರ್ಧದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಪ್ಲೇಆಫ್ ಹಂತಕ್ಕೆ ಎಂಟ್ರಿ ಕೊಟ್ಟಿತು. ಇಷ್ಟಾದರೂ ಸಹ ಎಂದಿನಂತೆ ಲೀಗ್ನಿಂದ ಹೊರಗುಳಿಯುವ ಮುಖೇನ ಅಭಿಮಾನಿಗಳ 'ಈ ಸಲ ಕಪ್ ನಮ್ದೆ' ಎಂಬ ಕನಸು ಕನಸಾಗಿಯೇ ಉಳಿಯಿತು. ಇನ್ನು 17ನೇ ಸೀಸನ್ ಮುಕ್ತಾಯಗೊಂಡ ದಿನದಿಂದಲೂ ಫ್ಯಾನ್ಸ್ ವಿರಾಟ್ರನ್ನೇ ತಂಡದ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿಕೊಳ್ಳಿ. ಅವರ ನಾಯಕತ್ವವೇ ಉತ್ತಮ ಎಂದು ವ್ಯಾಪಕ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ಅನಿಸಿಕೆಯನ್ನು ರಿಟೆನ್ಶನ್ ಪ್ರಕ್ರಿಯೆಗೂ ಹಿಂದಿನಿಂದಲೇ ಫ್ಯಾನ್ಸ್ ಟೀಮ್ ಮ್ಯಾನೇಜ್ಮೆಂಟ್ಗೆ ಒತ್ತಾಯಿಸಿದ್ದರು. ಆದರೆ, ಇಷ್ಟು ದಿನ ಇದಕ್ಕೆ ಪ್ರತಿಕ್ರಿಯಿಸದ ಫ್ರಾಂಚೈಸಿ, ಇದೀಗ ಕಡೆಗೂ ಮೌನ ಮುರಿದಿದೆ.
ಈ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಕ್ರಿಕೆಟ್ ನಿರ್ದೇಶಕರಾದ ಮೊ ಬೊಬಾಟ್ ಅವರು ಮಾತನಾಡಿ, "ವಿರಾಟ್ ಕೊಹ್ಲಿಯನ್ನು ಕ್ಯಾಪ್ಟನ್ ಆಗಿ ಮಾಡುವ ಕುರಿತು ಫ್ರಾಂಚೈಸಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಬಹಳ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಶೆಗೊಳಿಸಿದ್ದಕ್ಕೆ ನನಗೆ ವಿಷಾದವಿದೆ. ನಾವು ಇನ್ನೂ ಆಯ್ಕೆಗಳಿಗೆ ಮುಕ್ತರಾಗಿದ್ದೇವೆ. ಫಾಫ್ ಅನ್ನು ಉಳಿಸಿಕೊಳ್ಳದಿರಲು ಮೊದಲೇ ನಿರ್ಧರಿಸಲಾಗಿತ್ತು. ಅದರಂತೆಯೇ ಅವರನ್ನು ಕೈಬಿಟ್ಟಿದ್ದೇವೆ. ಸದ್ಯ ಹರಾಜಿನತ್ತ ಮುಖ ಮಾಡಿದ್ದು, ಅತ್ಯುತ್ತಮ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎದುರುನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).